ಹೊಸದಿಲ್ಲಿ: ಅಟೋಮ್ಯಾಟಿಕ್ ಗಿಯರ್ ಹೊಂದಿದ ಕಾರುಗಳನ್ನು ಓಡಿಸೋದು ಅಂದ್ರೆ ಎಲ್ಲರಿಗೂ ಖುಷಿ. ಕ್ಲಚ್ ಒತ್ತುವ, ಆಗಾಗ್ಗೆ ಗಿಯರ್ ಹಾಕುವ ಕಿರಿಕಿರಿ ಇಲ್ಲ. ಸುಮ್ಮನೆ ಕೂತು ಅಲ್ಪಸ್ವಲ್ಪ ಸ್ಟೀರಿಂಗ್ ತಿರುಗಿಸಿದ್ರೆ ಸಾಕು. ಹೆಚ್ಚು ಶ್ರಮವೇ ಬೇಡ. ಆದರೆ ಹೀಗೆ ಕಾರು ಚಾಲನೆ ಮಾಡುತ್ತಿರುವಾಗ ಟೈಟ್ ಆಗಿರುವ ಜೀನ್ಸ್ ಪ್ಯಾಂಟ್ ಏನಾದರೂ ಹಾಕಿದ್ರೋ. ಕಥೆ ಅಷ್ಟೇ! ಇತ್ತೀಚೆಗೆ ಘಟನೆಯೊಂದು ನಡೆದಿದ್ದು, ಚಾಲಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಆ ಘಟನೆಯಲ್ಲಿ 30 ವರ್ಷದ ಉದ್ಯಮಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ.
ನಿಜಕ್ಕೂ ನಡೆದಿದ್ದೇನು?
ಸೌರಭ್ ಶರ್ಮಾ ಅಂದು ತಮ್ಮ ಆಟೋಮ್ಯಾಟಿಕ್ ಕಾರಿನಲ್ಲಿ ಹೃಷಿಕೇಶಕ್ಕೆ ಡ್ರೈವ್ ಮಾಡಿದ್ದರು. ಈ ವೇಳೆ ಅವರು ಟೈಟ್ ಆದ ಜೀನ್ಸ್ ಪ್ಯಾಂಟ್ ಹಾಕಿದ್ದರು. ಸುಮಾರು 8 ಗಂಟೆಗಳ ಕಾಲ ಅವರು ಡ್ರೈವ್ ಮಾಡಿದ್ದರು. ಆಟೋಮ್ಯಾಟಿಕ್ ಕಾರಿನಲ್ಲಿ ಕ್ಲಚ್ ಇಲ್ಲದಿರುವುದರಿಂದ ಎಡಗಾಲಿಕೆ ಏನೂ ಕೆಲಸವೇ ಇಲ್ಲ ಹಾಗೇ ಇಟ್ಟುಕೊಂಡಿರುವುದು ರೂಢಿ.
ಇದರಿಂದ ರಕ್ತ ಸಂಚಾರ ಕಡಿಮೆಯಾಗಿ ಅವರು ತಲುಪಬೇಕಾದ ಸ್ಥಳಕ್ಕೆ ತಲುಪಿದ ಬಳಿಕ ಕಾಲು ಊದಿಕೊಂಡಿರುವುದು ಪತ್ತೆಯಾಗಿತ್ತು. ಬಳಿಕ ಅವರಿಗೆ ಕಣ್ಣು ಕತ್ತಲೆ ಬಂದಿತ್ತು. ತುಸು ಹೊತ್ತಿಗೆ ಅವರು ಪ್ರಜ್ಞೆ ತಪ್ಪಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕಡಿಮೆ ರಕ್ತದೊತ್ತಡ ಕಂಡುಬಂದಿದ್ದು, ಕಿಡ್ನಿ ಸರಿಯಾಗಿ ಕೆಲಸ ಮಾಡದಿರುವುದು ಪತ್ತೆಯಾಗಿತ್ತು. 24 ತಾಸು ಡಯಾಲಿಸಿಸ್ ಮಾಡಲಾಗಿದ್ದು ಚಿಕಿತ್ಸೆ ಬಳಿಕ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ದೀರ್ಘ ಪ್ರಯಾಣದ ನಡುವೆ ವಿಶ್ರಾಂತಿ ಇರಲಿ
ಸುದೀರ್ಘ ಡ್ರೈವಿಂಗ್ ವೇಳೆ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಅತಿ ಬಿಗಿಯಾದ ಉಡುಪುಗಳನ್ನು ಧರಿಸುವುದುರಿಂದ ರಕ್ತದೊತ್ತಡದ ಸಮಸ್ಯೆ ಎದುರಾಗುತ್ತದೆ. ಇದು ಪ್ರಾಣಾಂತಿಕವೂ ಆಗಬಹುದು. ಕಾರಿನ ಚಾಲನೆ, ವಿಮಾನ ಪ್ರಯಾಣದ ವೇಳೆ ಮಧ್ಯೆ ತುಸು ಅಡ್ಡಾಡಬೇಕು. ಕಾರಿನಲ್ಲಾದರೆ ಮಧ್ಯೆ ಬ್ರೇಕ್ ಕೊಟ್ಟು ಕಾರಿನಿಂದ ಇಳಿದು ಅಡ್ಡಾಡುವುದು ಉತ್ತಮ ಎಂದು ಪರಿಣತರು, ವೈದ್ಯರು ಹೇಳುತ್ತಾರೆ.