ಕರ್ನಾಟಕದ ಶ್ರೇಷ್ಠ ವನ್ಯಜೀವಿ ಛಾಯಾಗ್ರಾಹಕರಲ್ಲಿ ಲೋಕೇಶ್ ಮೊಸಳೆ ಕೊಡ ಒಬ್ಬರು. ಕಾಡೆಮ್ಮೆ, ಚಿರತೆ, ಹುಲಿ, ಸಿಂಹ, ಆನೆ, ಹಾರ್ನ್ ಬಿಲ್… ಹೀಗೆ ಎಲ್ಲಾ ಪ್ರಾಣಿಗಳೂ ಮೊಸಳೆಯ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿವೆ. ಕಾರಂತ, ಘೋರ್ಪಡೆ, ತೇಜಸ್ವಿ, ಕೃಪಾಕರ- ಸೇನಾನಿಯವರ ಮುಂದುವರಿದ ಭಾಗವಾಗಿ ಮೊಸಳೆಯವರ ಚಿತ್ರಗಳಿವೆ ಎಂದವರು ಜಯಂತ ಕಾಯ್ಕಿಣಿ. ಇಂಥ ಹೆಗ್ಗಳಿಕೆದೆ ಪಾತ್ರರಾದ ಲೋಕೇಶ್ ಮೊಸಳೆಯವರ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಬೆಂಗಳೂರಿನ ಚಿತ್ರಕಲಾಪರಿಷತ್‌ನಲ್ಲಿ ಅಕ್ಟೋಬರ್ 16ರಿಂದ 21ರ ತನಕ ನಡೆಯಲಿದೆ.
ಕ್ಯಾಮರಾ ಕೈಗೆ ಬಂದರೆ ಧ್ಯಾನ ಶುರು ಮಾಡಬೇಕು. ಇದನ್ನು ಮನಸಿನ ಯೋಗ ಅಂತಲೂ ಅನ್ನಬಹುದು. ಎರಡೂ ಸೇರಿದರೆ, ಒಂದೊಳ್ಳೆ ಫೋಟೋ ಸಿಗುತ್ತದೆ. ಧ್ಯಾನ ಅಂದರೆ ಸುಮ್ಮನೆ ಅಲ್ಲ. ಅದಕ್ಕೊಂದು ಸಿದ್ದತೆ ಬೇಕು. ಅಧ್ಯಯನ ಇರಬೇಕು. ತೇಜಸ್ವಿ, ಕೃಪಾಕರ-ಸೇನಾನಿ, ಲೋಕೇಶ್ ಮೊಸಳೆ- ಇಂಥವರ ಚಿತ್ರ ನೋಡಿದಾಗೆಲ್ಲ ವಾರೆವ್ಹಾ… ಅಂದುಬಿಡುತ್ತದೆ ಮನಸ್ಸು. ಹೀಗನ್ನಿಸುವುದರ ಹಿಂದೆ ದೊಡ್ಡ ಹುಡುಕಾಟ, ಕಾಯುವಿಕೆ ಇದ್ದೇ ಇರುತ್ತದೆ. ಆದರೆ, ಆತುರದ ಇಂದಿನ ಬದುಕಲ್ಲಿ ಫೋಟೋಗ್ರಫಿಯ “ನೋಡುವಿಕೆ’ ಕೂಡ ಬದಲಾಗಿದೆ. ಅದು ದರ್ಶಿನಿ ಹೋಟೆಲ್ ಥರ.
