ಎಲ್‌ಎಕ್ಸ್‌ಎಲ್ ಐಡಿಯಾ ಸಂಸ್ಥೆ ಇದೇ ಮೊದಲ ಬಾರಿಗೆ ಯುಟ್ಯೂಬ್ ಮೂಲಕ ಮಕ್ಕಳ ಚಿತ್ರಗಳನ್ನು ಶಾಲೆಯಲ್ಲಿ ಪ್ರದರ್ಶಿಸುವ ಅಂತಾರಾಷ್ಟ್ರೀಯ ಮಕ್ಕಳ ಸಿನಿಮಾ ಹಬ್ಬವನ್ನು ಹಮ್ಮಿಕೊಂಡಿದೆ. ಬೋಧನಾ ವಿಧಾನ ಎಷ್ಟೇ ಸುಧಾರಿಸಿದರೂ, ದೃಶ್ಯ ಮಾಧ್ಯಮದಷ್ಟು ಪರಿಣಾಮಕಾರಿ ಕಲಿಕಾ ವಿಧಾನ ಇನ್ನೊಂದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆ ಜೊತೆಗೆ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಈ ಸಿನಿಮಾ ಹಬ್ಬವನ್ನು ಆಯೋಜಿಸಲಾಗಿದೆ. /
ಪ್ರದರ್ಶನ ಹೇಗೆ?: ಇದು ಇಂಟರ್‌ನೆಟ್ ಆಧಾರಿತ ಸಿನಿಮೋತ್ಸವವಾಗಿರುವುದರಿಂದ, ಅಂತರ್ಜಾಲ ಸಂಪರ್ಕ ಹೊಂದಿರುವ ಯಾವುದೇ ಶಾಲೆಗಳೂ ಪಾಲ್ಗೊಳ್ಳಬಹುದು. ಅದಕ್ಕಾಗಿ ಅವರು ಮೊದಲು, ikffi.lxl.in ಜಾಲತಾಣಕ್ಕೆ ಭೇಟಿ ನೀಡಿ ಶಾಲೆಯ ವಿವರಗಳನ್ನು ನೋಂದಾಯಿಸಿ, ನಿಗದಿತ ಶುಲ್ಕ ಪಾವತಿಸಬೇಕು. ನಂತರ ಅವರಿಗೆ ಒಂದು ಪಾಸ್‌ವರ್ಡ್ ನೀಡಲಾಗುತ್ತದೆ. ಅದನ್ನು ಬಳಸಿ ಕಂಪ್ಯೂಟರ್‌ನಲ್ಲಿ ಮಕ್ಕಳ ಸಿನಿಮಾಗಳನ್ನು ತೋರಿಸಬಹುದು. ಬೇಕಿದ್ದರೆ ಹತ್ತಿರದ ಶಾಲೆಗಳು ಸೇರಿಯೂ ಪ್ರದರ್ಶನ ಏರ್ಪಡಿಸಬಹುದು.
ಸಿದ್ಧತೆ ಹೇಗಿದೆ?: ಪ್ರದರ್ಶನಕ್ಕೆ ಮುನ್ನ ಸಿನಿಮೋತ್ಸವದ ತಂಡ ಶಾಲೆಗೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಲಿದೆ. ಪ್ರದರ್ಶನ ಯಾವುದೇ ತೊಂದರೆಯಿಲ್ಲದೆ ನಡೆಯಲು ಅನುವಾಗುವಂತೆ ಸಹಾಯವನ್ನು ಒದಗಿಸಲಿದೆ. ಫೋನ್‌ಇನ್ ಹೆಲ್ಪ್ಲೈನ್ ಸಹಾಯವಾಣಿಯನ್ನೂ ತೆರೆಯಲಾಗಿದೆ.
100ಕ್ಕೂ ಹೆಚ್ಚು ಸಿನಿಮಾಗಳು: ಈ ಸಿನಿಮೋತ್ಸವದಲ್ಲಿ ಪ್ರದರ್ಶನಕ್ಕೆ ಲಭ್ಯವಿರುವ ಸಿನಿಮಾಗಳಲ್ಲಿ ದೇಶ ವಿದೇಶದ ಸಿನಿಮಾಗಳು, ಪ್ರಶಸ್ತಿಗಳನ್ನು ಗೆದ್ದ ಸಿನಿಮಾಗಳು ಸೇರಿವೆ. ಚಿಲ್ಡ್ರನ್ ಆಫ್ ಹೆವನ್, ಲಿಟಲ್ ಮ್ಯಾಜಿಶಿಯನ್, ದಿ ವಾಟರ್ ಫಾಲ್ಸ್ ಹೀಗೆ 100ಕ್ಕೂ ಸಿನಿಮಾಗಳಿವೆ. ಇವು ನಾನಾ ವಿಷಯಗಳಿಗೆ ಸಂಬಂಧಿತವಾದ ಸಿನಿಮಾಗಳು. ಅವುಗಳಲ್ಲಿ ಯಾವುದನ್ನಾದರೂ ಶಾಲಾ ಮಂಡಳಿ ಆರಿಸಿಕೊಳ್ಳಬಹುದು. ಅಂದ ಹಾಗೆ 25 ರಾಷ್ಟ್ರಗಳು ಈ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುತ್ತಿವೆ.
ಯಾವಾಗ?: ನವೆಂಬರ್ 14- 19
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ: ikffi.lxl.in
* ರಾಜು