ಲಂಡನ್: ಬ್ರಸೆಲ್ಸ್, ಫ್ರಾನ್ಸ್ ಮೇಲೆ ಭಯೋತ್ಪಾದಕರ ಕರಿನೆರಳು ಬಿದ್ದಿರುವಂತೆಯೇ, ಬ್ರಿಟನ್ ಸಂಸತ್ ಮೇಲೂ ಉಗ್ರ ದಾಳಿ ಯತ್ನ ನಡೆದಿದೆ. ಬುಧವಾರ ನಡೆದ ದಾಳಿ ಯತ್ನವನ್ನು ಪೊಲೀಸರು ತಡೆದಿದ್ದು, ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 400 ಮಂದಿ ಸಂಸದರು ಸಂಸತ್ ಭವನದ ಒಳಗಿದ್ದರು. ಅವರು ಸುರಕ್ಷಿತರಾಗಿದ್ದಾರೆ.
ದಾಳಿ ನಡೆದ ಕೆಲವೇ ಕ್ಷಣಗಳ ಮುನ್ನ ಪ್ರಧಾನಿ ಥೆರೇಸಾ ಮೇ ಸಂಸತ್‌ನಿಂದ ಹೊರಗೆ ಹೋಗಿದ್ದರು. ಈ ನಡುವೆ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ, ಓರ್ವ ಮಹಿಳೆ ಸೇರಿ , ಇಬ್ಬರು ಪುರುಷರು ಸೇರಿ ಐವರು ಮೃತಪಟ್ಟಿದ್ದಾರೆ. ಜತೆಗೆ 20 ಮಂದಿ ಗಾಯಗೊಂಡಿದ್ದಾರೆ
ಲಂಡನ್‌ನ ಸ್ಥಳೀಯ ಕಾಲಮಾನ ಮಧ್ಯಾಹ್ನ 2.45ರ ವೇಳೆಗೆ ಸಂಸತ್ತು ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರ್ ಹೊರಗಿನ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಕಾರನ್ನು ಹಿಗ್ಗಾಮುಗ್ಗಾ ಚಲಾಯಿಸಿದ್ದು, ಪಾದಚಾರಿಗಳಿಗೆ ಮೇಲೆ ಏರಿ ಹೋಗಿದ್ದಾನೆ. ಬಳಿಕ ಅಲ್ಲಿನ ಗೇಟೊಂದಕ್ಕೆ ಗುದ್ದಿಸಿದ್ದು ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಸಂಸತ್ ಗೇಟಿನೊಳಕ್ಕೆ ನುಗ್ಗಲು ಯತ್ನಿಸುತ್ತಿದ್ದಂತೆ ಶಸ್ತ್ರಸಜ್ಜಿತ ಪೊಲೀಸರು ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಸಂಸತ್ತಿನ ಹೊರಭಾಗ ಮೂರು ಗುಂಡಿನ ದಾಳಿ ಸದ್ದು ಕೇಳುತ್ತಿದ್ದಂತೆ, ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿಯವರನ್ನು ಕೂಡಲೇ ಸ್ಥಳಾಂತರಿಸಲಾಗಿದೆ. ಘಟನೆ ವೇಳೆ ಸಂಸತ್ತಿನ ಒಳಗೆ ಸುಮಾರು 400 ಮಂದಿ ಸಂಸತ್ ಸದಸ್ಯರಿದ್ದರು.
ಘಟನೆ ತಕ್ಷಣ ಏರ್ ಅಂಬ್ಯುಲೆನ್ಸ್ ಮತ್ತು ತುರ್ತು ರಕ್ಷಣಾ ಹೆಲಿಕಾಪ್ಟರ್‌ಗಳು ಸಂಸತ್ ಆವರಣದಲ್ಲಿ ಇಳಿದಿದ್ದು, ಕೂಡಲೇ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಸಂಸತ್ತನ್ನು ಬಂದ್ ಮಾಡಲಾಗಿದ್ದು, ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾಗಿ ಹೇಳಲಾಗಿದೆ.
ಬ್ರಸೆಲ್ಸ್ ಉಗ್ರದಾಳಿಗೆ 1 ವರ್ಷ ವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಬ್ರಿಟನ್ ಸಂಸತ್ ಮೇಲೆ ನಡೆದ ದಾಳಿ ಯತ್ನ ಹುಬ್ಬೇರಿಸಿದೆ. ಆದರೆ ಬ್ರಿಟನ್ ಸಂಸತ್ತಿನ ಮೇಲೆ ನಡೆಸಿದ ಈ ದಾಳಿ ಯತ್ನದ ಹಿಂದೆ ಯಾವ ಭಯೋತ್ಪಾದಕ ಸಂಘಟನೆ ಇದೆ? ಕಾರಣವೇನು ಎಂಬುದು ತಿಳಿದುಬಂದಿಲ್ಲ.
ದಾಳಿಕೋರ 40 ವರ್ಷದ ಏಷ್ಯಾ ಮೂಲದವ?: ದಾಳಿಕೋರ 40 ವರ್ಷದವನಾಗಿದ್ದು ಏಷ್ಯಾ ಮೂಲದವನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಆತನ ಬಳಿ 6 ಇಂಚು ಉದ್ದದ ಹರಿತವಾದ ಚೂರಿ ಇತ್ತು. ಕಪ್ಪುಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ. ಎಸ್‌ಯುವಿ ಚಲಾಯಿಸುತ್ತಿದ್ದ ಆತ ಆರಂಭದಲ್ಲಿ ಸಂಸತ್ತಿನ ಗೇಟಿಗೆ ಗುದ್ದಿಸಿ, ಬಳಿಕ ಚೂರಿ ಇರಿದು ಇನ್ನೊಂದು ಗೇಟಿನತ್ತ ನುಗ್ಗಲು ಯತ್ನಿಸಿದ್ದಾಗಿ ಹೇಳಲಾಗಿದೆ. ಇದೇ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.