Advertisement

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

12:06 AM Dec 21, 2024 | Team Udayavani |

ಬೆಂಗಳೂರು: ಬೆಸ್ಕಾಂ ಹಾಗೂ ಜಲಮಂಡಳಿ ಕಚೇರಿಗಳ ಮೇಲೆ ಬುಧವಾರ ನಡೆದ ದಾಳಿಯ ವೇಳೆ ದಾಖಲೆ ಇಲ್ಲದ 7 ಲಕ್ಷ ರೂ.ಗಳನ್ನು ಲೋಕಾಯುಕ್ತ ಸಿಬಂದಿ ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

ಇಂದಿರಾನಗರದ ಜಲಮಂಡಳಿ ಕಚೇರಿಯ ತಪಾಸಣಾ ಸಮಯದಲ್ಲಿ ಗುತ್ತಿಗೆದಾರನೋರ್ವನ ಬಳಿ 50 ಸಾವಿರ ರೂ., ಕಚೇರಿಯ ಹಿರಿಯ ಸಹಾಯಕನ ಬಳಿ 1.86 ಲಕ್ಷ ರೂ., ಮೊತ್ತೋರ್ವ ಗುತ್ತಿಗೆದಾರನ ಬಳಿ 1.93 ಲಕ್ಷ ರೂ., ಇನ್ನೊಬ್ಬ ಗುತ್ತಿಗೆದಾರನ ಬಳಿ 27.900 ರೂ., ಕಚೇರಿಯ ಕಿರಿಯ ಸಹಾಯಕನ ಬಳಿ 31,830 ರೂ. ಹೀಗೆ ಒಟ್ಟು ರೂ.4.89 ಲಕ್ಷ ರೂ. ಪತ್ತೆಯಾಗಿದೆ. ಕುಂದಲಹಳ್ಳಿ ಜಲಮಂಡಳಿ ಕಚೇರಿಯಲ್ಲಿ 1.30 ಲಕ್ಷ ರೂ., ವಿಜಯನಗರದ ಜಲಮಂಡಳಿ ಕಚೇರಿಯಲ್ಲಿ 66,800, ಕ್ರಸೆಂಟ್‌ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಓರ್ವ ಸಿಬಂದಿಯ ಬಳಿ 12 ಸಾವಿರ ರೂ., ಬಾಣಸವಾಡಿಯಲ್ಲಿರುವ ಬೆಸ್ಕಾಂ ಕಚೇರಿಯ ಸಿಬಂದಿ ಬಳಿ 13 ಸಾವಿರ ರೂ. ಸೇರಿ 2.2 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಈ ಮೊತ್ತದ ಬಗ್ಗೆ ವಿಚಾರಿಸಲಾಗಿ, ಗುತ್ತಿಗೆದಾರರಾಗಲೀ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಆನ್‌ಲೈನ್‌ನಲ್ಲೇ ಡೀಲ್‌?
ಅನೇಕ ಅಧಿಕಾರಿ/ಸಿಬಂದಿ ಫೋನ್‌ ಪೇ ಹಾಗೂ ಗೂಗಲ್‌ ಪೇ ಮುಖಾಂತರ ಹಣದ ವಹಿವಾಟುಗಳನ್ನು ನಡೆಸಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಬಗ್ಗೆಯೂ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ. ಬನಶಂಕರಿ ಬೆಸ್ಕಾಂ ಕಚೇರಿಯ ಜನಸ್ನೇಹಿ ವಿದ್ಯುತ್‌ ಸೇವೆಗಳ ಕೇಂದ್ರದಲ್ಲಿ ಆನ್‌ಲೈನ್‌ ಮುಖಾಂತರ ಸಲ್ಲಿಕೆಯಾಗಿರುವ 104 ಅರ್ಜಿಗಳು ಹಾಗೂ ರಿಕ್ವೆಸ್ಟ್‌ ಎಸ್ಟಿಮೇಟ್‌ನಲ್ಲಿ 122 ಅರ್ಜಿಗಳು ಬಾಕಿ ಇರುವುದು ಕಂಡು ಬಂದಿರುತ್ತದೆ.

ಮೇಲ್ಕಂಡ ಅನಧಿಕೃತ ಹಣವನ್ನು ಹೊರತುಪಡಿಸಿ, ಬಹುತೇಕ ಎಲ್ಲ ಕಚೇರಿಗಳಲ್ಲಿ ಹಾಜರಾತಿ ವಹಿ, ನಗದು ಘೋಷಣಾ ವಹಿ ಹಾಗೂ ಚಲನ-ವಲನ ವಹಿಯನ್ನು ನಿರ್ವಹಣೆ ಮಾಡದೇ ಅಧಿಕಾರಿ ಹಾಗೂ ನೌಕರರು ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next