Advertisement

ಆಡು ಸಾಕಿ ನೋಡು! ಹಟ್ಟಿ ಮಾದರಿಯ ಆಡು ಸಾಕಣೆ

08:26 PM Oct 06, 2019 | Sriram |

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿ ಕಜೆಯ ರಾಮ್‌ಕಿಶೋರ್‌ರವರು ಹಟ್ಟಿ ಮಾದರಿಯ ಆಡು ಸಾಕಣೆ ವಿಧಾನವನ್ನು ಅನುಸರಿಸಿ ಲಾಭ ಗಳಿಸುತ್ತಿದ್ದಾರೆ.

Advertisement

ಆಡು ಸಾಕಣೆ ಎಂದಾಗ ತಕ್ಷಣ ನೆನಪಿಗೆ ಬರುವುದು ಕಂಗಿನ ಸಲಗೆಗಳಿಂದ ನಿರ್ಮಿತ ಪುಟ್ಟ ಗೂಡು. ಅದರಲ್ಲಿ ಕೂಡಿ ಹಾಕಿದ ಹತ್ತಿಪ್ಪತ್ತು ಆಡಿನ ಮರಿಗಳು ಅಥವಾ ಮಣ್ಣಿನಿಂದ ಕಟ್ಟಿದ ಚೌಕಾಕಾರದ ಗೂಡು. ಅದರಲ್ಲೇ ಆಡುಗಳ ವಾಸ. ಪರಿಣಾಮ, ಆಡುಸಾಕಣೆ ಎಷ್ಟೋ ರೈತರ ಪಾಲಿಗೆ ನಷ್ಟವನ್ನುಂಟು ಮಾಡಿದ್ದೂ ಇದೆ. ಆಡು ಸಾಕುವುದು ಅಷ್ಟು ಸುಲಭದ ಕೆಲಸವಲ್ಲ. ಅದರ ಕುರಿತು ಕಾಳಜಿಯೂ ಇರಬೇಕಾದುದು ಅತೀ ಮುಖ್ಯ. ಸ್ವಚ್ಚತೆಗೂ ಅಲ್ಲಿ ಆದ್ಯತೆ ಇರಲೇಬೇಕು. ಇಲ್ಲವಾದರೆ, ಆಡಿನಿಂದ ಆದಾಯ ಪಡೆಯುವುದು ಕಷ್ಟಸಾಧ್ಯದ ಮಾತೇ ಸರಿ.ಆದರೆ ಇವೆಲ್ಲಕ್ಕಿಂತ ಭಿನ್ನ, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿ ಕಜೆಯ ರಾಮ್‌ಕಿಶೋರ್‌ರವರ ಹಟ್ಟಿ ಮಾದರಿಯ ಆಡು ಸಾಕಣೆ ವಿಧಾನ.

ಏನಿದು ಹಟ್ಟಿ ಮಾದರಿ ಆಡು ಸಾಕಣೆ?
ಕಳೆದ ನಾಲ್ಕೈದು ವರ್ಷಗಳಿಂದ ಬಡಗರ ಮತ್ತು ಮಲ್‌ಬಾರ್‌ ಜಾತಿಯ ಆಡುಗಳನ್ನು ಸಾಕುತ್ತಿರುವ ಕಿಶೋರ್‌, ಎಂ.ಎಸ್ಸಿ ಅಗ್ರಿಕಲ್ಚರ್‌ ಪದವೀಧರರು. ಬರೋಬ್ಬರಿ 75,000 ರೂ. ತೊಡಗಿಸಿ ಸರಿಸುಮಾರು ನೆಲದಿಂದ ಏಳು ಅಡಿ ಎತ್ತರದಲ್ಲಿ ಕಲ್ಲಿನ ಕುಂದಗಳನ್ನು ನಿರ್ಮಿಸಿ, ಅದರ ಮೇಲ್ಮೆ„ಯನ್ನು ಈಚಲು ಮರದ ತುಂಡಿನಿಂದ ಜೋಡಿಸಿದ್ದಾರೆ. ಮಳೆ ಮತ್ತು ಸುಡುಬಿಸಿಲಿನಿಂದ ರಕ್ಷಣೆ ನೀಡಲು ಸಿಮೆಂಟ್‌ ಸೀಟನ್ನು ಹಾಕಲಾಗಿದೆ. ಈ ವಿಧಾನದಿಂದಾಗಿ ಆಡು ಹಾಕುವ ಹಿಕ್ಕೆ ಏಳು ಅಡಿ ಕೆಳಗಿರುವ ಗುಂಡಿಗೆ ಸೇರುತ್ತದೆ. ಗೂಡು ಕೂಡ ನೋಡಲು ತುಂಬಾ ಸ್ವತ್ಛವಾಗಿರುತ್ತದೆ. ಆಡುಗಳಿಗೆ ಮೇವು ನೀಡುವಾಗ ಅವುಗಳು ಗುದ್ದಾಡುವುದನ್ನು ತಪ್ಪಿಸುವ ಸಲುವಾಗಿ ಎರಡು ಮೂರು ಅಂಕಣಗಳನ್ನು ನಿರ್ಮಿಸಿದ್ದಾರೆ. ಅವುಗಳು ಹಾಯಾಗಿ ತಿನ್ನುವುದಕ್ಕಾಗಿ ಸಿಮೆಂಟ್‌ನಿಂದ ದಂಡೆಗಳನ್ನು ರಚಿಸಲಾಗಿದೆ. ಇದು, ದನದ ಹಟ್ಟಿಯ ಆಕಾರವನ್ನೇ ಹೋಲುತ್ತಿದ್ದರೂ ಇಲ್ಲಿ ನೆಲಕ್ಕೆ ಸಿಮೆಂಟ್‌ ಅಥವಾ ಕಲ್ಲನ್ನು ಜೋಡಿಸಿಲ್ಲ. ಬದಲಾಗಿ, ಸಂಪೂರ್ಣ ಈಚಲು ಮರದ ಕಂಬಗಳನ್ನು ಜೋಡಿಸಲಾಗಿದೆ.

