ಲಂಡನ್ : ನಿನ್ನೆ ಶುಕ್ರವಾರ ಬೆಳಗ್ಗೆ 8.20ರ ಹೊತ್ತಿಗೆ (ಜಿಎಂಟಿ ಕಾಲಮಾನ 7.20) ಪಾರ್ಸನ್ಸ್ ಗ್ರೀನ್ ಅಂಡರ್‌ಗ್ರೌಂಡ್ ಸ್ಟೇಶನ್ ನಿಂದ ನಿರ್ಗಮಿಸಲು ಸಿದ್ಧವಾಗಿದ್ದ , ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ, ಲಂಡನ್ ಅಂಡರ್‌ಗ್ರೌಂಡ್ ಟ್ರೈನಿನಲ್ಲಿ ನಡೆದಿದ್ದ ಸ್ಫೋಟವು ತನ್ನದೇ ಕೃತ್ಯ ಎಂದು ಇಸ್ಲಾಮಿಕ್ ಉಗ್ರ ಸಂಘಟನೆ ಐಸಿಸ್ ಹೇಳಿಕೊಂಡಿದೆ.
ಲಂಡನ್‌ನಲ್ಲಿನ ಮೆಟ್ರೋದಲ್ಲಿ ನಡೆದಿದ್ದ ಬಾಂಬ್ ನ್ಪೋಟವು ಐಸಿಸ್ ಉಗ್ರ ಸಂಘಟನೆಯಿಂದ ಸಿಡಿದಿರುವ ಸಮೂಹದ ಕೃತ್ಯವಾಗಿದೆ ಎಂದು ಅಮಾಕ್ ಪ್ರೊಪಗಾಂಡಾ ಏಜನ್ಸಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ನಿನ್ನೆ ಶುಕ್ರವಾರ ಬೆಳಗ್ಗೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಟ್ರೈನಿನ ಬೋಗಿಯೊಂದರಲ್ಲಿ ಉಪಕರಣವೊಂದು ಸ್ಫೋಟಗೊಂಡಾಗ ಬೆಂಕಿ ಹೊತ್ತಿ ಉರಿದು ಕನಿಷ್ಠ 29 ಮಂದಿ ಗಾಯಗೊಂಡಿದ್ದರು.
ಈ ಬಾಂಬ್ ಸ್ಫೋಟವು ತನ್ನದೇ ಕೃತ್ಯವೆಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡದ್ದನ್ನು ಅನುಸರಿಸಿ ಲಂಡನ್‌ನಲ್ಲಿ ಉಗ್ರ ಬೆದರಿಕೆಯ ಮಟ್ಟವನ್ನು ಏರಿಸಲಾಗಿ ಕಟ್ಟೆಚ್ಚರ ವಹಿಸಲಾಗಿದೆ. ಎಂದರೆ ಐಸಿಸ್ ಉಗ್ರ ಸಂಘಟನೆ ಈ ರೀತಿಯ ಇನ್ನಷ್ಟು ಬಾಂಬ್ ಸ್ಫೋಟ ಕೃತ್ಯಗಳನ್ನು ನಡೆಸುವ ಸಾಧ್ಯತೆಯನ್ನು ಪೊಲೀಸರು ನಿರೀಕ್ಷಿಸಿದ್ದಾರೆ ಎನ್ನಲಾಗಿದೆ.
ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರ ಐಸಿಸ್ ಭಯೋತ್ಪಾದನೆ ಬೆದರಿಕೆಯು ಗಂಭೀರವಾಗಿರುವುದರಿಂದ ಎಚ್ಚರಿಕೆ ಮಟ್ಟವನ್ನು ಏರಿಸಲಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ಶುಕ್ರವಾರ ನಡೆದಿರುವ ಭೂಗತ ಮೆಟ್ರೋ ಉಗ್ರ ದಾಳಿಯು ಕಳೆದ ಆರು ತಿಂಗಳಲ್ಲಿ ಬ್ರಿಟನ್‌ನಲ್ಲಿ ನಡೆದಿರುವ ಐದನೇ ಭಯೋತ್ಪಾದಕ ದಾಳಿಯಾಗಿದೆ.