ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ 16 ದಿನಗಳಿಂದ ನೀರು ಗಂಟೆಗಳು ಧರಣಿ ಕುಳಿತು ಪ್ರತಿಭಟಿಸಿದರೂ ಸಮಸ್ಯೆ ಕೇಳ್ಳೋರಿಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳ ಕ್ರಮಕ್ಕೆ ರೊಚ್ಚಿಗೆದ್ದ ಪ್ರತಿಭಟನಾಕಾರರು ವಿಷದ ಬಾಟಲ್ ನೊಂದಿಗೆ ಧರಣಿ ಮುಂದುವರಿಸಿದ್ದಾರೆ.
ಸಮಸ್ಯೆಗೆ ಸ್ಪಂದಿಸದಿದ್ದರೆ ವಿಷ ಸೇವನೆ: 16 ದಿನಗಳಿಂದಲೂ ನಿರಂತರ ಪ್ರತಿಭಟನೆ ಕುಳಿತಿದ್ದೇವೆ. ನೀರುಗಂಟಿಗಳ ಸಮಸ್ಯೆ ಆಲಿಸಲು ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕಾಗಮಿಸುತ್ತಿಲ್ಲ. ಇನ್ನು ಜನಪ್ರತಿನಿಧಿಗಳ ಕುರಿತು ಹೇಳುವುದೇ ಬೇಡ. ಅವರಿಗೆ ಅಧಿಕಾರ ದಾಹ. ಕುರ್ಚಿ ಉಳಿಸಿಕೊಳ್ಳುವ ಹೋರಾಟಗಳ ಮಧ್ಯೆ ನೌಕರರು, ಬಡವರು, ಜನಸಾಮಾನ್ಯ ಸಮಸ್ಯೆಗಳನ್ನು ಆಲಿಸುವ, ಈಡೇರಿಸುವ ಸಮಯವೇ ಅವರಿಗಿರಲ್ಲ. ಆದ್ದರಿಂದಲೇ ನಾವೇ ಒಂದು ನಿರ್ಧಾರಕ್ಕೆ ಬಂದು ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ. ಅಹೋರಾತ್ರಿ ಧರಣಿಗೂ ಮುಂದಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ವಿಷ ಕುಡಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಳೆದ ಆರು ತಿಂಗಳಿಂದವೇತನ ವಿತರಿಸದ ಹಿನ್ನೆಲೆ ಯಲ್ಲಿ ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದಿದ್ದಾರೆ.
ವೇತನ ಇಲ್ಲದೆ ಬದುಕು ದುಸ್ತರ: ಕರ್ತವ್ಯ ನಿರತ 47 ಮಂದಿ ನೀರುಗಂಟಿಗಳಿಗೆ ವೇತನ ಬಿಡುಗಡೆ, ಇಎಸ್‌ಐ ಮತ್ತು ಪಿಎಫ್ ಹಾಗೂ ಮೂಲ ಸೌಲಭ್ಯ ನೀಡದೆ ಇಲಾಖೆ ಅಧಿಕಾರಿಗಳು ವಂಚಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ವೇತನ ವಿತರಿಸದ ಹಿನ್ನೆಲೆಯಲ್ಲಿ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. ಕುಟುಂಬ ಪೋಷಣೆ, ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಆಸ್ಪತ್ರೆ ವೆಚ್ಚಗಳಿಗೆ ಹಣವಿಲ್ಲದೆ ಪರದಾಡುವಂತಾಗಿದೆ ಎಂದು ದೂರಿದರು.
ಮೂಲ ಸೌಲಭ್ಯ ಕಲ್ಪಿಸಿ: ಮಳವಳ್ಳಿ ಮತ್ತು ಬನ್ನೂರು ವಿಭಾಗದ ನೀರುಗಂಟಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿನ ಕಾವೇರಿ ನೀರಾವರಿ ನಿಗಮದ ನೀರುಗಂಟಿಗಳಿಗೂ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡುತ್ತಿದ್ದೇವೆಯೋ ಹೊರತು, ನಾವೇನೂ ಈಡೇರಿಸ ಲಾಗದ್ದೇನೂ ಅಲ್ಲ. ಸಣ್ಣ ಸಮಸ್ಯೆಗಳಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುವ ಮೂಲಕ ನೀರುಗಂಟಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಗತ್ಯ ಕ್ರಮ ವಹಿಸದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಇಲಾಖೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆಯಲ್ಲಿ ನೀರುಗಂಟಿಗಳಾದ ರವಿ, ಜಗದೀಶ್, ಶಂಕರ್‌ರಾವ್, ಕೆ.ಸುರೇಶ್, ಪುಟ್ಟೇಗೌಡ, ಬಸವರಾಜು, ನರಸಿಂಹಯ್ಯ, ರಘು, ರಮೇಶ್, ಅಲಮೇಲಮ್ಮ, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.