Advertisement
ಬೆರಳ ಮೇಲೆ ಕನ್ನಡಿಪುಟ್ಟದೊಂದು ಕೈಗನ್ನಡಿಗೆ ಹೂವಿನ ಆಕೃತಿಯ ಅಲಂಕಾರದಿಂದ ಸಿಂಗಾರಗೊಳಿಸಿ, ಬೆಸುಗೆಯ ಮೂಲಕ ಉಂಗುರಕ್ಕೆ ಜೋಡಿಸಲಾಗುತ್ತದೆ. ಇದನ್ನು ತೊಟ್ಟರೆ ಕೈ ಅಂದವಾಗಿ ಕಾಣಿಸುವುದಲ್ಲದೆ, ಕೈಗನ್ನಡಿಯಿಂದ ಮುಖ ನೋಡಿಕೊಳ್ಳಲೂ ಉಪಯೋಗವಾಗುತ್ತದೆ. ಇಂಥ ಉಂಗುರಗಳಲ್ಲಿ, ಅರ್ಧ ಚಂದ್ರ, ಕಮಲ, ಸೂರ್ಯಕಾಂತಿ, ಗುಲಾಬಿ, ನಕ್ಷತ್ರ, ಹೃದಯಾಕಾರ, ಸೂರ್ಯ, ಜಾಮೆಟ್ರಿಕ್ (ಜ್ಯಾಮಿತಿಯ) ಡಿಸೈನ್ ಮತ್ತಿತರ ವಿನ್ಯಾಸಗಳ ಆಯ್ಕೆಯೂ ಲಭ್ಯ ಇವೆ.
ಈ “ಮಿರರ್ ರಿಂಗ್’ಗೆ ನಿರ್ದಿಷ್ಟ ಆಕಾರ ಇರಲೇಬೇಕೆಂದಿಲ್ಲ. ನಿರ್ದಿಷ್ಟ ಬಣ್ಣವೂ ಇರಬೇಕೆಂದಿಲ್ಲ. ಮಧ್ಯದಲ್ಲಿ ಕನ್ನಡಿ ಬಳಸಿ, ಸುತ್ತಲೂ ಬಗೆಬಗೆಯ ಕಲ್ಲುಗಳು, ಹಕ್ಕಿ ಪುಕ್ಕ, ಬಣ್ಣ ಬಣ್ಣದ ನೂಲು, ನೇತಾಡುವ ಟ್ಯಾಸಲ್‌ಗಳು, ಪ್ಲಾಸ್ಟಿಕ್, ಮರದ ತುಂಡು, ಗಾಜು, ಗೆಜ್ಜೆಗಳು, ಮಣಿಗಳು, ಲೋಹಗಳು ಮತ್ತು ಆಕೃತಿಗಳನ್ನು ಬಳಸಿದ ಉಂಗುರಗಳೂ ಲಭ್ಯ. ಇವು ಚಿಕ್ಕದಾಗಿರಬಹುದು ಅಥವಾ ಅಂಗೈಗೆ ಅನುಗುಣವಾಗಿ ತುಂಬಾ ದೊಡ್ಡದಾಗಿಯೂ ಇರಬಹುದು. ಇವು ಹೇಗೆ ಇದ್ದರೂ ಚೆನ್ನ! ಸಾಂಪ್ರದಾಯಿಕ ಮೆರುಗು
ಚಿನ್ನ ಅಥವಾ ಚಿನ್ನದ ಬಣ್ಣ ಹೋಲುವ, ತಾಮ್ರ, ಕಂಚು, ಹಿತ್ತಾಳೆ ಅಥವಾ ಇನ್ನಿತರ ಬಗೆಯ ಇಂಥ ಕನ್ನಡಿ ಉಂಗುರಗಳು, ರೇಷ್ಮೆ ಸೀರೆ, ಉದ್ದ ಲಂಗ, ಚೂಡಿದಾರ, ಲಂಗ ಧಾವಣಿ, ಸಲ್ವಾರ್ ಕಮೀಜ್‌ನಂಥ ಸಾಂಪ್ರದಾಯಿಕ ಉಡುಗೆಗಳ ಜೊತೆ ಬಹಳ ಅಂದವಾಗಿ ಕಾಣುತ್ತವೆ. ಕುರ್ತಾ, ಸೆಮಿ ಫಾರ್ಮಲ್ಸ್, ಪಲಾಝೊ ಪ್ಯಾಂಟ್ಸ್, ಜಂಪ್ ಸೂಟ್ಸ್, ಲಾಂಗ್ ಸ್ಕರ್ಟ್, ಶಾರ್ಟ್ಸ್ ಮತ್ತು ಶರ್ಟ್ ಡ್ರೆಸ್ ಜೊತೆ ಚಿನ್ನ ಮಾತ್ರವಲ್ಲದೆ ಆಕ್ಸಿಡೈಸ್ಡ್ ಮೆಟಲ್, ಜರ್ಮನ್ ಸಿಲ್ವರ್, ವೈಟ್ ಮೆಟಲ್, ಪ್ಲಾಟಿನಂ, ಬೆಳ್ಳಿ ಅಥವಾ ಬೆಳ್ಳಿಯ ಬಣ್ಣಕ್ಕೆ ಹೋಲುವಂಥ ಲೋಹದಿಂದ ಮಾಡಿದ ಕನ್ನಡಿ ಉಂಗುರಗಳು ಚೆನ್ನಾಗಿ ಒಪ್ಪುತ್ತವೆ. ಸೀರೆಯ ಜೊತೆ ಇದನ್ನು ತೊಡುವಾಗ, ಸೀರೆಯ ಜರಿಯ ಬಣ್ಣಕ್ಕೆ ಒಪ್ಪುವಂಥ ಉಂಗುರವನ್ನು ತೊಡಿ. ಅಂದರೆ, ಜರಿಯು ಬೆಳ್ಳಿ ಬಣ್ಣದ್ದಾಗಿದ್ದರೆ, ಆ ಬಣ್ಣಕ್ಕೆ ಹೋಲುವ ಕನ್ನಡಿ ಉಂಗುರ ತೊಟ್ಟರಷ್ಟೇ ಚೆನ್ನ.
Related Articles
Advertisement
ಉಂಗುರಕ್ಕೆ ಮ್ಯಾಚ್ ಮಾಡಿ“ಕನ್ನಡಿ ಉಂಗುರ’ ಬಹಳ ದೊಡ್ಡದಾಗಿದ್ದರೆ, ಕೈಗೆ ಒಂದೇ ಉಂಗುರ ತೊಡಬೇಕು. ಪ್ರತಿ ಬೆರಳಿಗೂ ಇಂಥ ಒಂದೊಂದು ಉಂಗುರ ತೊಟ್ಟರೆ ಅಂದಗೆಡುತ್ತದೆ. ಎಲ್ಲರಿಗಿಂತ ನಾನೇ ಸ್ಟೈಲಿಶ್ ಆಗಿ ಕಾಣಬೇಕು ಎಂದು ಬಯಸುವವರು, ಈ ಉಂಗುರಕ್ಕೆ ಹೋಲುವಂಥ ಕಿವಿಯೋಲೆ, ಹಾರ/ ಸರದ ಪದಕ ಅಥವಾ ಬೊರ್ಲಾ/ ಮಾಂಗ್ ಟಿಕ್ಕಾ (ನೆತ್ತಿಯಿಂದ ಹಣೆಯವರೆಗೆ ನೇತಾಡುವ ಆಭರಣ) ತೊಡಬಹುದು. ನಿತ್ಯದ ಉಡುಗೆಯ ಜೊತೆಗೆ ಇಷ್ಟೆಲ್ಲವನ್ನು ಒಟ್ಟಿಗೇ ತೊಡಲು ಸಾಧ್ಯವಿಲ್ಲ. ಕಾಲೇಜು ಫೆಸ್ಟ್, ಮದುವೆ, ಹಬ್ಬ, ಪೂಜೆ, ಮುಂತಾದ ಸಮಾರಂಭಗಳಿಗಷ್ಟೇ ಹಾಕಿಕೊಂಡು ಹೋಗಬಹುದು. ಯಾವುದೇ ಅಲಂಕಾರ ಇಲ್ಲದ ಬೋಳು ಕನ್ನಡಿಯಷ್ಟೇ ಉಂಗುರವಾಗಿದ್ದರೆ ಅದನ್ನು ಸೂಟ್, ಬ್ಲೇಝರ್, ಶರ್ಟ್, ಸ್ಕರ್ಟ್‌ನಂಥ ಫಾರ್ಮಲ್ ಡ್ರೆಸ್‌ಗಳ ಜೊತೆಯೂ ತೊಡಬಹುದು. ಸದ್ದು ಮಾಡುವ ಉಂಗುರ
ಅಂಗೈಯಷ್ಟೇ ದೊಡ್ಡ ಮುದ್ರೆಯ ಕನ್ನಡಿ ಉಂಗುರಗಳು ಇದೀಗ ಕಾಲೇಜು ಯುವತಿಯರ ಬೆರಳಿನ ಮೇಲೆ ರಾರಾಜಿಸುತ್ತಿವೆ. ಉಂಗುರವು ಅಷ್ಟು ದೊಡ್ಡದಾಗಿದ್ದಾಗ, ಎಲ್ಲರ ಕಣ್ಣು ಅತ್ತ ಹೋಗದೆ ಇರುತ್ತದೆಯೇ? ಸಾಂಪ್ರದಾಯಿಕ ಅಥವಾ ಇಂಡಿಯನ್ ಉಡುಗೆ ಜೊತೆ ತೊಡುವ ಕನ್ನಡಿ ಉಂಗುರದಲ್ಲಿ, ಸದ್ದು ಮಾಡುವ ಗೆಜ್ಜೆ ಮಣಿಗಳು ಇದ್ದರಂತೂ, ಕ್ಯಾಂಪಸ್‌ನಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಸದ್ದು ಮಾಡಬಹುದು! -ಎಲ್ಲರ ಕಣ್ಸೆಳೆಯುವ ಕನ್ನಡಿ ಉಂಗುರ ತೊಟ್ಟಾಗ, ಉಗುರುಗಳು ಕೂಡಾ ಅಂದವಾಗಿ ಕಾಣಬೇಕು. ಉಂಗುರಕ್ಕೆ ಹೋಲುವ ಬಣ್ಣದ ನೇಲ್‌ಪಾಲಿಶ್ ಹಚ್ಚಿದರೆ ಚೆನ್ನ.
-ಉದ್ದ ಉಗುರಿಗೆ ಬಣ್ಣ ಹಚ್ಚದೆ, ಹಾಗೇ ಬಿಟ್ಟರೂ ಚೆನ್ನಾಗಿ ಕಾಣಿಸುತ್ತದೆ.
-ಎರಡೂ ಕೈಗಳಿಗೆ ಕನ್ನಡಿ ಉಂಗುರ ಧರಿಸಿದರೆ ನೋಡಲು ಚೆನ್ನಾಗಿರುವುದಿಲ್ಲ.
-ಫಾರ್ಮಲ್ ಡ್ರೆಸ್ ಜೊತೆಗೆ ತೊಡುವ ಕನ್ನಡಿ ಉಂಗುರಗಳು, ಆದಷ್ಟು ಸಿಂಪಲ್ ಆಗಿರಲಿ.
-ಹಕ್ಕಿಪುಕ್ಕ, ಬಣ್ಣದ ನೂಲು ಇರುವ ಉಂಗುರಗಳಿಗೆ ನೀರು ತಾಗದಂತೆ ಜೋಪಾನ ಮಾಡಿ. – ಅದಿತಿಮಾನಸ ಟಿ.ಎಸ್