ನ್ಯಾಯ್ ಯೋಜನೆಗೆ ಕಳ್ಳರ ಜೇಬಿನಿಂದ ಹಣ: ರಾಹುಲ್ ತಿರುಗೇಟು
Advertisement
ಹೊಸದಿಲ್ಲಿ: ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರ ಬಿಸಿ ಪಡೆದುಕೊಂಡಿದೆ. ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ಮಹಾರಾಷ್ಟ್ರಗಳಲ್ಲಿ ರ್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೀ ಸುಳ್ಳುಗಳೇ ತುಂಬಿವೆ ಎಂದು ಆರೋಪಿಸಿದರು. 2004ರ ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರಸ್ತಾವಿಸಿರುವ ಮೋದಿ ಅವರು, ಆಗಲೇ ಅವರು ದೇಶದ ಎಲ್ಲ ಗ್ರಾಮಗಳನ್ನೂ ವಿದ್ಯುದೀಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ನಾವೀಗ ಈಡೇರಿಸಿದ್ದೇವೆ. ನಾವು ಅವರಂತೆ ಭರವಸೆ ನೀಡುವುದಿಲ್ಲ, ಬದಲಾಗಿ ಈಡೇರಿಸುತ್ತೇವೆ ಎಂದಿದ್ದಾರೆ.
ಪ್ರಣಾಳಿಕೆಯಲ್ಲಿನ ನ್ಯಾಯ್ ಯೋಜನೆಗೆ ಎಲ್ಲಿಂದ ಹಣ ಬರುತ್ತೆ ಎಂಬ ಪ್ರಶ್ನೆಗೆ ಉತ್ತರಿ ಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, “ಚೌಕಿದಾರ್’ ಸಹಾಯದೊಂದಿಗೆ ದೇಶವನ್ನು ಕೊಳ್ಳೆ ಹೊಡೆದಿರುವವರ ಕಿಸೆಯಿಂದ ಬರುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಅಸ್ಸಾಂನ ಲಖೀಂ ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ನೋಟು ಅಪಮೌಲ್ಯದ ವೇಳೆ ನೀರವ್ ಮೋದಿ, ಮೆಹುಲ್ ಚೋಸ್ಕಿ ಮತ್ತು ಅನಿಲ್ ಅಂಬಾನಿ ಬ್ಯಾಂಕ್‌ಗಳ ಮುಂದೆ ಕ್ಯೂನಲ್ಲಿ ನಿಲ್ಲಲಿಲ್ಲ. ಬದಲಾಗಿ ಅವರು ಚೌಕಿದಾರ್ (ಮೋದಿ) ಅವರ ಸಹಾಯದಿಂದ ದೇಶವನ್ನು ಕೊಳ್ಳೆ ಹೊಡೆದರು ಎಂದು ಆರೋಪಿಸಿದರು.
Related Articles
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಯಾರಿಸಿರುವ ಪ್ರಣಾಳಿಕೆಯನ್ನು ಗುರುವಾರ ದೇಶಾದ್ಯಂತ 22 ಕಡೆ ಬಿಡುಗಡೆ ಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಕಪಿಲ್ ಸಿಬಲ್ ಅವರು ಪ್ರಣಾಳಿಕೆ ಬಿಡುಗಡೆ ಮಾಡಲಿರುವರು ಎಂದು ಪ್ರಕಟನೆ ತಿಳಿಸಿದೆ.
Advertisement
ಇಂದು ವಯನಾಡ್‌ನಿಂದ ರಾಹುಲ್ ನಾಮಪತ್ರಕಲ್ಲಿಕೋಟೆ: ಉತ್ತರಪ್ರದೇಶದ ಅಮೇಠಿ ಹೊರತಾಗಿ ಕೇರಳದ ವಯನಾಡ್‌ನಿಂದಲೂ ಸ್ಪರ್ಧಿಸುವುದಾಗಿ ಘೋಷಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ವಯನಾಡ್‌ನಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕೂಡ ಸಾಥ್ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ರಾಹುಲ್ ಗಾಂಧಿ ಅವರು ರೋಡ್ ಶೋ ಕೂಡ ನಡೆಸಲಿದ್ದು, ವಯನಾಡ್ ಮತ್ತು ಕಲ್ಲಿಕೋಟೆಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬುಧವಾರ ರಾತ್ರಿ 8.30ಕ್ಕೆ ಅವರು ಕೇರಳ ತಲುಪಲಿದ್ದು, ಪಕ್ಷದ ಮತ್ತು ಯುಡಿಎಫ್ ಮಿತ್ರಪಕ್ಷಗಳ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಇದೇ ವೇಳೆ, ವಯನಾಡ್‌ನ ನೆಲದಲ್ಲಿ ಹೇಗೆ ಚುನಾವಣೆ ಎದುರಿಸಬೇಕು ಎಂಬುದನ್ನು ನಾವು ರಾಹುಲ್ ಗಾಂಧಿ ಅವರಿಗೆ ತೋರಿಸಿಕೊಡಲಿದ್ದೇವೆ ಎಂದು ಸಿಪಿಎಂ ಸವಾಲು ಹಾಕಿದೆ. ಇನ್ನೊಂದೆಡೆ ಸೋಲಾರ್ ಹಗರಣದ ಆರೋಪಿಯಾಗಿರುವ ಸರಿತಾ ನಾಯರ್ ಇದೇ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.