Advertisement

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

01:35 PM Oct 26, 2024 | Team Udayavani |

ಯು.ಕೆ: ಯುಕೆಯ ಲಂಡನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಆವರಣದ ನವೀಕರಣದ ಸಲುವಾಗಿ ನಿಧಿ ಸಂಗ್ರಹ ಕಾರ್ಯಕ್ರಮದ ಪ್ರಯುಕ್ತ ಒಂದು ಅದ್ದೂರಿ ಸಂಗೀತ ನೃತ್ಯ ಸಂಜೆಯನ್ನು ಇತ್ತೀಚೆಗೆ ಭವನದಲ್ಲಿ ಏರ್ಪಡಿಸಲಾಗಿತ್ತು.

Advertisement

ಭವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಮತ್ತೂರ್‌ ನಂದಕುಮಾರ್‌ ಸಭೆಯನ್ನು ಉದ್ದೇಶಿಸಿ ಇಂತಹ ದೈವಿಕ, ಅಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಹಾಗೂ ಭಕ್ತರ ದೇಣಿಗೆಯಿಂದ ಯುಕೆಯಲ್ಲಿ ರಾಯರ ಮಠ ನಿರ್ಮಾಣವಾಗುತ್ತಿರುವುದು ಶುಭವೆಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಪರ್ಣ ರೋಹನ್‌ ಮೂರ್ತಿ ಆಗಮಿಸಿದ್ದರು.

“ಗುರು ವಂದನಾ’ ಕಾರ್ಯಕ್ರಮವನ್ನು ಹೆಸರಾಂತ ಪಿಟೀಲು ವಾದಕರಾದ ವಿದ್ವಾನ್‌ ಮೈಸೂರು ಮಂಜುನಾಥ್‌ ಅವರ ಸುಪುತ್ರ ಸಂಗೀತ ಪ್ರವೀಣ ಹಾಗೂ ರಾಘವೇಂದ್ರ ತೀರ್ಥರ ಭಕ್ತರಾದ ಸುಮಂತ್‌ ಮಂಜುನಾಥ್‌ ಅವರಿಂದ ಪಿಟೀಲು ವಾದನ ಹಾಗೂ ಇವರಿಗೆ ಸಾಥ್‌ ಕೊಟ್ಟ ಮತ್ತೂಬ್ಬ ಅದ್ಭುತ ಸಂಗೀತಗಾರ ಪಂಡಿತ್‌ ಚತುರ್‌ಲಾಲ ಅವರ ಮೊಮ್ಮಗ ಹಾಗೂ ಪಂಡಿತ್‌ ಚರಂಜಿತ್‌ ಲಾಲ್‌ ಅವರ ಸುಪುತ್ರ ಪ್ರಾಂಶು ಚತುರ್‌ಲಾಲ್‌ ಅವರ ತಬಲಾದ ಜೋಡಿ, ಅಲ್ಲಿ ನೆರೆದ ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. “ರಿಥಮ್‌ ರಾಗ’ ಜೋಡಿ ಶ್ರೋತೃಗಳನ್ನು ಕರ್ನಾಟಕ ಹಾಗೂ ಹಿಂದೂಸ್ಥಾನಿ ಶೈಲಿಯ ಒಂದು ಹೊಸ ಲಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರಿಬ್ಬರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಅನಂತರ “ನೃತ್ಯ ತರಂಗ’ ತಂಡದಿಂದ ಗುರು ರಾಯರ ಜೀವನ ಕಥೆ ಹಾಗೂ ಕೆಲವು ಪವಾಡಗಳನ್ನು ನೃತ್ಯ ರೂಪಕದ ಮೂಲಕ ಪ್ರೇಕ್ಷಕರನ್ನು ಭಕ್ತಿಯ ಅಲೆಯಲ್ಲಿ ತೇಲಿಸಿದರು. ಒಂದು ಅತ್ಯುನ್ನತ ಅದ್ಭುತ ದೃಶ್ಯಾವಳಿ ಸೃಷ್ಟಿಸಲು ಹಾಗೂ ಸಂಪ್ರದಾಯವನ್ನು ಎತ್ತಿಹಿಡಿಯುವ ಪರಮ ಉದ್ದೇಶವನ್ನಾಗಿ ಇಟ್ಟುಕೊಂಡು ಹಿನ್ನೆಲೆ ಗಾಯನ ನಟುವಾಂಗ ಮೃದಂಗ ಮೋರ್ಸಿಂಗ್‌ ಹಾಗೂ ವೀಣಾ ವಾದನದೊಂದಿಗೆ ಈ ತಂಡ ಮೂಲ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