“ಇದು ಯಾವ ಪುರುಷಾರ್ಥಕ್ಕೆ? ತೇಜಸ್ವಿ ಅವರ ತಲೆಯ ಮೇಲೆ ಪಕ್ಷಿ ಹಾರಿದರೆ ಸಾಕು, ಯಾವ ಕಡೆಯಿಂದ ಪಕ್ಷಿ ಬಂತು, ಏಕೆ ಬಂತು? ಅದು ಬಂದದ್ದು ಗೂಡು ಕಟ್ಟಲೋ, ಮರಿ ಮಾಡಲೋ? ಹೀಗೆ ಜಾತಕವನ್ನು ಹೇಳಿಬಿಡುತ್ತಿದ್ದರು. ಒಂದು ಪಕ್ಷಿಗಾಗಿ ತಿಂಗಳು, ವರ್ಷಗಟ್ಟಲೆ ಕಾಯುವಿಕೆ ಇದೆಯಲ್ಲ, ಅದೇ ಇವನ್ನೆಲ್ಲಾ ಕಲಿಸುವುದು. ಪ್ರಾಣಿ, ಪಕ್ಷಿಗಳ ಬಗೆಗಿನ ಆಳ ಅಧ್ಯಯನಗಳು ಫೋಟೋಗ್ರಾಫರ್‌ಗಳಿಗೆ ಒಳನೋಟ ಕೊಡುತ್ತದೆ. ಈಗಿನವರಿಗೆ ಇವೆಲ್ಲಾ ಬೇಕಾಗಿಲ್ಲ’ ಎಂದು ವಿಷಾದ ದಿಂದ ಹೇಳುತ್ತಾರೆ ಲೋಕೇಶ್ ಮೊಸಳೆ. ಫೋಟೋ ತೆಗೆಯಬೇಕು ಅನಿಸುತ್ತಲ್ಲ; ಆಗಲೇ ಫಕ್ಕಂತ ಪ್ರಾಣಿ, ಪಕ್ಷಿಗಳು ಎದುರು ನಿಲ್ಲಬೇಕು, ಕಾಯೋದಕ್ಕಾಗಲಿ, ಅವುಗಳ ಜೀವನದ ವಿಧಾನವನ್ನು ತಿಳಿಯುವುದಕ್ಕಾಗಲಿ ಸಮಯ ಇಲ್ಲ ಅನ್ನೋದು ಈಗಿನವರ ಸಬೂಬು. ಹೀಗಾಗಿ ಔಟ್‌ಡೋರ್ ಸ್ಟುಡಿಯೋಗಳು ಹುಟ್ಟಿಕೊಂಡಿವೆ. ಪಕ್ಷಿ ಎಲ್ಲಿ ಬರುತ್ತದೋ, ಎಲ್ಲಿ ಗೂಡು ಕಟ್ಟುತ್ತದೋ ಅದರ ಇರು ನೆಲೆಯಲ್ಲೇ ಹೈಡ್ ನಿರ್ಮಿಸಿ, ಫೋಟೋಗ್ರಫಿ ಮಾಡುತ್ತಾರೆ ಅಥವಾ ತಮ್ಮ ತೋಟಕ್ಕೆ ಬರುವ ಪಕ್ಷಿಗಳಿಗೆ ಆಹಾರ ಕೊಟ್ಟು, ಪಕ್ಷಿಗಳನ್ನು ಕರೆಸಿ, ಫೋಟೋಗ್ರಫಿ “ಔತಣ’ ಏರ್ಪಡಿಸುತ್ತಾರೆ; ಗಂಟೆಗೆ ಸಾವಿರ ಸಾವಿರ ಫೀಸು.
