ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ನೀಡಲು ಮೈತ್ರಿ ಸರ್ಕಾರ ನಡೆಸಿದ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಿದೆ. ಉಪ ಚುನಾವಣೆಗಿಂತಲೂ ನಾಲ್ಕು ಪಟ್ಟು ಹೆಚ್ಚು ಮತ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದಾರೆ.
ಈವರೆಗೂ ಸ್ಪರ್ಧಿಸಿರುವ 3 ಲೋಕಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವ ಜತೆಗೆ ಸೋಲಿಲ್ಲದ ಸರದಾರ ಬಂಗಾರಪ್ಪ ಅವರನ್ನು ಸೋಲಿಸುವ ಜತೆಗೆ, ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅವರನ್ನೂ ಎರಡು ಬಾರಿ ಸೋಲಿಸುವ ಮೂಲಕ ಶಿವಮೊಗ್ಗ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಚುನಾವಣೆ ಘೋಷಣೆಯಾದ ನಂತರ ಮೊಟ್ಟ ಮೊದಲ ಮೈತ್ರಿ ಅಭ್ಯರ್ಥಿ ಘೋಷಿಸಿದ್ದು ಇದೇ ಕ್ಷೇತ್ರದಲ್ಲಿ. ಆದರೆ ಇದಕ್ಕೂ ಮೊದಲೇ ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದ ರಾಘವೇಂದ್ರ ಪ್ರಚಾರ ಆರಂಭಿಸಿದ್ದರು. ಮಾಜಿ ಮುಖ್ಯಮಂತ್ರಿಗಳ ಪುತ್ರರು ಮತ್ತೂಮ್ಮೆ ಮುಖಾಮುಖೀಯಾಗಿದ್ದರಿಂದ ಮಲೆನಾಡಿನ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ದಿನೇ ದಿನೇ ರಂಗೇರುತ್ತಿದ್ದ ಕಣದಲ್ಲಿ ಬಿಜೆಪಿಯ ವ್ಯವಸ್ಥಿತ ಪ್ರಚಾರ ಹಾಗೂ ರಾಜಕೀಯ ತಂತ್ರಗಾರಿಕೆ ಎದುರು ಮೈತ್ರಿ ಪಕ್ಷಗಳು ಮಕಾಡೆ ಮಲಗುವಂತಾಯಿತು. ಜೆಡಿಎಸ್ ಅಭ್ಯರ್ಥಿಗೆ ಮೊದಲು ಕಾಂಗ್ರೆಸ್ ಬೆಂಬಲ ಅಷ್ಟಾಗಿ ಸಿಗಲೇ ಇಲ್ಲ.
ಪ್ರಚಾರದಲ್ಲೂ ಸಹ ಕಾಂಗ್ರೆಸ್‌ನವರು ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಮೈತ್ರಿ ಪಕ್ಷದ ಈ ಸಾಮರಸ್ಯದ ಕೊರತೆ ಬಿಜೆಪಿಗೆ ಪ್ಲಸ್ ಆಯಿತು. ಪ್ರಚಾರದ ವೇಳೆ ಮಧು ಬಂಗಾರಪ್ಪ ಇಂಪೋರ್ಟೆಡ್ ಅಭ್ಯರ್ಥಿ ಎಂಬುದು ಕ್ಷೇತ್ರದಲ್ಲಿ ಪ್ರತಿಧ್ವನಿಸಿದ್ದು, ಅಣ್ಣ-ತಮ್ಮನ ಮಧ್ಯದ ವೈಮನಸ್ಸು ಎಲ್ಲವೂ ಸಹ ಪ್ರಚಾರದ ವೇಳೆ ಜನರ ಮೇಲೆ ಪ್ರಭಾವ ಬೀರಿತು. ತಮ್ಮನ ಪರ ಗೀತಾ ಶಿವರಾಜ್ ಕುಮಾರ್ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರೂ ಪ್ರಯೋಜನವಾಗಿಲ್ಲ.
ಈಡಿಗರ ಮತ ಸೆಳೆಯುವ ಲೆಕ್ಕಾಚಾರ ಸಹ ಉಲ್ಟಾ ಹೊಡೆದಿದ್ದು ಈಡಿಗರು ಬಿಜೆಪಿಗೇ ಜೈ ಎಂದಿದ್ದಾರೆ. ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಂತರ ಚಿತ್ರಣ ಬದಲಾಯ್ತು ಎಂದೇ ಹೇಳಲಾಗಿತ್ತು. ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ನಡೆಸಿ ಮೈತ್ರಿ ಪಕ್ಷಕ್ಕೆ ಸರಿಯಾದ ಏಟು ನೀಡಿತ್ತು. ಇದಲ್ಲದೆ ಕ್ಷೇತ್ರದಲ್ಲಿರುವ ಪ್ರಧಾನಿ ಮೋದಿ ಅಲೆ, ಯಡಿಯೂರಪ್ಪನವರ ಹವಾ ಎದುರು ಮೈತ್ರಿ ಪಕ್ಷ ಮಂಡಿಯೂರುವಂತಾಗಿದೆ. ಮತ ಎಣಿಕೆಯ ಆರಂಭದಿಂದಲೂ ಲೀಡ್ ಕಾಯ್ದುಕೊಂಡ ಬಿ.ವೈ. ರಾಘವೇಂದ್ರ ಕೊನೆಗೂ ಮತ್ತೂಮ್ಮೆ ಗೆಲುವಿನ ನಗೆ ಬೀರಿದ್ದಾರೆ.
ಗೆಲುವಿಗೆ 3 ಕಾರಣ
1. ಕ್ಷೇತ್ರದಾದ್ಯಂತ ಪ್ರಧಾನಿ ಮೋದಿ ಅಲೆ. ಅಮಿತ್ ಶಾ ನಡೆಸಿದ ರೋಡ್ ಶೋ
2. ಕಾರ್ಯಕರ್ತರ ಮನೆ ಮನೆ ಪ್ರಚಾರ, ಬಲಿಷ್ಠ ಸಂಘಟನೆ
3. ರಾಷ್ಟ್ರೀಯತೆ ವಿಚಾರ ಪ್ರಸ್ತಾಪ, ಸಹೋದರರ ಜಗಳದ ಲಾಭ
ಸೋಲಿಗೆ 3 ಕಾರಣ
1. ಯುವ ಮತದಾರರ ನಿರ್ಲಕ್ಷ, ವ್ಯವಸ್ಥಿತ ಪ್ರಚಾರ ಮಾಡದಿರುವುದು
2. ಸ್ಥಳೀಯ ನಾಯಕತ್ವ ಕೊರತೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಕಡೆಗಣಿಸಿದ್ದು
3. ಮೈತ್ರಿ ಸರ್ಕಾರದ ಮೇಲಿನ ಸಿಟ್ಟು, ಸಹೋದರರ ಕೌಟುಂಬಿಕ ಕಿತ್ತಾಟ
ವಿಜೇತರು ಬಿ.ವೈ. ರಾಘವೇಂದ್ರ
ಪಡೆದ ಮತ 7,29,872
ಎದುರಾಳಿ ಮಧು ಬಂಗಾರಪ್ಪ (ಜೆಡಿಎಸ್)
ಪಡೆದ ಮತ 5,06,512
ಗೆಲುವಿನ ಅಂತರ 2,23,360
ಕಳೆದ ಬಾರಿ ಗೆದ್ದವರು: ಬಿ.ವೈ. ರಾಘವೇಂದ್ರ (ಬಿಜೆಪಿ)