Advertisement

ಶ್ರೀ ರಾಘವೇಂದ್ರ ತೀರ್ಥರು ಪ್ರಹಲ್ಲಾದನ ಅವತಾರ ಹಾಗೂ ಶ್ರೀಹರಿಯ ಪರಮ ಭಕ್ತ ಎಂದು ದರ್ಶಿಸಿಸಲು ಹಿರಣ್ಯಕಶ್ಯಪು ಸಿಟ್ಟಿನಲ್ಲಿ ಕಂಭ ಒಡೆದಾಗ ಆ ಶ್ರೀಹರಿಯೇ ನರಸಿಂಹ ಸ್ವರೂಪವಾಗಿ ಹಿರಣ್ಯಕಶ್ಯಪುವಿನ ಸಂಹಾರ ಮಾಡುವ ಕಥೆಯನ್ನು ಕ್ರೋಧ, ಭೀಭತ್ಸ, ಭಕ್ತಿ ರಸಗಳನ್ನು ಅದ್ಭುತವಾಗಿ ಪ್ರದರ್ಶಿಸಿದ ತಂಡ ಜನರ ಚಪ್ಪಾಳೆಗೆ ಪಾತ್ರವಾಯಿತು.

ಶ್ರೀ ರಾಘವೇಂದ್ರ ತೀರ್ಥರ ಜೀವನ ಕಾಲದಲ್ಲಿ ಬಹಳಷ್ಟು ಘಟನೆಗಳು ನಡೆದಿದ್ದವು. ಅವುಗಳಲ್ಲಿ ಶ್ರೀ ಗಂಧ ಹಾಗೂ ಅಗ್ನಿ ಮಂತ್ರದ ಪ್ರಸಂಗ ಹಾಗೂ ವೆಂಕಟ ದೇಸಾಯಿಯ ಮನೆಯಲ್ಲಿ ಅವರ ಮಗು ಪಾಯಸದ ಹಂಡೆಯಲ್ಲಿ ಬಿದ್ದು ಅಸುನೀಗಿ ಅನಂತರ ರಾಯರ ಅನುಗ್ರಹದಿಂದ ಪುರ್ನಜನ್ಮ ಪಡೆದ ಪ್ರಸಂಗಳನ್ನು ಬಹಳ ಭಾವುಕ ರೀತಿಯಲ್ಲಿ ಪ್ರದರ್ಶಿಸಿದರು.
ಶ್ರೀ ರಾಘವೇಂದ್ರ ತೀರ್ಥರು ತಿರುಪತಿಯ ಕಡೆ ಪ್ರಯಾಣವನ್ನು ನಡೆಸಿ ಅಲ್ಲಿ ಗೋವಿಂದನ ಪರಮ ಅನುಗ್ರಹದಿಂದ ಮಂತ್ರಾಯಲದ ಕಡೆ ನಡೆಯುತ್ತಾ ಬೃಂದಾವನ ಸೇರುವ ದೃಶ್ಯ ನೋಡುಗರಲ್ಲಿ ನೋವು ಹಾಗೂ ದುಃಖದ ಭಾವನೆಗಳು° ಮೂಡಿಸಿತು.

ಸುಪ್ರಸಿದ್ಧ ಸಂಗೀತಗಾರರಾದ ವೈಣಿಕ ಪ್ರವೀಣ ಆರ್‌. ಕೇಶವಮೂರ್ತಿಯ ಅವರ ಮೊಮ್ಮಗ ಆರ್‌.ಕೆ.ಪ್ರಸನ್ನ ಕುಮಾರ್‌ ಅವರ ಸುಪುತ್ರ ಪ್ರಮೋದ್‌ ರುದ್ರಪಟ್ಣ ಅವರು ಇಡೀ ನೃತ್ಯ ರೂಪಕಕ್ಕೆ ಸಂಗೀತ ಸಂಯೋಜನೆ ಮಾತ್ರವಲ್ಲದೆ ತಮ್ಮ ಸುಶ್ರಾವ್ಯ ವೀಣಾ ವಾದನದೊಂದಿಗೆ ಪ್ರತೀ ಪಾತ್ರಕ್ಕೂ ಜೀವ ತುಂಬಿದ್ದಾರೆ. ಪ್ರತಿಯೊಂದು ರಾಗವನ್ನು ಸೂಕ್ಷ್ಮವಾಗಿ ಹಾಗೂ ಸುಂದರವಾಗಿ ಸಂದರ್ಭಕ್ಕೆ ತಕ್ಕಂತೆ ಸೃಷ್ಟಿಸಿ ನೃತ್ಯಕ್ಕೆ ಮೆರುಗು ನೀಡಿದ್ದಾರೆ.

