Advertisement

ಪುತ್ತೂರು: “ಲೋಕಸಭೆ’ಸಮರಕ್ಕೆ ಸಿದ್ಧತೆ ಪೂರ್ಣ

11:58 PM Apr 17, 2019 | Team Udayavani |

ಪುತ್ತೂರು: ಲೋಕಸಭಾ ಚುನಾವಣೆ ಎ. 18ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಮತಗಟ್ಟೆಗಳು ಸರ್ವ ಸನ್ನದ್ಧಗೊಂಡಿವೆ. ಮಂಗಳವಾರ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 220 ಮತಗಟ್ಟೆಗಳಿವೆ. ಪುರುಷರು 1,01,473, ಮಹಿಳೆಯರು 1,02,956 ಸಹಿತ ಒಟ್ಟು 2,04,470 ಮಂದಿ ಮತದಾನದ ಅವಕಾಶ ಹೊಂದಿದ್ದಾರೆ.

Advertisement

ಸಹಾಯಕ ಆಯುಕ್ತರ ನೇತೃತ್ವ
ಬೆಳಗ್ಗೆ 9 ಗಂಟೆಗೆ ಮಸ್ಟರಿಂಗ್‌ ಕೇಂದ್ರಕ್ಕೆ ಎಲ್ಲ ಮತಗಟ್ಟೆಗಳ ಸಿಬಂದಿ ಆಗಮಿಸಿದ್ದರು. ಸಹಾಯಕ ಚುನಾವಣಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ 10 ಗಂಟೆಗೆ ಮಸ್ಟರಿಂಗ್‌ ಕಾರ್ಯ ಆರಂಭಗೊಂಡಿತು. ಮತದಾನ ಮಾಡಲು ಬೇಕಾದ ಎಲ್ಲ ಪರಿಕರಗಳನ್ನು ಹೊತ್ತುಕೊಂಡು ಸಿಬಂದಿ ಅಪರಾಹ್ನ ತಮಗೆ ನಿಗದಿ ಮಾಡಲಾದ ಮತಗಟ್ಟೆಗಳಿಗೆ ತೆರಳಿದರು. ಮತಗಟ್ಟೆ ಸಿಬಂದಿಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಅಲ್ಲೇ ಮಾಡಲಾಗಿತ್ತು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 20 ಸೆಕ್ಟರ್‌ ಆಫೀಸರ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಇವರ ಸಮನ್ವಯದಲ್ಲಿ ಪ್ರತೀ ಮತಗಟ್ಟೆಯಲ್ಲಿ ಪಿಆರ್‌ಒ, ಎಪಿಆರ್‌ಒ, ದ್ವಿತೀಯ ಪೋಲಿಂಗ್‌ ಆಫೀಸರ್‌, ತೃತೀಯ ಪೋಲಿಂಗ್‌ ಆಫೀಸರ್‌, ಡಿ ಗ್ರೂಪ್‌ ಸಿಬಂದಿ, ಪೊಲೀಸ್‌ ಸಹಿತ ಒಟ್ಟು 6 ಸಿಬಂದಿ ಕಾರ್ಯ ನಿರ್ವಹಿಸಿದ್ದಾರೆ. 1,300ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಯಲ್ಲಿ ಹೆಚ್ಚುವರಿ ಸಿಬಂದಿ ನಿಯೋಜಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ 53 ಭದ್ರತಾ ಆವಶ್ಯಕತೆಯ ಮತಗಟ್ಟೆಗಳಿದ್ದು, ಇವುಗಳಲ್ಲಿ ವಿಶೇಷ ಕೆಮರಾ ಕಣ್ಗಾವಲಿನ ನಿಗಾ ಇರಿಸಲಾಗಿದೆ.

ಬುಧವಾರ ಸಂಜೆ ಮತಗಟ್ಟೆ ತಲುಪಿದ ಸಿಬಂದಿ ಗುರುವಾರ ಸಂಜೆ ತಮ್ಮ ಕರ್ತವ್ಯ ಮುಗಿಯುವವರೆಗೂ ಅಲ್ಲೇ ಇರಲಿದ್ದಾರೆ. ಡಿ-ಮಸ್ಟರಿಂಗ್‌ ಕಾರ್ಯ ನಡೆದು ಎಲ್ಲ ಮತಯಂತ್ರಗಳು ಮಂಗಳೂರಿಗೆ ತೆರಳಿದ ಅನಂತರವಷ್ಟೇ ಅವರು ತಮ್ಮ ಕರ್ತವ್ಯದಿಂದ ತೆರವುಗೊಳ್ಳಲಿದ್ದಾರೆ.

ವಾಹನದ ವ್ಯವಸ್ಥೆ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,048 ಮತಗಟ್ಟೆ ಸಿಬಂದಿ ಕಾರ್ಯನಿರ್ವಹಿಸಲಿದ್ದು, ಇವರಿಗೆ ಮತಗಟ್ಟೆಗೆ ತೆರಳಲು 32 ಬಸ್ಸು, 32 ಮ್ಯಾಕ್ಸಿ ಕ್ಯಾಬ್‌ ಹಾಗೂ 21 ಜೀಪ್‌ಗ್ಳ ವ್ಯವಸ್ಥೆ ಮಾಡಲಾಗಿದೆ.

Advertisement

ಬಂದೋಬಸ್ತ್ಗೆ 2,119 ಸಿಬಂದಿ
ಲೋಕಸಭಾ ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಪೊಲೀಸ್‌ ಪುತ್ತೂರು ವಿಭಾಗ ವ್ಯಾಪ್ತಿಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ಕ್ಷೇತ್ರಗಳಲ್ಲಿ ಒಟ್ಟು 2,119 ಭದ್ರತಾ ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ.

ವಿಭಾಗ ವ್ಯಾಪ್ತಿಗೆ ಒಟ್ಟು 978 ಮತಗಟ್ಟೆಗಳು ಬರುತ್ತಿದ್ದು, 272 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. ಭದ್ರತಾ ವ್ಯವಸ್ಥೆಯ ದೃಷ್ಟಿಯಿಂದ ವಿಭಾಗದಲ್ಲಿ 102 ಸೆಕ್ಟರ್‌ಗಳನ್ನು ರಚಿಸಲಾಗಿದೆ. ಡಿವೈಎಸ್ಪಿ, ಇನ್‌ಸ್ಪೆಕ್ಟರ್‌, ಎಎಸ್‌ಐಗಳು ಮುಖ್ಯವಾಗಿದ್ದುಕೊಂಡು ಸೆಕ್ಟರ್‌ಗಳಲ್ಲಿ ಬಂದೋಬಸ್ತ್ ನಡೆಸಲಾಗುತ್ತದೆ.

ಒಟ್ಟು 1,463 ಮಂದಿ ಪೊಲೀಸ್‌ ಸಿಬಂದಿ ಹಾಗೂ ಅಧಿಕಾರಿಗಳು, 4 ಕೇಂದ್ರ ಮೀಸಲು ಸಶಸ್ತ್ರ ಪಡೆ (ಸಿಆರ್‌ಪಿಎಫ್‌), 5 ರಾಜ್ಯ ಮೀಸಲು ಸಶಸ್ತ್ರ ಪಡೆ (ಕೆಎಸ್‌ಆರ್‌ಪಿ) ಹಾಗೂ 16 ಜಿಲ್ಲಾ ಮೀಸಲು ಸಶಸ್ತ್ರ ಪಡೆ (ಡಿಆರ್‌ಸಿ) ತಂಡಗಳು ಮತಗಟ್ಟೆಗಳಲ್ಲಿ ಬಂದೋಬಸ್ತ್ ನಡೆಸಲಿದ್ದಾರೆ. ಸೂಕ್ಷ್ಮವೆನಿಸಿದ ಮತಗಟ್ಟೆಗಳಲ್ಲಿ ಹೆಚ್ಚು ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪುತ್ತೂರು ಡಿವೈಎಸ್ಪಿ ಅವರ ಪ್ರಕಟನೆ ತಿಳಿಸಿದೆ.

ಹೀಗಿರಲಿದೆ ಮತದಾನದ ವ್ಯವಸ್ಥೆ…
ಮತದಾನದ ಕೊಠಡಿಯೊಳಗೆ ಒಂದು ಕಂಟ್ರೋಲ್‌ ಯುನಿಟ್‌, ಮತದಾನ ಯಂತ್ರ (ಬ್ಯಾಲೆಟ್‌ ಯುನಿಟ್‌) ಮತ್ತು ವಿವಿ ಪ್ಯಾಟ್‌ ಇರುತ್ತದೆ. ಮತ ಯಂತ್ರದ ಪಕ್ಕದಲ್ಲೇ ವಿವಿ ಪ್ಯಾಟ್‌ ಇರಲಿದ್ದು, ತಾವು ಮಾಡಿದ ಮತದಾನ ಅದೇ ಅಭ್ಯರ್ಥಿಗೆ ಚಲಾವಣೆ ಆಗಿದೆಯೇ ಎನ್ನುವುದನ್ನು ವಿವಿ ಪ್ಯಾಟ್‌ ಪರದೆಯಲ್ಲಿ ನೋಡಬಹುದು.ಗುರುವಾರ ಮುಂಜಾನೆ 5.45ಕ್ಕೆ ಎಲ್ಲ ಮತಗಟ್ಟೆಗಳು ಮತದಾನಕ್ಕೆ ಸಿದ್ಧವಾಗುತ್ತವೆ. ಆ ಹೊತ್ತಿಗೆ ಅಭ್ಯರ್ಥಿಗಳ ಏಜೆಂಟರು ಅಲ್ಲಿ ಹಾಜರಿರಬೇಕು. 6 ಗಂಟೆಗೆ ಅಣುಕು ಮತದಾನ ಮಾಡಲಾಗುತ್ತದೆ. ಮತದಾನ ಬೆಳಗ್ಗೆ 7ರಿಂದ ಸಂಜೆ 6ರ ತನಕ ನಡೆಯಲಿದೆ.

6 ಗಂಟೆಯ ಒಳಗೆ ಮತಗಟ್ಟೆಗೆ ಬನ್ನಿ
ಮತದಾರರ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ. ಈ ಕುರಿತು ಯಾರೂ ಗೊಂದಲ ಮಾಡಿಕೊಳ್ಳುವುದು ಬೇಡ. ಸಂಜೆ 6 ಗಂಟೆಗೆ ಮತಗಟ್ಟೆಯ ಸರತಿ ಸಾಲಿನಲ್ಲಿದದ್ದವರಿಗೆ ಎಷ್ಟು ಹೊತ್ತಾದರೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಯಾವುದೇ ಅನುಮಾನ, ಸಮಸ್ಯೆಗಳು ಕಂಡುಬಂದಲ್ಲಿ ನೇರವಾಗಿ ನಮ್ಮನ್ನು ಸಂಪರ್ಕಿಸಬಹುದು.
ಎಚ್‌.ಕೆ. ಕೃಷ್ಣಮೂರ್ತಿ ಸಹಾಯಕ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next