Advertisement

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

09:26 PM May 16, 2022 | Team Udayavani |

ಅಂಟಾರ್ಟಿಕಾ: ಸುಮ್ಮನೆ ಊಹೆ ಮಾಡಿಕೊಳ್ಳಿ, ಪೂರ್ಣಕತ್ತಲು, ನಿಶ್ಶಬ್ದ ತುಂಬಿರುವ ಪ್ರದೇಶ, ಸಹಿಸಿಕೊಳ್ಳಲಸಾಧ್ಯ ಚಳಿ… ದಿನ, ವಾರ, ತಿಂಗಳುಗಳು ಕಳೆದರೂ ಅಲ್ಲಿ ಬೆಳಕಿನ ಸುಳಿವೇ ಇರುವುದಿಲ್ಲ… ಇಂತಹ ಜಾಗದಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ವಿಜ್ಞಾನಿಗಳು ವಾಸ ಆರಂಭಿಸಿದ್ದಾರೆ.

Advertisement

ಅದರ ಮೂಲಕ ಇಂತಹದ್ದೇ ವಾತಾವರಣವಿರುವ ಬಾಹ್ಯಾಕಾಶದಲ್ಲಿನ ಬದುಕು ಹೇಗಿರುತ್ತದೆ ಎಂದು ಅರಿಯಲು ಹೊರಟಿದ್ದಾರೆ. ಸದ್ಯ ವಿಜ್ಞಾನಿಗಳು ಮೇ 13ರಿಂದ ಈ ಪ್ರಯೋಗ ಆರಂಭಿಸಿರುವುದು ಪೂರ್ಣ ಹಿಮಾವೃತವಾಗಿರುವ ಅಂಟಾರ್ಟಿಕಾ ಖಂಡದಲ್ಲಿ!

ಈ ಖಂಡದಲ್ಲಿ ವಿಚಿತ್ರ ವಾತಾವರಣವಿದೆ. ಇಲ್ಲಿ 4 ತಿಂಗಳು ಸಂಪೂರ್ಣ ಕತ್ತಲಿರುತ್ತದೆ. ಅಂದರೆ ಸೂರ್ಯ ಹುಟ್ಟುವ, ಮುಳುಗುವ ಪ್ರಕ್ರಿಯೆಯೇ ಗೊತ್ತಾಗುವುದಿಲ್ಲ. ಇಂಥಲ್ಲಿ ಇಎಸ್‌ಎಯು ಕಾನ್‌ಕಾರ್ಡಿಯ ಹೆಸರಿನ ನಿಲ್ದಾಣ ಹೊಂದಿದೆ. ಇಲ್ಲಿ 12 ವ್ಯಕ್ತಿಗಳು ತಮ್ಮನ್ನು ತಾವೇ ಪರೀಕ್ಷೆಗೊಳಪಡಿಸಿಕೊಳ್ಳಲಿದ್ದಾರೆ.

ಅಷ್ಟು ಗಾಢ ಕತ್ತಲು, ಚಳಿ, ಏಕಾಂತ, ಯಾವುದೇ ಮನರಂಜನೆ ಇಲ್ಲದ, ಹೊರಗೆ ಹೋಗಲೂ ಆಗದ, ಒಳಗೆ ಇರಲೂ ಆಗದ ಸ್ಥಿತಿಯಲ್ಲಿ ವ್ಯಕ್ತಿಗಳ ಮಾನಸಿಕ, ಶಾರೀರಿಕ ಆರೋಗ್ಯ ಹೇಗಿರುತ್ತದೆ ಎಂದು ಪರೀಕ್ಷಿಸಲಿದ್ದಾರೆ.

ಈ ಸಂಶೋಧನೆಯಿಂದ ಇಂತಹದ್ದೇ ವಾತಾವರಣವಿರುವ ಅನ್ಯಗ್ರಹಗಳಲ್ಲಿ ಹೇಗೆ ಬದುಕಬಹುದು ಎಂಬ ಸುಳಿವು ವಿಜ್ಞಾನಿಗಳಿಗೆ ಸಿಗಲಿದೆ. ಪ್ರಸ್ತುತ ಸಂಶೋಧನೆ ನಡೆಸುತ್ತಿರುವ, ಮುಂದೆ ಸಂಶೋಧನೆಯಲ್ಲಿ ತೊಡಗಲಿರುವ ವಿಜ್ಞಾನಿಗಳಿಗೆ ಅದು ನೆರವಾಗುತ್ತದೆ. ಆದ್ದರಿಂದಲೇ ಅದಕ್ಕೆ ಸೂಕ್ತವಾದ ಅಂಟಾರ್ಟಿಕ ಖಂಡವನ್ನು ವಿಜ್ಞಾನಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next