ಗೊಬ್ಬರ ಉತ್ಪಾದನೆಯೇ ಉದ್ದೇಶ
ಪೆರುವಾಜೆ ಈಶ್ವರ ಭಟ್‌, ಬ್ರಹ್ಮಾವರದ ನಡೂರ್‌ ಪಾರ್ಮ್ನ ಯಶಸ್ಸಿನ ಪೇರಣೆಯಿಂದ, ಹತ್ತು ಆಡಿನಿಂದ ಆರಂಭವಾದ ಕಾಯಕ ಇಂದು 40 ದಾಟಿದೆ. ಆಡಿನ ಗೊಬ್ಬರದೊಂದಿಗೆ ಮಾರಾಟಕ್ಕೂ ಗಂಡು ಆಡುಗಳು ಲಭ್ಯ. ಗಂಡು ಆಡನ್ನು ಜೀವಂತವಾಗಿ ತೂಗಿ ಕೆ.ಜಿ.ಗೆ 175- 200 ರೂ.ನಂತೆ ಮಾರಾಟ ಮಾಡುತ್ತಾರೆ. ಸಂತಾನಾಭಿವೃದ್ಧಿಯ ದೃಷ್ಟಿಯಿಂದ ಹೆಣ್ಣು ಆಡುಗಳನ್ನು, ಮರಿಗಳನ್ನು ಇವರು ಮಾರಾಟ ಮಾಡುವುದಿಲ್ಲ. ಸಂಪೂರ್ಣ ಸಾವಯವ ಕೃಷಿಯನ್ನೇ ಅವಲಂಬಿಸಿರುವ ಕಿಶೋರ್‌, ಮುಖ್ಯವಾಗಿ ಗೊಬ್ಬರ ಉತ್ಪಾದನೆಗಾಗಿ ಆಡುಗಳನ್ನು ಸಾಕುತ್ತಿದ್ದಾರೆ. ಒಂದು ಆಡಿನಿಂದ ದಿನಕ್ಕೆ ಒಂದು ಕೆ.ಜಿ ಗೊಬ್ಬರ ಸಿಗುತ್ತದೆ. 40 ಆಡುಗಳು ವರ್ಷಕ್ಕೆ 14,600 ಕೆ.ಜಿ.ಗೊಬ್ಬರ ನೀಡುತ್ತವೆ. ಮಾರುಕಟ್ಟೆಯಿಂದ ಇಷ್ಟು ಪ್ರಮಾಣದ ಆಡಿನ ಗೊಬ್ಬರ ಖರೀದಿಸುವುದಾದರೆ ಕೆ.ಜಿ.ಗೆ ರೂ.5 ರಂತೆ 73 ಸಾವಿರ ರೂಪಾಯಿ ಬೇಕು. ಇನ್ನು ಸಾಗಾಟ ವೆಚ್ಚವನ್ನು ಪ್ರತ್ಯೇಕವಾಗಿ ಭರಿಸಬೇಕು. ಕಲಬೆರಕೆಗಳಿಗೆ ನಾವೇ ಜವಾಬ್ದಾರರಾಗಬೇಕು. 40 ಆಡುಗಳಿಗೆ ಒಂದು ದಿನಕ್ಕೆ ಅಬ್ಬಬ್ಟಾ ಅಂದರೆ ಆಹಾರ (ನೆಲಗಡಲೆ, ಜೋಳ, ಗೋಧಿ, ಬೂಸ ಮಿಶ್ರಣ, ಹಸಿರು ಹುಲ್ಲು) ಎಲ್ಲಾ ಸೇರಿ 80ರಿಂದ 90 ರೂಪಾಯಿ ಖರ್ಚಾಗುತ್ತದೆ.

