Advertisement

ಅಬ್ಟಾ! ಅನಂತ; ಸೋಲಿನಲ್ಲೇ “ಆನಂದ’ಕಂಡ ಅಸ್ನೋಟಿಕರ

01:28 AM May 24, 2019 | mahesh |

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಫೈರ್‌ ಬ್ರಾಂಡ್‌ ಎಂದೇ ಹೆಸರಾದ, ಕಟು ಹಿಂದುತ್ವ ಸಿದ್ಧಾಂತ ಪ್ರತಿಪಾದಿಸುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಭರ್ಜರಿ ಗೆಲುವ ಸಾಧಿಸಿದ್ದಾರೆ. ಈ ಮೂಲಕ ಆರನೇ ಸಲ ಲೋಕಸಭೆ ಪ್ರವೇಶಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದುವರೆಗೆ ಏಳು ಸಲ ಲೋಕಸಭೆಗೆ ಸ್ಪರ್ಧಿಸಿರುವ ಅವರು ಒಮ್ಮೆ ಮಾತ್ರ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್‌ ಆಳ್ವಾ ವಿರುದ್ಧ ಸೋತಿದ್ದರು. ನಂತರ ಸತತ ಗೆಲುವು ಸಾಧಿಸಿದ್ದಾರೆ. ಇದು ಅವರ ಸತತ 5ನೇ ಗೆಲುವು. ಉತ್ತರ ಕನ್ನಡದ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕೆ ಇಳಿಸಿರಲಿಲ್ಲ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್‌ ಕಣಕ್ಕೆ ಇಳಿಸಿತ್ತಾದರೂ, ಜೆಡಿಎಸ್‌ ಗೆಲುವಿನ ಸಮೀಪಕ್ಕೆ ಸಹ ಬರಲಾಗಿಲ್ಲ. ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆ ಈ ಸಲ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಿಂದ (4,79,649) ಗೆದ್ದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಖಾನಾಪುರ ಮತ್ತು ಕಾರವಾರ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಗಡೆ ಅವರಿಗೆ ಮತದಾರರು ಭಾರೀ ಬೆಂಬಲ ವ್ಯಕ್ತಪಡಿಸಿದ್ದು ಮತದಾನದಲ್ಲಿ ದಾಖಲಾಗಿದೆ. ರಾಜಕೀಯ ಸನ್ನಿವೇಶ ಸಹ ಬಿಜೆಪಿ ಪರವಾಗಿ ಇತ್ತು. ಖಾನಾಪುರ, ಯಲ್ಲಾಪುರ, ಹಳಿಯಾಳದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರು ಇದ್ದರು . ಆದರೂ ಖಾನಾಪುರದಲ್ಲಿ ಅತೀ ಹೆಚ್ಚು ಮತಗಳು ಬಿಜೆಪಿಗೆ ಬಂದಿವೆ.

ಅಲ್ಲದೇ ಮೈತ್ರಿ ಅಭ್ಯರ್ಥಿ ಪರ ಕಾಟಾಚಾರಕ್ಕೆ ಪ್ರಚಾರ ಮಾಡಲಾಗಿತ್ತು. ಹಾಗಾಗಿ ಕಾಂಗ್ರೆಸ್‌ ಮತಗಳು ಸಹ ಬಿಜೆಪಿಗೆ ವರ್ಗವಾಗಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ವಾಸ್ತವಾಗಿ ಜೆಡಿಎಸ್‌ಗಿಂತ ಕಾಂಗ್ರೆಸ್‌ ಪಕ್ಷಕ್ಕೆ ಸ್ವಲ್ಪವಾದರೂ ಅನುಕೂಲಕರ ವಾತಾವರಣ ಇತ್ತು. ಉತ್ತರ ಕನ್ನಡದಲ್ಲಿ ನೆಲೆಯೇ ಇಲ್ಲದ ಜೆಡಿಎಸ್‌ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿತು. ಅಲ್ಲದೇ ಇಡೀ ಜಿಲ್ಲೆಗೆ ಗೊತ್ತಿಲ್ಲದ, ಪಕ್ಷಾಂತರ ರಾಜಕಾರಣಕ್ಕೆ ಹೆಸರಾದ ಆನಂದ ಅಸ್ನೋಟಿಕರ್‌ ಜೆಡಿಎಸ್‌ ಅಭ್ಯರ್ಥಿಯಾದದ್ದೇ ತಡ ಬಿಜೆಪಿ 3 ಲಕ್ಷ ಮತಗಳ ಅಂತರಿಂದ ಗೆಲ್ಲುವ ಮಾತನ್ನು ಆಡಿತು. ಜೆಡಿಎಸ್‌ ಅಭ್ಯರ್ಥಿ ಪ್ರಚೋದನಾತ್ಮಕ ಪದ ಪ್ರಯೋಗ ಮಾಡಿದರೂ ಅನಂತಕುಮಾರ್‌ ತಾಳ್ಮೆ ಕಳೆದುಕೊಳ್ಳಲಿಲ್ಲ. ಉದ್ವಿಗ್ನ ಭಾಷಣ ಮಾಡದೆ ಮೋದಿ ಹೆಸರಲ್ಲಿ ಮತಯಾಚಿಸಿದರು. ಕಾರವಾರದ ಪ್ರಚಾರ ಸಭೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬಂದಾಗಲೂ ಸಹ ಅಭ್ಯರ್ಥಿಯಾಗಿದ್ದ ಅನಂತ ಕುಮಾರ್‌ ಹೆಗಡೆ ಮಾತು ಸಹ ಆಡಲಿಲ್ಲ. ರಾಜಕೀಯ ಚದುರಂಗದಾಟದಲ್ಲಿ ದಳ ಮಕಾಡೆ ಮಲಗಿದೆ.

