ಒಕ್ಕಣಿಕೆ ಇಲ್ಲದ ಈ ಪತ್ರಕ್ಕೆ ಎದೆಯೊಳಗಿನ ನೆನಪುಗಳ ಶಾಯಿಯಿಂದಲೇ ಮೆರಗು ಕೊಡಲು ಬಯಸಿದ್ದೇನೆ. ಲೋಕಕ್ಕೆಲ್ಲಾ ಪ್ರೇಮಿಗಳ ದಿನ ವರ್ಷಕ್ಕೊಂದು ಬಾರಿ ಬಂದರೆ, ನನಗೆ ನಿನಗೆ ನಿತ್ಯವೂ ಪ್ರೇಮಿಗಳ ದಿನವೇ! ನಿತ್ಯ ಪ್ರೀತಿಸುವ ಜೀವದೊಂದಿಗೆ ಬದುಕಿನ ದಾರಿಯನ್ನು ಮತ್ತೂಮ್ಮೆ ಸವಿಯುವ ಕಾತುರ ನನ್ನದು. ಈ ಕಾತುರಕ್ಕೆ ನಿನ್ನ ಸಮ್ಮತಿಯಿದೆ ತಾನೇ?
ನೆನಪಿದೆಯಾ, ನಮ್ಮ ಪ್ರೀತಿಯ ತೇರು ಹೊರಟು ಇಂದಿಗೆ ಹತ್ತು ವರ್ಷ ಸಂದಿವೆ. ನಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿದ ಮೇಲೆ ನಡೆದ ಮದುವೆಯಲ್ಲಿ ನಾನು ನೀನೂ ಜೊತೆಯಾದೆವು. ಜೊತೆಗೆ ಇದ್ದಿದ್ದಾದರೂ ಎಷ್ಟು ದಿನ? ಇರುವುದರಲ್ಲೇ ನೀ ಪಟ್ಟ ಸಂತಸವೆಷ್ಟು, ಕುಣಿದಾಡಿದ್ದೆಷ್ಟು, ಕನಸು ಕಟ್ಟಿದ್ದೆಷ್ಟು… ನಾನು ಲೆಕ್ಕವಿಟ್ಟಿಲ್ಲ! ಆದರೆ, ಆ ದೇವರ ಲೆಕ್ಕದಲ್ಲಿ ನನ್ನ-ನಿನ್ನ ಜಂಟಿ ಖಾತೆ ರದ್ದಾಯಿತು. ಸಾವು ಎಂಬ ವಿಧಿಯಾಟ ನಿನ್ನ ಪಾತ್ರಕ್ಕೆ ಪೂರ್ಣ ವಿರಾಮವನ್ನಿಟ್ಟಿತು. ನಾನು ನಿನ್ನ ನೆನಪುಗಳ ಖಜಾನೆಯ ಚಾಲ್ತಿ ಖಾತೆಯಲ್ಲಿ ಜಮಾ ಆದೆ, ಇದ್ದೂ ಇಲ್ಲದಂತೆ..
ನೀನು ನೆನಪಿನ ಸುಳಿಯಲ್ಲಿ ಜಾರಿದ ಆ ಕ್ಷಣ, ಹಳೆಯ ದಿನಗಳು ನೆನಪಾದವು. ಅದೇ, ನಾನೂ ನೀನು ಗುಟ್ಟಾಗಿ ಪ್ರೀತಿಸುತ್ತಿದ್ದ ದಿನಗಳು… ಪ್ರೀತಿಯ ಆ ಹಾದಿಯಲ್ಲಿ ನಡೆಯುವಾಗ ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ವಯಸ್ಸಿನ ಗಡಿರೇಖೆಯನ್ನು ದಾಟಿ, ತಪ್ಪು ಮಾಡುವ ಅವಕಾಶವಿದ್ದರೂ ನಾವು ಅದನ್ನು ಬಳಸಿಕೊಳ್ಳಲಿಲ್ಲ. ಹಲವಾರು ಸಾರಿ ಮುನಿಸು, ಕೋಪ ತಾಪ ಪ್ರೀತಿಯ ಖಾತೆಯಲ್ಲಿ ಜಮಾ ಮತ್ತು ಹಿಂತಗೆತ ಆಗುತ್ತಲೇ ಇತ್ತು. ಪ್ರತಿ ಹುಟ್ಟು ಹಬ್ಬಕ್ಕೆ ಉಡುಗರೆ ರೂಪದಲ್ಲಿ ನಿನ್ನ ನೆಚ್ಚಿನ ಲೇಖಕನ ಪುಸ್ತಕದ ವಿನಿಮಯ ತಪ್ಪುತ್ತಿರಲಿಲ್ಲ. ಈ ವಿಷಯ ನಿಮ್ಮ ಮನೆಯಲ್ಲಿ ತಿಳಿದಿದ್ದರೂ ಯಾವ ಅಡೆ ತಡೆ ಇರಲಿಲ್ಲ. ಅದು ಅವರು ನಮ್ಮ ಮೇಲೆ ಇಟ್ಟ ನಂಬಿಕಯ ಕುರುಹಾಗಿತ್ತು.
