ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿರುವ ಇಪ್ಪತ್ತಾರು ಲೋಕಸಭಾ ಕ್ಷೇತ್ರಗಳ ಪೈಕಿ ಪ್ರಮುಖ ಕ್ಷೇತ್ರ ಅಹಮದಾಬಾದ್ ಪೂರ್ವ. 2014ರ ಚುನಾವಣೆ ವೇಳೆಗೆ ಕ್ರೀಡೆ, ಸಿನಿಮಾ ಕ್ಷೇತ್ರದ ಪ್ರಮುಖ ಗಣ್ಯರು ಬಿಜೆಪಿ ಸೇರಿ ಸ್ಪರ್ಧೆ ಮಾಡಿ ಗೆದ್ದವರ ಪೈಕಿ ಬಾಲಿವುಡ್ ನಟ ಪರೇಶ್ ರಾವಲ್. ಕಾಂಗ್ರೆಸ್ ಅಭ್ಯರ್ಥಿ ಹಿಮಾಂತ್ ಸಿಂಗ್ ಪಟೇಲ್ ವಿರುದ್ಧ ಬರೋಬ್ಬರಿ 3,26, 633 ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶ ಮಾಡಿ ದ್ದಾರೆ. ಹಾಲಿ ಚುನಾವಣೆಯಲ್ಲಿ ರಾವಲ್ ಸ್ಪರ್ಧೆಗೆ ಹಿಂದೇಟು ಹಾಕಿರುವುದರಿಂದ ಶಾಸಕ ಹಸು¾ಖ್ ಎಸ್.ಪಟೇಲ್ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ನಿಂದ ಪಟೇಲ್ ಸಮುದಾಯಕ್ಕೆ ಸೇರಿದ ಗೀತಾ ಬೆನ್ ಪಟೇಲ್ ಅವರನ್ನು ಸ್ಪರ್ಧೆಗೆ ಇಳಿಸಿದೆ. ಅಂದ ಹಾಗೆ ಕಾಂಗ್ರೆಸ್ ಹುರಿಯಾಳು ಪಟೇಲರಿಗೆ ಮೀಸಲು ನೀಡುವ ಹೋರಾಟ ಸಮಿತಿ ಮತ್ತು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರ ನಿಕಟವರ್ತಿ ಯಾಗಿದ್ದಾರೆ.
ಕ್ಷೇತ್ರದ ಸಂಸದರಾಗಿ 25 ಕೋಟಿ ರೂ.ಮೌಲ್ಯದ ವಿವಿಧ ಕಾಮಗಾರಿಗಳನ್ನು ಆರಂಭಿಸಿದ್ದಾರೆ. ಗುಜರಾತ್‌ಗೆ ಸಂಬಂಧಿಸಿದಂತೆ 170 ಪ್ರಶ್ನೆಗಳನ್ನು ಕೇಳಿದ್ದಾರೆ. ಜತೆಗೆ ಶೇ.70ರಷ್ಟು ಹಾಜರಾತಿಯನ್ನೂ ಹೊಂದಿದ್ದಾರೆ. ಇದರ ಹೊರತಾಗಿಯೂ ಅವರು, ಕ್ಷೇತ್ರದಿಂದ ದೀರ್ಘಾವಧಿಯಲ್ಲಿ ಕಾಣಿಸುತ್ತಿರಲಿಲ್ಲ ಎಂಬ ಟೀಕೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣದಿಂದ ಹಾಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಕಠಿಣ ಸ್ಥಿತಿ ಎದುರಾಗಬಹುದು ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೇಟು ಹಾಕಿದರು ಎಂಬ ಕೆಲವು ವಾದಗಳು ಉಂಟು. ಆದರೆ ರಾವಲ್ ಹೆಸರು ಪಕ್ಷದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಇದೆ.
