ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಒಂದರಲ್ಲಿ ಆ ಮಹಿಳೆ, ತನ್ನ ಮನೆಯ ಕಿಟಕಿಯ ಗಾಜನ್ನು ಸ್ವಚ್ಛಗೊಳಿಸುತ್ತಿದ್ದಾಳೆ. ಕಣ್ಣೀರು ಧಾರಾಕಾರವಾಗಿ ಸುರಿಯು ತ್ತಿದ್ದರೂ ರಾಷ್ಟ್ರಗೀತೆ ಹಾಡುತ್ತಲೇ ಮನೆ ಸ್ವಚ್ಛಗೊಳಿಸುತ್ತಿರುವ ಆಕೆಯ ವೀಡಿಯೋ ನೋಡಿದ ಎಂಥವರಿಗೂ ಹೃದಯ ಹಿಂಡುತ್ತದೆ.
ಕೀವ್ ನಗರದ ಫ್ಲ್ಯಾಟ್‌ನಲ್ಲಿ ಚಿತ್ರೀಕರಿಸಲಾಗಿರುವ ಈ ವೀಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಅಲ್ಲಿಗೆ ಬಂದೆ ರಗಿದ ರಷ್ಯಾ ಸೇನೆಯ ಕ್ಷಿಪಣಿ, ಆ ಫ್ಲಾಟ್ ಅನ್ನು ಭಾಗಶಃ ಧ್ವಂಸಗೊಳಿಸಿದೆ.
ಕಷ್ಟ ಪಟ್ಟು ಪೈಸೆಗೆ ಪೈಸೆ ಕೂಡಿಟ್ಟು ಕಟ್ಟಿದ ಕನಸಿನ ಮನೆಯೊಂದು ಕ್ಷಣಾರ್ಧದಲ್ಲಿ ಧ್ವಂಸಗೊಂಡಾಗ ಆಗುವ ದುಃಖ, ಮನೋವ್ಯಥೆ, ಕಷ್ಟಪಟ್ಟು ಮನೆ ಕಟ್ಟಿದ ವರಿಗಷ್ಟೇ ಗೊತ್ತಾಗುತ್ತೆ! ಆದರೂ ದೇಶಕ್ಕಾಗಿ ಇದನ್ನು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಆಕೆಗಿದೆ.
ರಾಷ್ಟ್ರಗೀತೆ ಹಾಡುತ್ತಾ ಮನೆ ಸ್ವಚ್ಛಪಡಿಸುವ ಈ ದೃಶ್ಯ, ದೇಶಭಕ್ತಿ ಲೇಪಿತವಾದ ಆಕೆಯ ಅಸಹಾಯಕತೆಯನ್ನು ಒತ್ತಿ ಹೇಳುತ್ತದೆ. ವೀಡಿಯೋದ ಅಂತ್ಯದಲ್ಲಿ “ಲಾಂಗ್ ಲಿವ್ ಉಕ್ರೇನ್’ ಎಂಬ ಸಾಲುಗಳೊಂದಿಗೆ ಆಕೆಯ ರಾಷ್ಟ್ರಗೀತೆ ಅಂತ್ಯಗೊಳ್ಳುತ್ತದೆ.