ಆಡು ಸಾಕುವವರಿಗೆ ಕಿವಿಮಾತು
ಆಡು ಸಾಕುವ ಹಟ್ಟಿ, ಪೂರ್ವ- ಪಶ್ಚಿಮವಾಗಿ ಉದ್ದವಾಗಿದ್ದು ದಕ್ಷಿಣದ ಕಡೆಯಿಂದ ಹಟ್ಟಿ ಒಳಗೆ ಬಿಸಿಲು ಬೀಳಬೇಕು. ಸಂತಾನಾಭಿವೃದ್ಧಿಯ ದೃಷ್ಟಿಯಿಂದ 25 ಹೆಣ್ಣು ಆಡಿಗೆ ಒಂದು ಗಂಡು ಆಡು ಬೇಕು. ಆಡಿನ ಹಾಲನ್ನು ಬಳಸಬಹುದು. ಆದರೆ ಹಾಲು ಕರೆದರೆ ಮರಿಗಳ ಬೆಳವಣಿಗೆ ಕುಂಠಿತವಾಗುತ್ತದೆಯಂತೆ. ಇನ್ನು ಗಬ್ಬ ಧರಿಸಿದ ಆಡನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ ಮರಿ ಹಾಕಿದ ಕೆಲದಿನಗಳ ಕಾಲ ಚೆನ್ನಾಗಿ ಆರೈಕೆ ಮಾಡಿದರೆ ಒಳ್ಳೆಯದು. ಆಡಿನ ಹಿಕ್ಕೆ ಉತ್ತಮ ಗೊಬ್ಬರ ಕೂಡಾ. ಇದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಜೊತೆ ಉಪ ಉದ್ಯಮವಾಗಿ ಆಡು ಸಾಕಣೆಯಲ್ಲಿ ತೊಡಗಿದರೆ, ಆಡು ಸಾಕಣೆ ಲಾಭದಾಯಕವಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ.

Advertisement

ರಿಸ್ಕ್ ಕಡಿಮೆ
ದನ ಸಾಕಣೆಗೆ ಹೋಲಿಸಿದರೆ ಆಡು ಸಾಕಣೆಗೆ ಸಣ್ಣ ಗಾತ್ರದ ಕೊಟ್ಟಿಗೆ ಸಾಕು ಎನ್ನುವ ಕಿಶೋರ್‌ರವರ ಅನುಭವದಲ್ಲಿ ಆಡು ಸಾಕಣೆಯಲ್ಲಿ ರಿಸ್ಕ್ ಕಡಿಮೆ. ಇವರು ಈವರೆಗೆ 50 ಆಡುಗಳನ್ನು ಮಾತ್ರ ಮಾರಿದ್ದಾರೆ. ಒಂದು ಗಂಡು ಆಡು ಒಂದು ವರ್ಷದಲ್ಲಿ, ಹದಿನೈದು ಕೆ.ಜಿ. ತೂಗಬಲ್ಲದು. ಆಡು ಮಾರಾಟದಿಂದ, ಅವನ್ನು ಸಾಕುವುದಕ್ಕಾಗಿ ಮಾಡಿದ ಖರ್ಚು ಬರುತ್ತದೆ. ಇನ್ನು ಅವುಗಳು ನೀಡಿದ ಹಿಕ್ಕೆ ಸಂಪೂರ್ಣ ಲಾಭವೇ. 40 ಆಡುಗಳಿಂದ ಒಂದು ವರ್ಷದಲ್ಲಿ 73,000 ರೂ ಲಾಭ ಗಳಿಸಲು ಸಾಧ್ಯ ಎನ್ನುತ್ತಾರೆ ಕಿಶೋರ್‌.

-ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next