ಒಂದು ದೊಡ್ಡ ಜಗಳದ ದಿನ ಇಂಥ ಮಧುರ ಪ್ರೀತಿಗೆ ಯಾವ ಕಾಕ ದೃಷ್ಟಿ ತಾಗಿತೋ ನಮ್ಮಿಬ್ಬರ ಮನಸ್ಸೂ ಬದಲಾಯಿತು. ಅಪ್ಪಟ ಪ್ರೀತಿಗೆ ಗ್ರಹಣ ಬಡಿಯಿತು. ಅಂದಿನಿಂದ ನಮ್ಮ ಸಂಬಂಧದ ಅವಸಾನದ ಕಾಲ ಪ್ರಾರಂಭವಾಯಿತು. ಭರ್ತಿ ಎರಡು ವರುಷ ವಿರಹದಲ್ಲಿ ಬೆಂದ ನಾವಿಬ್ಬರೂ, ಪ್ರೀತಿಯಲ್ಲಿ ಪುಟಕ್ಕಿಟ್ಟ ಬಂಗಾರವಾದೆವು. ಮತ್ತೆ ಹಳಿ ಹಿಡಿದ ನಮ್ಮ ಪ್ರೀತಿಯ ಬಂಡಿಯು ಮದುವೆಯ ನಿಲ್ದಾಣವನ್ನು ದಾಟಿ ಮುಂದೆ ಸಾಗಿತು. ನಿಜ ಹೇಳಬೇಕೆಂದರೆ ನಾನೇ ಪಾಪಿ, ನೀನೇ ಪುಣ್ಯವಂತೆ.
ನೀನಿಲ್ಲದೆ ಬದುಕುವ ಶಿಕ್ಷೆಯನ್ನು ಆ ದೇವರು ನನಗೆ ನೀಡಿಬಿಟ್ಟ. ನಮ್ಮ ಪ್ರೇಮದ ಕಾಣಿಕೆಯಾದ ಎರಡು ಮುತ್ತುಗಳ ಜೊತೆಗೆ ಆಟವಾಡುತ್ತಾ ಸಂಜೆಯ ಬಾನಿನ ನಕ್ಷತ್ರಗಳ ನಡುವೆ ನಿನ್ನನ್ನು ತೋರಿಸುತ್ತಾ- ಸತ್ತವರು ನಕ್ಷತ್ರವಾಗ್ತಾರಂತೆ. ನಿಮ್ಮ ಅಮ್ಮನೂ ಆ ಹೊಳಪಿನ ನಕ್ಷತ್ರದಲ್ಲಿ ಒಬ್ಬಳು ಎಂದು ಕತೆ ಕಟ್ಟುತ್ತೇನೆ. ಇದು ಕತೆಯಾದರೂ ಮನಸಿಗೆ ಮುದವಿದೆ. ಆದರೆ, ಆ ಮುದ್ದು ಮಕ್ಕಳು ಕೇಳುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಆದರೂ ನನ್ನ, ಅವರ ಸಮಾಧಾನಕ್ಕೆ ನಿನ್ನ ನೆಚ್ಚಿನ ಅರಮನೆಯ ಅಂಗಳದಲ್ಲಿ ಕುಳಿತು ಆ ದೇವರ ಹೆಸರಿಗೆ ಈ ಪತ್ರ ಬರೆಯುತ್ತಿದ್ದೇನೆ. ಇದನ್ನೇ ನನ್ನ ಪ್ರೇಮ ಪತ್ರ ಎಂದುಕೊಂಡು ಉತ್ತರ ಬರಿ. ಮುದ್ದು ನಕ್ಷತ್ರಗಳ ಜೊತೆ ನಾನೂ ಕಾಯುತ್ತಿರುತ್ತೇನೆ, ನಿನ್ನ ಪತ್ರಕ್ಕಾಗಿ.
ಇಂತಿ ನಿನ್ನವ, ದುಃಖದೂರಿನ ಚಂದಿರ
ಪ್ರವೀಣ ಕುಮಾರ ಗುಳೇದಗುಡ್ಡ