Advertisement

ಭಗವಂತನ ಮುಂದೆ ಈಶ್ವರ ಶರಣಾಗತಿ!

04:50 AM May 24, 2019 | Team Udayavani |

ಬೀದರ: ಜಿದ್ದಾಜಿದ್ದಿನ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ತೀವ್ರ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಎರಡನೇ ಬಾರಿಗೆ 1.16 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಮೊದಲನೇ ಸುತ್ತಿನಿಂದ ಸತತವಾಗಿ 20 ಸುತ್ತುಗಳಲ್ಲೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮುನ್ನಡೆ ಸಾಧಿ ಸುತ್ತಲೇ ಹೋಗಿ ಕಡೆಗೆ ವಿಜಯದ ಮಾಲೆ ಧರಿಸುವಲ್ಲಿ ಯಶಸ್ವಿಯಾದರು. 20ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ 5,85,471 ಮತಗಳು ಪಡೆದುಕೊಂಡರೆ, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ 4,68,637 ಮತ
ಪಡೆದುಕೊಂಡಿದ್ದಾರೆ. 1,16,834 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಖೂಬಾ ಗೆಲುವು
ದಾಖಲಿಸಿದ್ದಾರೆ. ಭಾಲ್ಕಿ ಕ್ಷೇತ್ರದಿಂದ ಸತತ ಮೂರುಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಈಶ್ವರ
ಖಂಡ್ರೆ ಅವರು, ಅಖೀಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಕೂಡ ಆಗಿದ್ದು, ಲೋಕಸಭೆ
ಚುನಾವಣೆಯಲ್ಲಿ ಗೆಲ್ಲುವ ಕುದರೆ ಹಾಗೂ ಮೋದಿ ಗಾಳಿ ತಡೆಯುವ ಶಕ್ತಿ ಹೊಂದಿದ್ದಾರೆ ಎಂದು ಪಕ್ಷದ
ಮುಖಂಡರು ಗುರುತಿಸಿ ಚುನಾವಣಾ ಕಣಕ್ಕೆ ಇಳಿಸಿದ್ದರು. ಆದರೆ, ಚುನಾವಣೆ ಫಲಿತಾಂಶದಲ್ಲಿ ಒಂದು ಲಕ್ಷಕ್ಕೂ ಅ ಧಿಕ ಮತಗಳಿಂದ ಸೋಲುವ ಮೂಲಕ ಈಶ್ವರ ಖಂಡ್ರೆಗೆ ತೀವ್ರ ಮುಖಭಂಗವಾಗಿದೆ. ಜಿಲ್ಲೆಯಲ್ಲಿ ಮೂವರು ಕ್ಯಾಬಿನೆಟ್‌ ಸಚಿವರು, ಮೂವರು ವಿಧಾನ ಪರಿಷತ್‌ ಸದಸ್ಯರ ಬಲವಿದ್ದರೂ ಗೆಲುವು ದಕ್ಕಿಸಿಕೊಳ್ಳುವಲ್ಲಿ ಖಂಡ್ರೆ ವಿಫಲರಾಗಿದ್ದಾರೆ. ಈ ಮೂಲಕ ಗಡಿ ಜಿಲ್ಲೆಯಲ್ಲಿ ಕೇಸರಿ ಪಡೆ ಮತ್ತಷ್ಟು ಭದ್ರ ಬುನಾದಿ ಹಾಕಿಕೊಂಡಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌ ನಾಯಕರಿಗೆ ಮುಖಕ್ಕೆ ಹೊಡೆದ ಹಾಗೇ ಜವಾಬು ಕೊಟ್ಟಿರುವ ಬಿಜೆಪಿ ಪಡೆ ಗೆಲುವಿನ ಕೇಕೆ ಹಾಕುತ್ತಿದೆ. 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಸ್ಪರ್ಧೆ ನಡೆಸಿದ್ದ ಬಿಜೆಪಿ ಅಭ್ಯರ್ಥಿ ಖೂಬಾ, ಮಾಜಿ ಮುಖ್ಯಮಂತ್ರಿ ದಿ| ಎನ್‌.ಧರ್ಮಸಿಂಗ್‌ ಅವರನ್ನು 93 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಆ ಚುನಾವಣೆಯಲ್ಲಿ ಮೋದಿ ಗಾಳಿಯಲ್ಲಿಯೇ ಗೆಲುವು ಕಂಡ ಭಗವಂತ ಖೂಬಾ ಇದೀಗ ಮತ್ತೆ ಎರಡನೇ ಬಾರಿ ಕೂಡ ಮೋದಿ ಗಾಳಿಯಲ್ಲಿ ಜಯಗಳಿಸಿದ್ದಾರೆ. ಕ್ಷೇತ್ರದ ಜನತೆ ಮೈತ್ರಿ ಪಕ್ಷದ ಶಾಸಕರು ಹಾಗೂ ಸಚಿವರಿಗೆ ಮಣೆ ಹಾಕಿಲ್ಲ. ಸ್ವತಃ ಈಶ್ವರ ಖಂಡ್ರೆ ಕ್ಷೇತ್ರದಲ್ಲಿಯೇ 12ಸಾವಿರಕ್ಕೂ
ಅಧಿಕ ಮತಗಳು ಬಿಜೆಪಿ ಲೀಡ್‌ ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ನಿದ್ದೆಗೆಡಿಸಿದೆ.

Advertisement

ಮೋದಿ ಹಾಗೂ ದೇಶದ ಅಭಿವೃದ್ಧಿಗಾಗಿ ಜನತೆ ಕೈಹಿಡಿದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗೆ ನಾನು ಕೊಟ್ಟ 420 ಹೈವೋಲ್ಟೆಜ್‌ ಶಾಕ್‌ ತಡೆಯಲಾಗದೆ ಔಟ್‌ ಆಗಿದ್ದಾರೆ.
● ಭಗವಂತ ಖೂಬಾ, ಸಂಸದ

ಜನಾದೇಶ ಗೌರವಿಸುತ್ತೇನೆ. ಬೀದರ್‌ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಭಗವಂತ್‌ ಖೂಬಾ
ಹಾಗೂ ಪ್ರಧಾನಿ ನರೇಂದ್ರ ಅವರಿಗೆ ಅಭಿನಂದಿಸುತ್ತೇನೆ.
● ಈಶ್ವರ ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿೆ

Advertisement

Udayavani is now on Telegram. Click here to join our channel and stay updated with the latest news.

Next