Advertisement

Lokayukta; ಧಾರವಾಡ, ಕಲಬುರಗಿಯಲ್ಲಿ ಲೋಕಾ ಪ್ರಾದೇಶಿಕ ಕಚೇರಿ ಅಗತ್ಯ: ನ್ಯಾ.ಕೆ.ಎನ್.ಫಣೀಂದ್ರ

01:58 PM Aug 24, 2024 | keerthan |

ವಿಜಯಪುರ: ರಾಜ್ಯ ಲೋಕಾಯುಕ್ತ ಸಂಸ್ಥೆಯ ಮೇಲೆ ಒತ್ತಡ ತಗ್ಗಿಸಲು ಧಾರವಾಡ ಮತ್ತು ಕಲಬುರಗಿಯಲ್ಲಿ ಪ್ರಾದೇಶಿಕ ಕಚೇರಿಗಳ ಆರಂಭ ಅಗತ್ಯವಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ, ಧಾರವಾಡದಲ್ಲಿ ಹೈಕೋರ್ಟ್ ಪೀಠಗಳು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ಪೀಠ ಇದೆ. ಅದೇ ರೀತಿಯಾಗಿ ಪ್ರಾದೇಶಿಕವಾಗಿ ಲೋಕಾಯುಕ್ತ ಕಚೇರಿಗಳನ್ನು ತೆರೆದರೆ, ಪ್ರಕರಣಗಳ ಬೇಗ ಇತ್ಯರ್ಥಕ್ಕೆ ಅನುಕೂಲವಾಗುತ್ತದೆ ಎಂದರು.

ಲೋಕಾಯುಕ್ತದಲ್ಲಿ ಇದುವರೆಗೆ ದಾಖಲಾದ 18,886 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಲೋಕಾಯುಕ್ತರ ವ್ಯಾಪ್ತಿಯಲ್ಲಿ 5,495, ಉಪ ಲೋಕಾಯುಕ್ತ-1ರಲ್ಲಿ 7,028 ಮತ್ತು ಉಪ ಲೋಕಾಯುಕ್ತ-2ರಲ್ಲಿ 6,363 ಪ್ರಕರಣಗಳು ಇವೆ. 1,413 ಇಲಾಖಾ ದೂರುಗಳು ದಾಖಲಾಗಿವೆ. ಇದಲ್ಲದೇ, ಇನ್ನೂ ಹಂಚಿಕೆಯಾದ 10,324 ದೂರುಗಳು ಇವೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಅಗತ್ಯ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇತ್ತೀಚೆಗೆ ಜಿಲ್ಲಾ ನ್ಯಾಯಾಧೀಶರ ಭರ್ತಿಯಾಗಿದ್ದು, ಇದರಿಂದ ಮತ್ತಷ್ಟು ಪ್ರಕರಣಗಳು ಉನ್ನತ ನ್ಯಾಯಾಲಯಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರಾದೇಶಿಕ ಕಚೇರಿಗಳು ಇದ್ದರೆ ಒಳ್ಳೆಯದು. ಇದರಿಂದ ಆಯಾ ಪ್ರದೇಶದಲ್ಲೇ ಪ್ರಕರಣಗಳ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 459 ಪ್ರಕರಣಗಳು ಬಾಕಿ: ಇದೇ ವೇಳೆ, ವಿಜಯಪುರ ಜಿಲ್ಲೆಯಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿದ 459 ಪ್ರಕರಣಗಳು ಬಾಕಿ ಇದ್ದು, 83 ಇಲಾಖಾ ತನಿಖೆಗೆ ಸಂಬಂಧಿಸಿವೆ ಎಂದು ಉಪ ಲೋಕಾಯುಕ್ತರು ವಿವರಿಸಿದರು.

Advertisement

ನಾನು ಇದುವರೆಗೂ 15 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಇದು 16ನೇ ಜಿಲ್ಲೆಯಾಗಿದೆ. ನನ್ನ ಮೂರು ದಿನಗಳ ಜಿಲ್ಲಾ ಪ್ರವಾಸದಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಅಹವಾಲು ಸ್ವೀಕರಿಸಿದ್ದು, ಮೊದಲ ದಿನ 77 ದೂರುಗಳು ಬಂದಿವೆ. ಎರಡನೇ 122 ದೂರುಗಳು ಸಲ್ಲಿಕೆಯಾಗಿವೆ. ಇವುಗಳ ವಿಚಾರಣೆ ನಡೆಸಿ, ಸಮಸ್ಯೆ ಪರಿಹಸಲು 15 ದಿನ, 1 ತಿಂಗಳ ಗಡುವು ನೀಡಲಾಗಿದೆ. ಅಲ್ಲದೇ, ಜಿಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ 67 ದೂರುಗಳ ಪೈಕಿ 37 ದೂರಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next