ಮಂಗಳೂರು : ರಾಜ್ಯ ಕರಾವಳಿ ಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೀರ್ಘ ಚಳಿಗಾಲದ ಅವಧಿ ಇರುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಾರದ ಹಿಂದೆಯೇ ಚಳಿ ಕಾಣಿಸಿಕೊಂಡಿದೆ. ಈ ಬಾರಿಯ ಹಿಂಗಾರು ಋತುವಿನಲ್ಲಿ ಬದಲಾವಣೆಯಾಗಿದೆ. ಹಿಂಗಾರು ಅವಧಿ ಆರಂಭಗೊಂಡು ತಿಂಗಳು ಸಮೀಪಿಸಿದರೂ ಇನ್ನೂ ನಿರೀಕ್ಷಿತ ಮಳೆ ಸುರಿದಿಲ್ಲ. ಸದ್ಯ ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದು, ಮೋಡ ಸೃಷ್ಟಿಯಾಗುತ್ತಿಲ್ಲ. ಇದರಿಂದಾಗಿ ಉಷ್ಣಾಂಶ ಇಳಿಮುಖಗೊಳ್ಳು ತ್ತಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಡಿಸೆಂಬರ್ ಮೂರನೇ ವಾರದವರೆಗೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಇದು ಚಳಿಗಾಲದ ಮೇಲೆ ಪರಿಣಾಮ ಬೀರಲಿದೆ. ಡಿಸೆಂಬರ್ ಅಂತ್ಯದ ಬಳಿಕ ಉಷ್ಣಾಂಶ ಮತ್ತೆ ಏರಿಕೆಯಾಗಲಿದೆ.
ಈ ಅವಧಿಯಲ್ಲಿಯೂ ಚಳಿ ಇರಲಿದೆ. ಸದ್ಯದ ಮುನ್ಸೂಚನೆ ಯಂತೆ ಫೆಬ್ರವರಿ ಅಂತ್ಯದವರೆಗೆ ಚಳಿ ಮುಂದು ವರಿಯುವ ಸಾಧ್ಯತೆ ಇದೆ. ಆದರೆ ಕಳೆದ ವರ್ಷ ಉಷ್ಣಾಂಶ ಇಳಿಮುಖ ಪ್ರಕ್ರಿಯೆ ಆರಂಭಗೊಂಡಿದ್ದು ಡಿಸೆಂಬರ್‌ನಲ್ಲಿ. ಆದ್ದರಿಂದ ಚಳಿಗಾಲದ ಅವಧಿಯೂ ಕಡಿಮೆ ಇತ್ತು.
ಕಳೆದ ಕೆಲವು ದಿನದಿಂದ ಹವಾಮಾನ ಬದಲಾವಣೆಯ ಪರಿಣಾಮವನ್ನು ಕರಾವಳಿ ಎದುರಿಸುತ್ತಿದ್ದು, ಬೆಳಗ್ಗೆ ಚಳಿ, ಮಧ್ಯಾಹ್ನ ಸೆಕೆ ಮತ್ತು ಸಂಜೆಯ ವೇಳೆ ತುಸು ಮೋಡದ ವಾತಾವರಣ ಇರುತ್ತಿದೆ. ಬಂಗಾಲಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿದ್ದೂ ಇದಕ್ಕೆ ಕಾರಣ. ಬೆಳಗ್ಗೆ ಸುಮಾರು 4ರಿಂದ 6ರ ವರೆಗೆ ಕರಾವಳಿಯಲ್ಲಿ ಉಷ್ಣಾಂಶ ತೀರ ಇಳಿಮುಖಗೊಳ್ಳುತ್ತಿದೆ. ಈ ಭಾಗ ಸಮುದ್ರಕ್ಕೆ ಸಮೀಪ ಇರುವುದರಿಂದ ಚಳಿ, ಮಂಜಿನ ವಾತಾವರಣ ಇರುತ್ತದೆ. ಬಿಸಿಲು ಬಂದಂತೆ ಸಮುದ್ರ ಭಾಗದಲ್ಲಿ ಉಷ್ಣಾಂಶ ಏರಿಕೆಯೇ ಸೆಕೆಗೆ ಕಾರಣವಾಗುತ್ತದೆ.
ಸಾಂಕ್ರಾಮಿಕ ರೋಗಗಳಿಗೆ ಎಡೆ
ಹವಾಮಾನ ಬದಲಾವಣೆ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುತ್ತಿದೆ.
ಚಳಿಗಾಲ ದಲ್ಲಿ ತಾಪಮಾನ ವೈಪರೀತ್ಯ ಉಂಟಾಗುವುದರಿಂದ ಬ್ಯಾಕ್ಟೀರಿಯ, ವೈರಸ್‌ಗಳ ಹರಡುವಿಕೆ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ. ಜನರ ಆರೋಗ್ಯದಲ್ಲಿ ಏರುಪೇರು ಕಾಣಿಸಿ ಕೊಂಡು ಕಾಯಿಲೆಗೆ ಒಳಗಾಗುವ ಅಪಾಯವೂ ಇದೆ. ಇದೇ ವೇಳೆ ಬಿಟ್ಟು ಬಿಟ್ಟು ಸುರಿಯುವ ಮಳೆ ಡೆಂಗ್ಯೂ ರೋಗಕ್ಕೂ ಕಾರಣವಾಗುತ್ತಿದೆ.
ಹಿಂಗಾರು ಆರಂಭವಾಗಿ ಕೆಲವು ದಿನಗಳಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಬೆಳಗ್ಗಿನ ವೇಳೆ ಚಳಿ, ಬಳಿಕ ಸೆಕೆಯ ವಾತಾವರಣ ಇರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿಗಾಲ ಈಗಲೇ ಆರಂಭಗೊಂಡಿದೆ. ಫೆಬ್ರವರಿ ವರೆಗೆ ಚಳಿಯ ಅನುಭವ ಇರಲಿದೆ.
– ಡಾ| ರಾಜೇಗೌಡ, ಹವಾಮಾನ ವಿಜ್ಞಾನಿ, ಕೃಷಿ ವಿ.ವಿ. ಬೆಂಗಳೂರು