Advertisement

ಪದಕ ಗೆದ್ದರೂ ಕ್ರೀಡಾಪಟುಗಳಿಗೆ ಸಿಕ್ಕಿಲ್ಲ ಕಾಸು!

03:45 AM Jan 30, 2017 | Team Udayavani |

ಬೆಂಗಳೂರು: ಒಲಂಪಿಕ್ಸ್‌ ಚಿನ್ನ ವಿಜೇತರಿಗೆ ಕೋಟ್ಯಂತರ ನಗದು ಬಹುಮಾನ ನೀಡುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ಘೋಷಣೆ ಮಾಡಿದ್ದರು. ಆದರೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಕ್ರೀಡಾ ಇಲಾಖೆ ಕಳೆದ ಮೂರು ವರ್ಷಗಳಿಂದ ನಗದು ಪುರಸ್ಕಾರವನ್ನೇ ನೀಡಿಲ್ಲ.

Advertisement

ಹೌದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಇಲಾಖೆ ಸುಮಾರು 14.5 ಕೋಟಿ ರೂ. ನಗದು ಪುರಸ್ಕಾರ ನೀಡಬೇಕಿದ್ದು,  ಹಣದ ಕೊರತೆ ಉಂಟಾಗಿದೆ. ಹೀಗಾಗಿ 2014ನೇ ಸಾಲಿನಿಂದ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿಯೇ ಇಲ್ಲ.

2014ರಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ವಿಜೇತ ರಾಜ್ಯದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಗಿದೆ. ಅದೇ ಕೊನೆ, ಆನಂತರ ಯಾವುದೇ ನಗದು ಪುರಸ್ಕಾರ ನೀಡಲಾಗಿಲ್ಲ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 5 ಕೋಟಿ ರೂ., ಬೆಳ್ಳಿ ಗೆದ್ದರೆ 3 ಕೋಟಿ ರೂ. ಹಾಗೂ ಕಂಚಿನ ಪದಕ ಗೆದ್ದರೆ 2 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರಾದರೂ ಹಣ ಲಭ್ಯವಿಲ್ಲದ ಕಾರಣ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ನೀಡಬೇಕಿದ್ದ ನಗದು ಪುರಸ್ಕಾರವನ್ನು ಇನ್ನೂ ನೀಡಿಲ್ಲ. ಸೂಕ್ತ ಸಮಯದಲ್ಲಿ ಪದಕ ಪುರಸ್ಕಾರದ ಮೊತ್ತ ಸಿಗದಿರುವುದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ತೀವ್ರ ತೊಂದೆರೆಯಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ.

3 ವರ್ಷದಿಂದ ಅರ್ಜಿಯೇ ಸ್ವೀಕರಿಸಿಲ್ಲ!: ನಗದು ಪುರಸ್ಕಾರಕ್ಕೆ ಪದಕ ಗೆದ್ದವರಿಂದ ಇಲಾಖೆ ಅರ್ಜಿ ಆಹ್ವಾನಿಸುತ್ತದೆ. ಅರ್ಜಿ ಸಲ್ಲಿಸಲು ಇಲಾಖೆ ದಿನಾಂಕ ನಿಗದಿಪಡಿಸುತ್ತಿದ್ದು, ಅದರೊಳಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ನಂತರ ಅರ್ಹರ ಪಟ್ಟಿ ಸಿದಟಛಿಪಡಿಸಿ ನಂತರವಷ್ಟೇ ಹಣ ಬಿಡುಗಡೆಯಾಗುತ್ತದೆ.ಅದರಂತೆ 2014ರಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಂದ ಕ್ರೀಡಾ ಇಲಾಖೆ ಅರ್ಜಿ ಸ್ವೀಕರಿಸಿದೆ. 

Advertisement

ಆದರೆ, ಪದಕ ವಿಜೇತರ ನಗದು ಬಹುಮಾನದ ಅಧಿಕೃತ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಅಲ್ಲದೆ 2015ರಿಂದ 2017ರವರೆಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಪದಕ ವಿಜೇತರ ನಗದು ಬಹುಮಾನಕ್ಕೆ ಇನ್ನೂ ಅರ್ಜಿಯನ್ನೇ ಸ್ವೀಕರಿಸಿಲ್ಲ.