ಇದು, ಹೊಸ ಸಂಸ್ಕೃತಿ. ಈಗಿನ ಬಹುಪಾಲ ಫೋಟೋಗ್ರಾಫರ್‌ಗಳಿಗೆ ಕಾಯುವ ವ್ಯವಧಾನವಿಲ್ಲ, ಪಕ್ಷಿಯ ಬಗ್ಗೆ ತಿಳಿಯಬೇಕೆಂಬ ಆಸಕ್ತಿಯೂ ಇಲ್ಲ. ಹೀಗೆ ಮಾಡಿದರೆ ಪರಿಸರ ಪ್ರಜ್ಞೆ ಹೇಗೆ ಬೆಳೆಯುತ್ತೆ? ಪಕ್ಷಿಯ ಜೊತೆ ಸಲುಗೆ, ಅಟ್ಯಾಚ್‌ಮೆಂಟ್ ಹೇಗೆ ಬೆಳೆಯುತ್ತದೆ? ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಾ, ಆಹಾರ ಅರಸುವ ಪಕ್ಷಿಗಳಿಗೆ ಕುಂತಲ್ಲೇ ಊಟ, ನೀರು ಕೊಟ್ಟು ಫೋಟೋಕ್ಕೆ ಫೋಸು ಕೊಡಿಸಿ, ಅದರ ಬಿಹೇವಿಯರ್ ಅನ್ನು ಸಾಯಿಸಿ ತೆಗೆಯುವ ಫೋಟೋ ಯಾರ ಸ್ವಾರ್ಥಕ್ಕೆ ಹೇಳಿ?’ ಇದು ಮೊಸಳೆ ಎಸೆಯುವ ಪ್ರಶ್ನೆ.
ಕ್ಯಾಮರಾ ಹಿಡಿದಾಗ ಆಗುವ ಅನುಭವ ಹೇಗಿರುತ್ತೆ ಅನ್ನೋದಕ್ಕೆ ಒಂದು ಘಟನೆ ತೆರೆದಿಟ್ಟರು ಮೊಸಳೆ. ಒಂದು ಸಲ ಬುಷ್‌ಷಾಟ್ ಅನ್ನೋ ಪಕ್ಷಿ ನಮ್ಮ ಮನೆ ಬಳಿ, ಕಲ್ಲಿನ ಸಂದಿಯಲ್ಲಿ ಗೂಡು ಕಟ್ಟಿತ್ತು. ಸುಮಾರು ಎರಡು ತಿಂಗಳು ಫೋಟೋಗಾಗಿ ಕಾದೆ. ಪ್ರತಿದಿನ ದೂರ ನಿಂತು ನೋಡೋದು, ಬರೋದು ಹೀಗೆ ಮಾಡುತ್ತಿದ್ದೆ. ನನ್ನಿಂದ ಯಾವುದೇ ತೊಂದರೆ ಇಲ್ಲ ಅನ್ನೋದು ಖಾತ್ರಿಯಾಗಿ, ದಿನೇ ದಿನೇ ಅಂತರ ಕಡಿಮೆಯಾಗುತ್ತಾ ಹೋಯಿತು. ನಿಧಾನಕ್ಕೆ ಪಕ್ಷಿಯ ಗೂಡಿನ ರಚನೆ, ಬದುಕಿನ ಶಿಸ್ತು ನೋಡಿ ನಾನು ಸ್ಥಂಬೀಭೂತ ನಾದೆ. ಮರಿ ಹಾಕಿದಾಕ್ಷಣ ಕೆಂಪು ಇರುವೆಗಳು ಅವನ್ನು ತಿನ್ನೋಕೆ ಗೂಡಿಗೆ ಬರುತ್ತಿದ್ದವು. ತಕ್ಷಣ ತಾಯಿ ಪಕ್ಷಿ, ಮಕ್ಕಳನ್ನು ರಕ್ಷಿಸಲು ಇರುವೆಗಳನ್ನೆಲ್ಲಾ ತಿಂದು ಹಾಕಿಬಿಡುತ್ತಿತ್ತು. ಪುಟ್ಟ ಮರಿಗಳಿಗೆ ಎಂಥ ಬುದ್ಧಿ ಅಂತೀರ? ಗೂಡಲ್ಲಿ ಹಿಕ್ಕೆ ಹಾಕಿದರೆ ಗಲೀಜು ಆಗುತ್ತದೆ ಅಂತ, ಗುಟುಕು ಕೊಡುವ ಸಮಯದಲ್ಲಿ ಹಿಕ್ಕೆ ಹಾಕುತ್ತಿದ್ದವು. ಗಲೀಜು ಆಗುತ್ತೆ ಅಂತ ತಕ್ಷಣ, ತಾಯಿ ಹಕ್ಕಿ, ಅದನ್ನು ಕೊಕ್ಕಲ್ಲಿ ಹೊರಗೆ ಹಾಕುವ ಮೂಲಕ ಶುಚಿ ಮಾಡಿಬಿಡುತ್ತಿತ್ತು. ಮನುಷ್ಯನಿಗಿಲ್ಲದ ಇಂಥ ಬುದ್ಧಿಯನ್ನು ಪಕ್ಷಿಗಳಲ್ಲಿ ನೋಡಿ ಬೆರಗಾಗಿ ಹೋದೆ’ -ಮೊಸಳೆ ಆನಂದದ ಕ್ಷಣ ವಿವರಿಸುತ್ತಾ ಹೋದರು. ನಂತರ ಅವರ ಮಾತು ಹೊರಳಿದ್ದು ಬಂಡೀಪುರದ ಸೀಳು ನಾಯಿ ಗಳ ಕಡೆಗೆ. ” ಕಾಡು ನಿಶ್ಯಬ್ದ, ನೀರವ ಮೌನ ವಾಗಿತ್ತು. ಅಲ್ಲಿ ಕಾಡೆಮ್ಮೆಗಳು ಗುಂಪಾಗಿ ಮೇಯುತ್ತಿ ದ್ದವು. ಸೀಳು ನಾಯಿಗಳು ಭಲೇ ತಂತ್ರ ಹೂಡಿ- ಇಡೀ ಗುಂಪನ್ನು ಚದುರಿಸಿ ಒಂಟಿ ಕಾಡೆಮ್ಮೆ ಮರಿಗೆ ಕೈ ಹಾಕಿದವು. ಒಂದು ಕಡೆ ತಾಯಿ ತನ್ನ ಕಂದನನ್ನು ರಕ್ಷಿಸಲು ಹೋರಾಟ, ಮರಿಯ ಆಕ್ರಂದನ.. ಹತ್ತು ನಿಮಿಷಗಳ ಕ್ಲೈಮ್ಯಾಕ್ಸ್ ನಂತರ ಸೀಳುನಾಯಿಗಳಿಗೆ ಜಯ. ಮರಿಯನ್ನು ನೆನಪಿಸಿಕೊಳ್ಳುತ್ತಿದ್ದ ಕಾಡೆಮ್ಮೆಯ ಅಸಹನೀಯ ನೋಟ ನನ್ನ ಕಣ್ಣ ಲೆನ್ಸಿನಲ್ಲಿ ಹಾಗೇ ಹೆಪ್ಪು ಗಟ್ಟಿದೆ’
“ಇಂಥ ಪಾಠಗಳನ್ನು ಕಲಿತಾಗಲೇ ತಾನೇ ಒಳ್ಳೆ ಫೋಟೋ ಸಿಗುವುದು. ಪರಿಸರ ಪ್ರಜ್ಞೆ ಮೂಡುವುದು. ಇವತ್ತಿನ ಬಹುತೇಕರಿಗೆ ಫೋಟೋಗ್ರಫಿ ಅನ್ನೋದು ವ್ಯಾಪಾರ. ವ್ಯಾಪಾರಂ ದ್ರೋಹ ಚಿಂತನಂ. ಹಾಗಾಗಿ, ಹಕ್ಕಿಗಳ ಬಿಹೇವಿಯಲ್ ಕಿಲ್ ಮಾಡಿ ಫೋಟೋಗ್ರಫಿ ಮಾಡಿದರೆ ಯಾರಿಗೆ ತಾನೇ ಉಪಯೋಗ ಹೇಳಿ?’ ಮೊಸಳೆ ಅವರ ಸೂಕ್ಷ್ಮ ಪ್ರಶ್ನೆಗೆ ಉತ್ತರ ಹೇಳುವವರು
ಯಾರು?
ಕೆ.ಜಿ.