Advertisement

Lokayukta: ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತರು

11:48 PM Dec 05, 2023 | Team Udayavani |

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಬೆನ್ನು ಬಿದ್ದಿರುವ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 9 ಜಿಲ್ಲೆಗಳಲ್ಲಿ 13 ಮಂದಿ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳು ಹಾಗೂ ಅವರ ಸಂಬಂಧಿಕರ ನಿವಾಸಗಳು ಸೇರಿ 68 ಕಡೆ ದಾಳಿ ನಡೆಸಿದ್ದಾರೆ.

Advertisement

ಸುಮಾರು 200 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಮುಂಜಾನೆ 6 ಗಂಟೆಯಿಂದ ರಾಜ್ಯದ ಎಲ್ಲೆಡೆ ಏಕಕಾಲಕ್ಕೆ ದಾಳಿ ನಡೆಸಿ ಸಂಜೆ 7 ಗಂಟೆವರೆಗೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ನಗದು, ಕೆ.ಜಿ.ಗಟ್ಟಲೆ ಚಿನ್ನಾಭರಣ, ಬೆಳ್ಳಿ ವಸ್ತುಗಳ ಸಹಿತ ಕೋಟ್ಯಂತರ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಬಲೆಗೆ ಬಿದ್ದ ತಿಮಿಂಗಲಗಳು

ಬೆಂಗಳೂರಿನ ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ(ಇಇ) ಎಚ್‌.ಡಿ. ಚೆನ್ನಕೇಶವ, ರಾಮನಗರ ಜಿಲ್ಲೆ ಕಣಿಮಿಣಿಕೆ ಗ್ರಾಮದ ಕೆಎಂಎಫ್ ಮುಖ್ಯ ಕಾರ್ಯನಿರ್ವಾಹಕ (ಕಾರ್ಯದರ್ಶಿ) ಎಚ್‌.ಎಸ್‌. ಕೃಷ್ಣಮೂರ್ತಿ, ಬೆಂಗಳೂರು ಬೆಸ್ಕಾಂ ಜಾಗೃತ ದಳದ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್‌. ಸುಧಾಕರ್‌ ರೆಡ್ಡಿ, ಹುಬ್ಬಳ್ಳಿ ನಗರ ಹೆಸ್ಕಾಂ ನಗರ ವಿಭಾಗೀಯ ಸ್ಟೋರ್‌ನ ನಿವೃತ್ತ ಕಿರಿಯ ಅಭಿಯಂತರ (ಗ್ರೇಡ್‌-2) ಬಸವರಾಜ, ಮೈಸೂರು ಜಿಲ್ಲೆ ನಂಜನಗೂಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎಸ್‌. ಮಹದೇವಸ್ವಾಮಿ.

ಬೆಳಗಾವಿ ಕೆಆರ್‌ಐಡಿಎಲ್‌ನ ಅಧೀಕ್ಷಕ ಎಂಜಿನಿಯರ್‌ ತಿಮ್ಮರಾಜಪ್ಪ, ರಾಮನಗರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎನ್‌. ಮುನೇಗೌಡ, ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಎಚ್‌.ಡಿ. ನಾರಾಯಣಸ್ವಾಮಿ, ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ಲೆಕ್ಕ ಸಹಾಯಕ (ಹೊರಗುತ್ತಿಗೆ) ಸುನಿಲ್‌ ಕುಮಾರ್‌.

Advertisement

ಕೊಪ್ಪಳ ಜಿಲ್ಲೆ ಆನೆಗುಂದಿ ವಿಭಾಗದ ಡಿಎಫ್ಓ ಬಿ. ಮಾರುತಿ, ಬಳ್ಳಾರಿ ಜಿಲ್ಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಚಂದ್ರಶೇಖರ್‌ ಹಿರೇಮನಿ, ಯಾದಗಿರಿ ನಗರ ಸಭೆ ಆಯುಕ್ತ ಶರಣಪ್ಪ, ಯಾದಗಿರಿ ಜಿಲ್ಲೆ ಡಿಎಚ್‌ಒ ಡಾ| ಕೆ. ಪ್ರಭುಲಿಂಗ ಅವರಿಗೆ ಸೇರಿದ ಮನೆ, ಕಚೇರಿಗಳು ಹಾಗೂ ಅವರ ಸಂಬಂಧಿಗಳ ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ವಿಜಯೇಂದ್ರ ಸಂಬಂಧಿ ಮನೆ ಮೇಲೂ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಯಾದಗಿರಿ ಡಿಎಚ್‌ಒ ಡಾ| ಪ್ರಭುಲಿಂಗ ಮಾನಕರ್‌ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದು, 1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 49.04 ಲಕ್ಷ ರೂ. ಮೌಲ್ಯದ ನಗದು, ಚಿನ್ನ, ಬೆಳ್ಳಿ ಹಾಗೂ ಇತರ ಗೃಹೋಪಯೋಗಿ ವಸ್ತುಗಳು ಸೇರಿ 1.49 ಕೋಟಿ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಕಲಬುರಗಿ ಮಾನಕರ್‌ ಕುಟುಂಬದವರಾದ ಡಾ| ಪ್ರಭುಲಿಂಗ ಮಾನಕರ್‌ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪತ್ನಿಯ ಸಹೋದರ ಸಂಬಂಧಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next