14.50 ಕೋಟಿ ರೂ.ಬೇಕು: ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡಲು ಕ್ರೀಡಾ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ ಎನ್ನುತ್ತವೆ ಇಲಾಖೆ ಮೂಲಗಳು. ಈ ಬಗ್ಗೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿನೀಡಿ, ಕಳೆದ ಬಜೆಟ್‌ನಲ್ಲಿ ಕ್ರೀಡೆಗೆಂದು ಒಟ್ಟಾರೆ 170 ಕೋಟಿ ರೂ. ನೀಡಲಾಗಿತ್ತಾದರೂ ಅದು ಸಾಕಾಗಿರಲಿಲ್ಲ. ಹೀಗಾಗಿ ಪದಕ ವಿಜೇತರಿಗೆ ನಗದು ಪುರಸ್ಕಾರ ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷದಲ್ಲಿ ನಗದು ಪುರಸ್ಕಾರಕ್ಕಾಗಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷದ ಪದಕ ವಿಜೇತರಿಗೆ ಪುರಸ್ಕಾರ ನೀಡಲು ಸುಮಾರು 14.5 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಬೇಕಾಗಿದೆ. ಕಳೆದ ರಾಷ್ಟ್ರೀಯ ಗೇಮ್‌ನಲ್ಲಿ ಗೆದ್ದವರಿಗೆ ನೀಡಲು 4 ಕೋಟಿ ರೂ. ಬಾಕಿ ಇತ್ತು. ಅದರಲ್ಲಿ ಶೇ.50ರಷ್ಟು ನೀಡಿದ್ದೇವೆ. ಇನ್ನೂ ಶೇ.50 ಬಾಕಿ ಉಳಿದುಕೊಂಡಿದೆ. ಹೀಗಾಗಿ ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಕಡತಕ್ಕೆ ಸಹಿ ಹಾಕಿ ಹಣಕಾಸು ಇಲಾಖೆಯ ಅನುಮೋದನೆಗೆ ಕಳುಹಿಸಿಕೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ಏನಿದು ನಗದು ಪುರಸ್ಕಾರ?
ರಾಷ್ಟ್ರೀಯ ಚಾಂಪಿಯನ್‌ಶಿಪ್‌, ರಾಷ್ಟ್ರೀಯ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಶಿಪ್‌, ವಿಶ್ವ ಚಾಂಪಿಯನ್‌ಶಿಪ್‌, ವಿಶ್ವಕಪ್‌, ಐವಾಸ್‌ ಗೇಮ್ಸ್‌ ಸೇರಿದಂತೆ ಮಾನ್ಯತೆ ಹೊಂದಿರುವ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡುವ ಯೋಜನೆ ರಾಜ್ಯ ಸರ್ಕಾರದಲ್ಲಿದೆ. ಪ್ರತಿ ವರ್ಷ ಅರ್ಹರಿಗೆ ಈ ಪುರಸ್ಕಾರ ನೀಡಲಾಗುತ್ತದೆ.

ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರೆ 50 ಲಕ್ಷ ರೂ., ಬೆಳ್ಳಿ ಗೆದ್ದರೆ 25 ಲಕ್ಷ ರೂ., ಕಂಚು ಗೆದ್ದರೆ 10 ಲಕ್ಷ ರೂ. ನೀಡಲಾಗುತ್ತದೆ. ಕಾಮನ್ವೆಲ್ತ್‌ನಲ್ಲಿ ಚಿನ್ನ- 25 ಲಕ್ಷ ರೂ., ಬೆಳ್ಳಿ- 15 ಲಕ್ಷ ರೂ., ಕಂಚು- 10 ಲಕ್ಷ ರೂ., ಏಷ್ಯನ್‌ ಚಾಂಪಿಯನ್‌ಶಿಪ್‌/ಏಷ್ಯನ್‌ ಗೇಮ್ಸ್‌ ಚಿನ್ನ- 10 ಲಕ್ಷ ರೂ., ಬೆಳ್ಳಿ- 7 ಲಕ್ಷ ರೂ., ಕಂಚು- 5 ಲಕ್ಷ ರೂ. ಕೊಡಲಾಗುತ್ತದೆ. ಅದೇ ರೀತಿ ಕಿರಿಯರ ಕಾಮನ್ವೆಲ್ತ್‌ನಲ್ಲಿ ಚಿನ್ನ ಗೆದ್ದವರಿಗೆ 15 ಲಕ್ಷ ರೂ., ಬೆಳ್ಳಿ- 10 ಲಕ್ಷ ರೂ., ಕಂಚು- 5 ಲಕ್ಷ ರೂ., ರಾಷ್ಟ್ರೀಯ ಚಾಂಪಿಯನ್‌ಶಿಪ್‌, ಅಂತಾರಾಜ್ಯ, ಅಂತರ್‌ ವಲಯ, ಫ‌ಡರೇಷನ್‌ ಕಪ್‌ನಲ್ಲಿ ಚಿನ್ನದ ಪದಕ ಗೆದ್ದವರಿಗೆ 1 ಲಕ್ಷ ರೂ., ಬೆಳ್ಳಿ- 50 ಸಾವಿರ ರೂ., ಕಂಚು- 25 ಸಾವಿರ ರೂ., ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನ ಗೆದ್ದರೆ 50 ಸಾವಿರ ರೂ., ಬೆಳ್ಳಿ- 25 ಸಾವಿರ ರೂ., ಕಂಚು- 15 ಸಾವಿರ ರೂ., ಸಬ್‌ ಜೂನಿಯರ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದರೆ 25 ಸಾವಿರ ರೂ., ಬೆಳ್ಳಿ- 15 ಸಾವಿರ ರೂ.,ಕಂಚು- 10 ಸಾವಿರ ರೂ. ನಗದು ಪುರಸ್ಕಾರವನ್ನು ಸರ್ಕಾರ ನೀಡುತ್ತದೆ.

ಬಹಳಷ್ಟು ಶ್ರಮವಹಿಸಿ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದೆ. ಸುಮಾರು 3 ವರ್ಷದಲ್ಲಿ 10ಕ್ಕೂ ಹೆಚ್ಚಿನ ಪದಕ ಗೆದ್ದಿದ್ದೇನೆ. ಗೆದ್ದ ಪದಕಗಳಿಗೆ ಇಲಾಖೆ ಇದುವರೆಗೆ ನಗದು ಪುರಸ್ಕಾರ ನೀಡಿಲ್ಲ. ಹಣದ ಅಭಾವದಿಂದ ಅಭ್ಯಾಸಕ್ಕೂ ತೊಂದರೆಯಾಗಿದ್ದು, ಸರ್ಕಾರ ಕೂಡಲೇ ಪುರಸ್ಕಾರ ನೀಡಿದರೆ ಇನ್ನಷ್ಟು ಸಾಧನೆಗೆ ಅನುಕೂಲವಾಗುತ್ತದೆ.
– ಹೆಸರು ಹೇಳಲಿಚ್ಛಿಸದ ನೊಂದ ಕ್ರೀಡಾಪಟು

ಅರ್ಹ ಪದಕ ವಿಜೇತ ಕ್ರೀಡಾಪಟುಗಳಿಗೆ ಸಿಗಬೇಕಿರುವ ನಗದು ಪುರಸ್ಕಾರ ಕುರಿತು ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದು, ಅವರು ಈ ಕುರಿತ ಕಡತಕ್ಕೆ ಸಹಿ ಹಾಕಿದ್ದಾರೆ. ಪ್ರಸ್ತುತ ಕಡತ ಆರ್ಥಿಕ ಇಲಾಖೆ ಮುಂದಿದೆ. ಬಾಕಿ ಇರುವ 14.50 ಕೋಟಿ ರೂ. ಮೊತ್ತವನ್ನು ಶೀಘ್ರದಲ್ಲೇ ಕ್ರೀಡಾಪಟುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
– ಪ್ರಮೋದ್‌ ಮಧ್ವರಾಜ್‌,
ಯುವಜನ ಮತ್ತು ಕ್ರೀಡಾ ಸಚಿವ

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next