ಬೆಳಗಾವಿ: ಅನಾಥ ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಹಿರಿಯರ ಮಾರ್ಗದರ್ಶನದಲ್ಲಿ ದೇಶಕ್ಕೆ ನೀವು ಸಾಧನೆ ಮಾಡಿ ತೋರಿಸಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ ಅಂಗವಾಗಿ ಕಂಗ್ರಾಳಿಯ ರಾಮನಗರದ ಸಮೃದ್ಧಿ ಅನಾಥಾಲಯಕ್ಕೆ ಮಂಗಳವಾರ ಭೇಟಿ ನೀಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿರುವ ಮಕ್ಕಳಿಗೆ ಯಾರೂ ಅನಾಥರಲ್ಲ ಎನ್ನುವ ಹಾಗೆ ಇಲ್ಲಿನ ಆಶ್ರಮ ನೋಡಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ನೀವು ಅನಾಥರು ಎಂದು ಭಾವಿಸಬೇಡಿ ನಿಮ್ಮೊಂದಿಗೆ ಇಡೀ ಸಮಾಜ ಜತೆಯಾಗಿರುತ್ತದೆ. ನಿಮ್ಮ ಮುಂದಿನ ಕನಸಿನ ಬಗ್ಗೆ ಯೋಚನೆ ಮಾಡಿ ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಎಲ್ಲರಿಗೂ ಒಂದಲ್ಲ ಒಂದು ಛಲ ಹಾಗೂ ಸಾಧಿಸುವ ಗುರಿ ಇರುತ್ತದೆ. ನೀವು ಸಾಧಿಸಿ ಎಲ್ಲರಂತೆ ಬಾಳಬೇಕು. ನಿಮ್ಮೊಂದಿಗೆ ಇಡೀ ಸಮಾಜ ಇರುತ್ತದೆ ಎಂದು ಹೇಳಿ ಹುಕ್ಕೇರಿ ಹಿರೇಮಠದಿಂದ ಆರ್ಥಿಕ ಸಹಾಯ ಮಾಡಿ ಆಶೀರ್ವದಿಸಿದರು.
ಸಮೃದ್ಧಿ ಫೌಂಡೇಶನ್ ಅಧ್ಯಕ್ಷ ಪ್ರಭು ಕಾಗತೀಕರ ಮಾತನಾಡಿ, ಅನೇಕ ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥರಾಗಿರುತ್ತಾರೆ. ಅಂಥವರನ್ನು ಅನಾಥ ಮಕ್ಕಳು ಎಂದು ಭಾವಿಸುವ ಮುನ್ನ ನಮ್ಮ ಮಕ್ಕಳು ಎಂದು ಭಾವಿಸಿ ಅವರಿಗೆ ಸಹಾಯ ಸಹಕಾರ ನೀಡುವುದು ಅವಶ್ಯಕವಿದೆ. ಈ ನಿಟ್ಟಿನಲ್ಲಿ ಎಲ್ಲ ಸಮಾಜದ ಬಾಂಧವರು ಸಹಕರಿಸುವ ಅಗತ್ಯ ಇದೆ ಎಂದರು.
ಸಮೃದ್ಧಿ ಅನಾಥಾಲಯದ ಕಾರ್ಯದರ್ಶಿ ಜ್ಯೋತಿ, ವಿಲಾಸ ಪಾಟೀಲ, ಅಮೃತಾ ಪಾಟೀಲ, ಗುಂಡು ಕಾಕತೀಕರ, ರವಿ ಗುಂಡಗಾವಿ, ಜ್ಯೋತಿ ತಮ್ಮಣ್ಣವರ, ಸಾವಿತ್ರಿ, ಶ್ರೀಧರ, ದೀಪಕ ಉಪಸ್ಥಿತರಿದ್ದರು.