ಡಾ. ಪಿ.ವಿ ಹೆಗಡೆ ತಮ್ಮ ತೋಟದಲ್ಲಿ ಪ್ರಯೋಗ ಮಾಡಿ ಗೆದ್ದಿದ್ದೇ ಉದಾಹರಣೆ.
Advertisement
ಪ್ರಾಚೀನ ಭಾರತೀಯರು ಉಪಕಾರಿ-ಅಪಕಾರಿ ಕೀಟ, ಪ್ರಾಣಿಗಳ ಬಗ್ಗೆ ಅನೇಕ ಜಾನಪದ ಕಥೆಗಳನ್ನು ಸೃಷ್ಟಿಸಿದ್ದಾರೆ. ಪ್ರಾಚೀನ ಗ್ರೀಕ್ ಸಮುದಾಯದವರೂ ಇದಕ್ಕೆ ಹೊರತಲ್ಲ. ಇದೆಲ್ಲ ಬಿಡಿ, ಜೇಡದಿಂದ ಕೃಷಿಕಾರ್ಯಕ್ಕೆ ಅಪಾರ ಅನುಕೂಲಗಳಿವೆ. ಇದನ್ನು ಅರ್ಥಮಾಡಿಕೊಂಡಿದ್ದ ಪ್ರಾಚೀನ ಏಷಿಯನ್ನರು ಹೊಲ-ಗದ್ದೆ-ತೋಟಗಳಲ್ಲಿರುವ ಜೇಡಗಳನ್ನು ಕೊಲ್ಲುತ್ತಿರಲಿಲ್ಲ. ಇವುಗಳ ಚಟುವಟಿಕೆಗೆ ಯಾವುದೇ ಅಡ್ಡಿಯುಂಟಾಗದಂತೆ ಎಚ್ಚರ ವಹಿಸುತ್ತಿದ್ದರು. ಏಕೆಂದರೆ, ಇವುಗಳು ಬೆಳೆಗಳಿಗೆ ತೀವ್ರ ಹಾನಿಯುಂಟು ಮಾಡುವ ಕೀಟಗಳನ್ನು ಭಕ್ಷಿಸಿ, ಬೆಳೆಗಳನ್ನು ಸಂರಕ್ಷಿಸುತ್ತಿದ್ದವು. ಇದರಿಂದ ಕೃಷಿಕರು ಸಮೃದ್ಧವಾಗಿ ಬೆಳೆದ ಬೆಳೆಯನ್ನು ಕೊಯ್ಲುಮಾಡಿ ನೆಮ್ಮದಿಯಿಂದ ಮನೆಗೆ ಸಾಗಿಸಲು ಅನುಕೂಲವಾಗುತ್ತಿತ್ತು.
Related Articles
Advertisement
ಇತಿಹಾಸ ಕೆದಕಿದರೆ ಬೆಳೆಗಳಿಗೆ ಹಾನಿಯುಂಟು ಮಾಡುವ ಕೀಟಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಜೇಡಗಳನ್ನು ಅವಲಂಬಿಸುವಿಕೆ ತಲೆತಲೆಮಾರುಗಳಿಂದಲೂ ಜಾರಿಯಲ್ಲಿದೆ ಎಂಬ ಸಂಗತಿ ಅರಿವಾಗುತ್ತದೆ. ಜೇಡಗಳ ಚಟುವಟಿಕೆ ಎಷ್ಟು ವಿಪುಲವಾಗಿದೆ ಎಂದರೆ, ಕಾಂಡಕೊರಕ, ಸುಳಿಕೊರಕಗಳ ಬಾಧೆಗೆ ತುತ್ತಾದ ಒಂದೇ ಒಂದು ಭತ್ತದ ಪೈರೂ ಅಲ್ಲಿ ಕಾಣಸಿಗುವುದಿಲ್ಲ. ಆಫ್ರಿಕಾದ ತೋಟಗಾರರು ವಿವಿಧ ಹಣ್ಣಿನ ಬೆಳೆಗಳನ್ನು ಬಾಧಿಸುವ ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಜೇಡಗಳ ಚಟುವಟಿಕೆಗಳನ್ನೆಲ್ಲ ಅವಲಂಬಿಸಿದ್ದಾರೆ. ಸಹಜವಾಗಿ ಇಲ್ಲೆಲ್ಲ ಬಹು ವಿಸ್ತಾರವಾದ ಜೇಡದ ಬಲೆಗಳು ಕಾಣುತ್ತವೆ. ಜೇಡಗಳು ನಿರಾತಂಕವಾಗಿ ಸಂಚರಿಸುತ್ತಿರುತ್ತವೆ. ಇಲ್ಲಿನ ಮಕ್ಕಳು ಹುಡುಗಾಟಿಕೆಯಿಂದ ಜೇಡಗಳ ಬಲೆಗೆ ಹಾನಿ ಉಂಟು ಮಾಡಿದರೆ ಹಿರಿಯರು ಕರೆದು ತಿಳಿವಳಿಕೆ ಹೇಳುತ್ತಾರೆ.
ನಮ್ಮ ಆದಿವಾಸಿಗಳೆಲ್ಲರೂ ತಾವು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದಿಲ್ಲ. ಹಾಗೆ ಮಾಡಿದರೆ ಭೂತಾಯಿ ಸಿಟ್ಟಾಗುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ. ಇಂಥ ನಂಬಿಕೆ ಉಳಿದ ಪ್ರದೇಶಗಳಲ್ಲಿ ಕಣ್ಮರೆಯಾಗಿರುವುದು ವಿಷಾದನೀಯವೇ. ಆದರೆ, ಹೆಗಡೆ ಅವರು ಹೇಳುವಂತೆ ಇದನ್ನು ಎಲ್ಲ ರೈತರೂ ಪ್ರಯೋಗ ಮಾಡಿದರೆ ಸಮಸ್ಯೆಯ ತೀವ್ರತೆ ಕಡಿಮೆ ಆಗುತ್ತದಂತೆ.
– ಕುಮಾರ ರೈತ