ತೀಕ್ಷ್ಣವಾದ ಧ್ವನಿಯ ವೇದ ವೆಂಕಟೇಶ್‌ ಭಟ್‌ ತಮ್ಮ ಹಿನ್ನೆಲೆ ಗಾಯನ ಹಾಗೂ ನಟುವಾಂಗದಿಂದ ನೃತ್ಯ ರೂಪಕವನ್ನು ಒಂದು ಚನಲಚಿತ್ರದ ಪ್ರಭಾವ ಬೀರುವಂತೆ ಮಾಡಿದರು. ಇವರಿಬ್ಬರ ಸಾಮರ್ಥ್ಯಕ್ಕೆ ಸಹಗಾಯಕಿಯಾಗಿ ಅನನ್ಯ ಕದಡಿ, ಮೃದಂಗದಲ್ಲಿ ಮಧುನನ್‌ ಉಥಯ ಕುಮಾರ್‌ ಹಾಗೂ ಮೋರ್ಸಿಂಗ್‌ ಮತ್ತು ವಿಶೇಷ ಪರಿಣಾಮಗಳನ್ನು (ಸ್ಪೆಷಲ್‌ ಎಫೆಕ್ಟ್) ಶೈ ಕುಗಣೇಶನ್‌ ಅದ್ಭುತವಾಗಿ ಸಂಗೀತ ಪ್ರದರ್ಶನ ಮಾಡಿದ್ದಾರೆ.

ಕುಮಾರಿ ಅಖಿಲ ರಾವ್‌ ಅವರು ಈ ನೃತ್ಯ ರೂಪಕಕ್ಕೆ ನೃತ್ಯ ಸಂಯೋಜಿಸಿ ಹಾಗೂ ನೃತ್ಯ ಪಾತ್ರಾಭಿನಯ ಕೂಡ ಮಾಡಿದರು. ಅವರೊಂದಿಗೆ ಭರತನಾಟ್ಯ ಕಲಾವಿದರಾದ ಅಕ್ಷತಾ ಭಟ್‌, ಪದ್ಮಾವತಿ ಕೃಷ್ಣನ್‌, ಧನ್ಯಾ ಮೈಸೂರು ರಾಜಶೇಖರ್‌, ವೈಷ್ಣವಿ ಪ್ರಶಾಂತ್‌ ಹಾಗೂ ಪ್ರಣವಿ ವಸಿ ರೆಡ್ಡಿ ತಮ್ಮ ಸುಂದರ ಲಾಸ್ಯ ಅಭಿನಯದ ಮೂಲಕ ಎಲ್ಲ ಪಾತ್ರಕ್ಕೆ ಜೀವ ತುಂಬಿದರು.

ಕೃಷ್ಣ ಶಿಲೆಯ ರಾಯರ ಬೃಂದಾವನವನ್ನು ನಿಜರೂಪದಂತೆ ಚಿತ್ರಿಸಿದ ಸ್ವಾತಿ ಪ್ರಮೋದ್‌ ಅವರು ಈ ನೃತ್ಯಕ್ಕೆ ಒಂದು ದೈವಿಕ ಮೆರುಗನ್ನು ಕೊಟ್ಟರು. ರಾಧಿಕಾ ಜೋಶಿ ಕಾರ್ಯಕ್ರಮದ ಕಥಾನಿರೂಪಕಿಯಾಗಿ ಜನರ ಉತ್ಸಾಹವನ್ನು ಕಾಯ್ದಿರಿಸುವಲ್ಲಿ ಯಶಸ್ವಿಯಾದರು.

ಈ ಕಾರ್ಯಕ್ರಮ ಭಕ್ತರ, ಕಲಾ ರಸಿಕರ ಹಾಗೂ ಪ್ರಾಯೋಜಕರ ಔದಾರ್ಯತೆಯ ಫಲಸ್ವರೂಪ. ಅವರ ದೇಣಿಗೆ ಒಂದು ಶುಭ ಕಾರ್ಯಕ್ಕೆ ವಿನಿಯೋಗವಾಗುವಂತೆ ಆಶ್ವಾಸನೆ ಕೊಟ್ಟ ಯುಕೆ ಬೃಂದಾವನ ಮಠದ ಟ್ರಸ್ಟಿ ಹಾಗೂ ನಿರ್ದೇಶಕರಾದ ಶ್ರೀಹರಿಯವರು ಅಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಇಡೀ ಕಾರ್ಯಕ್ರಮದ ರೂವಾರಿಯಾಗಿ ಈ ಮಟ್ಟಿಗೆ ಯಶಸ್ವಿಯಾಗಲು ಬಹಳ ಶ್ರಮಿಸಿದ್ದಾರೆ.

*ರಾಧಿಕಾ ಜೋಶಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next