ಗೆಲುವಿಗೆ 3 ಕಾರಣ
1. ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಬಿಜೆಪಿ ಮತ ಯಾಚಿಸಿದ್ದು
2. ಅನಂತಕುಮಾರ್‌ ಹೆಗಡೆ ತೀವ್ರ ಹಿಂದುತ್ವ ಭಾಷಣಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದು
3. ಬಿಜೆಪಿಯ ವ್ಯವಸ್ಥಿತ ಪ್ರಚಾರ. 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರ, ಕಾರ್ಯಕರ್ತರ ಶ್ರಮ

ಸೋಲಿಗೆ 3 ಕಾರಣ
1. ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಬಳಸಿದ ಭಾಷೆ, ಪಕ್ಷಾಂತರದ ಹಿನ್ನೆಲೆ
2. ಕಾಂಗ್ರೆಸ್‌ ಪಕ್ಷದ ನಾಯಕರು ಪ್ರಚಾರದಿಂದ ದೂರವೇ ಉಳಿದದ್ದು
3. ಜನರ ಹಿತಕ್ಕಾಗಿ ಕೆಲಸ ಮಾಡದ ವ್ಯಕ್ತಿ ಎಂಬ ಭಾವನೆ ಮತದಾರರಲ್ಲಿ ಇತ್ತು

Advertisement

ಉತ್ತರ ಕನ್ನಡ (ಬಿಜೆಪಿ)
ವಿಜೇತರು ಅನಂತಕುಮಾರ ಹೆಗಡೆ
ಪಡೆದ ಮತ 7,86,042
ಎದುರಾಳಿ ಆನಂದ ಅಸ್ನೋಟಿಕರ್‌ (ಜೆಡಿಎಸ್‌)
ಪಡೆದ ಮತ 3,06,393
ಗೆಲುವಿನ ಅಂತರ 4,79,649
ಕಳೆದ ಬಾರಿ ಗೆದ್ದವರು: ಅನಂತಕುಮಾರ ಹೆಗಡೆ (ಬಿಜೆಪಿ)

ಬಿಜೆಪಿಗೆ ಹೆಚ್ಚು ಮತ ತಂದ ಎರಡನೇ ಸ್ಥಾನ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಕಾರ್ಯಕರ್ತರ ಶ್ರಮವೂ ಇದರಲ್ಲಿದೆ. ಎಲ್ಲರೂ ಶ್ರಮಿಸಿದರೆ ಎಂಥ ಗೆಲುವು ಸಾಧ್ಯ ಎಂಬುದಕ್ಕೆ ನನ್ನ ಗೆಲುವೇ ಸಾಕ್ಷಿ. 
ಅನಂತಕುಮಾರ್‌ ಹೆಗಡೆ

ಗೆಲುವಿನ ನಿರೀಕ್ಷೆಯೊಂದಿಗೆ ಸ್ಪರ್ಧಿಸಿದ್ದೆ. ನಾನು ತಿಳಿದುಕೊಂಡಂತೆ ಜನರು ನನ್ನ ಕೈ ಹಿಡಿಯಲಿಲ್ಲ. ಕಾಂಗ್ರೆಸ್‌ನ ಮತಗಳು ಕೂಡ ಬಿಜೆಪಿ ಪಾಲಾದವು. ಇದರಿಂದ ನನಗೆ ಸೋಲಾಗಿದೆ. ಜನರ ತೀರ್ಮಾನವನ್ನು ತಲೆಬಾಗಿ ಸ್ವೀಕರಿಸುತ್ತೇನೆ.
● ಆನಂದ ಅಸ್ನೋಟೀಕರ್‌, ಜೆಡಿಎಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next