ಈ ಕ್ಷೇತ್ರದಲ್ಲಿ ಶೇ.83.7ರಷ್ಟು ಮಂದಿ ಜನರು ಹಿಂದೂ ಸಮುದಾಯಕ್ಕೆ ಸೇರಿದವರು. ಉದ್ಯೋಗ ಕ್ಷೇತ್ರದ ಬಗ್ಗೆ ಪ್ರಸ್ತಾಪಿಸುವುದಿದ್ದರೆ ವಜೊದ್ಯಮವೇ ಪ್ರಧಾನ. ಕೋಮು ವಿಚಾರಗಳಿಗೆ ಸೂಕ್ಷ್ಮವಾಗಿರುವ ಬಾಪುನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2015ರಲ್ಲಿ ಪಟೇಲರಿಗೆ ಮೀಸಲು ನೀಡಬೇಕು ಎಂಬ ಹೋರಾಟ ಶುರುವಾಗಿತ್ತು. ಅಲ್ಲಿಯೇ ಶೇ.20 ಮಂದಿ ಪಟೇಲ್, ಶೇ.28 ಮುಸ್ಲಿಂ, ಶೇ.18 ಮಂದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಇದ್ದಾರೆ. ಕಾಂಗ್ರೆಸ್‌ಗೆ ಈ ಬಾರಿಯ ಶಕ್ತಿ ನೀಡುವ ಅಂಶವೆಂದರೆ ಹಾರ್ದಿಕ್ ಪಟೇಲ್. ಅವರು ಅಧಿಕೃತವಾಗಿ ಪಕ್ಷಕ್ಕೇ ಸೇರ್ಪಡೆಯಾಗಿರುವು ದರಿಂದ ಈ ಕ್ಷೇತ್ರದಲ್ಲಿನ ಪಟೇಲ್ ಸಮುದಾಯದ ಮತಗಳು ತನಗೇ ಬರಲಿವೆ ಎನ್ನುವುದು ಆ ಪಕ್ಷದ ಲೆಕ್ಕಾಚಾರವಾಗಿದ್ದರೆ, ಬಿಜೆಪಿ ಎಂದಿನಂತೆಯೇ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನು ನಂಬಿದೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ದಹೇಗಮ್, ಗಾಂಧಿನಗರ ದಕ್ಷಿಣ, ವಾತ್ವಾ, ನಿಕೋಲ್, ನರೋದಾ, ತಕ್ಕಾರ್‌ಬಾಪಾನಗರ್ ಮತ್ತು ಬಾಪುನಗರ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡು ಹೊಸ ಕ್ಷೇತ್ರ ರಚಿಸಲಾಗಿತ್ತು. 2009ರಲ್ಲಿ ಈ ಕ್ಷೇತ್ರಕ್ಕೆ ಮೊದಲ ಲೋಕಸಭೆ ಚುನಾವಣೆ ನಡೆದಿತ್ತು. ಬಿಜೆಪಿಯ ಹರೇನ್ ಪಾಠಕ್ ಗೆದ್ದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ತೃತೀಯ ಲಿಂಗಿಯೊಬ್ಬರೂ ಕೂಡ ಸ್ಪರ್ಧೆ ಮಾಡಿದ್ದಾರೆ. ಅವರ ಹೆಸರು ನರೇಶ್ ಜೈಶ್ವಾಲ್. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ. ಈ ಬಾರಿಯಾದರೂ ಬದಲಾವಣೆ ತರಬೇಕು ಎಂಬ ಮನಸ್ಸಿನಿಂದ ಚುನಾವಣೆಯ ಕಣಕ್ಕೆ ಇಳಿಯುತ್ತಿದ್ದೇನೆ. ಆದರೆ ಅದಕ್ಕೆ ಸಮಯ ಬೇಕಾದೀತು ಎಂದು ಹೇಳುತ್ತಾರೆ ತೃತೀಯ ಲಿಂಗಿ ಅಭ್ಯರ್ಥಿ. ಅಂದ ಹಾಗೆ ಅವರದ್ದು ಇದು ಎರಡನೇ ಚುನಾವಣಾ ಹೋರಾಟವಂತೆ. 2015ರಲ್ಲಿ ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್‌ಗೆ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಚಾರ ನಡೆಸಿದ್ದಾರೆ.
2014ರ ಚುನಾವಣೆ
ಪರೇಶ್ ರಾವಲ್ (ಬಿಜೆಪಿ) 6,33, 582
ಹಿಮಾಂತ್ ಸಿಂಗ್ ಪಟೇಲ್ (ಕಾಂಗ್ರೆಸ್) 3,06, 949