ಕಲಬುರಗಿ/ ಮಂಡ್ಯ/ದಾವಣಗೆರೆ/ ಹಾವೇರಿ: ಲೋಕಾಯುಕ್ತ ಅಧಿಕಾರಿಗಳು ಇಂದು ರಾಜ್ಯದೆಲ್ಲೆಡೆ ಭ್ರಷ್ಟರ ಬೇಟೆಗಿಳಿದಿದ್ದಾರೆ. ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸ, ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಅವರ ಇಲ್ಲಿನ ಮನೆ ಮೇಲೆ ಸೇರಿದಂತೆ ಮೂವರು ಅಧಿಕಾರಿಗಳ ಮನೆಗಳ ಮೇಲೆ ಸೋಮವಾರ ಬೆಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಲಬುರಗಿ ನಗರದ ಮಾಕಾ ಲೇ ಔಟ್ ನಲ್ಲಿರುವ ಎರಡಂತಸ್ತಿನ ಭವ್ಯ ಬಂಗಲೆಯೊಳಗೆ ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳಿಗೇ ಶಾಕ್ ಎದುರಾಗಿದೆ. ಕೋಟಿಗಟ್ಟಲೇ ಬೆಲೆ ಬಾಳುವ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. 300 ಗ್ರಾಂಗೂ ಅಧಿಕ ಚಿನ್ನಾಭರಣ ಸಹ ಪತ್ತೆಯಾಗಿದೆ.ಪ್ರಮುಖವಾಗಿ ಅರಣ್ಯಾಧಿಕಾರಿ ವಾಸಿಸುವ ಮನೆ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಂಗಲೆಯಾಗಿದೆ. ವಿಜಯಪೂರ ಜಿಲ್ಲೆ ಆಲಮೇಲ್ ತಾಲೂಕಿನ ನಾಗರಹಳ್ಳಿಯಲ್ಲಿ ಏಳು ಎಕರೆ ನೀರಾವರಿ ಜಮೀನು ಸಹ ಹೊಂದಲಾಗಿದೆ. ಅದಲ್ಲದೇ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಒಂದುವರೆ ಎಕರೆ ಜಮೀನಿನ ದಾಖಲೆ ಸಹ ದೊರಕಿವೆ. ಅದಲ್ಲದೇ ಬೇನಾಮಿ ಹೆಸರಿನಲ್ಲಿ ಕೆಲ ಕಾರ್ ಸೇರಿ ವಾಹನಗಳು ಮತ್ತು ಒಂದು ಪರವಾನಗಿ ಹೊಂದಿರುವ ರಿವಾಲ್ವಾರ್ ದಾಖಲೆ ಜತೆಗೆ ಹಲವಾರು ಮದ್ಯದ ಬಾಟಲ್ ಗಳು ವಲಯ ಅರಣ್ಯಾಧಿಕಾರಿ ಮನೆಯಲ್ಲಿ ಪತ್ತೆಯಾಗಿವೆ. ಇದನ್ನೆಲ್ಲ ಕಂಡ ಲೋಕಾಯುಕ್ತ ಅಧಿಕಾರಿಗಳು ಶಾಕ್ ಆಗಿದ್ದಾರೆ. ದಾಖಲೆ ಪರಿಶೀಲನೆ ಮುಂದುವರೆದಿದ್ದು, ನಿರೀಕ್ಷೆಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪಾಸ್ತಿಗಳ ದಾಖಲೆಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿ ನಗರದಲ್ಲಿ ಕೆಬಿಜೆಎನ್ಎಲ್ ಇಇ ತಿಪ್ಪಣ್ಣ ಅನ್ನದಾನಿ ಮನೆ ಮೇಲೆ ದಾಳಿ ನಡೆಸಲಾಗಿ ಅಕ್ರಮ ಆಸ್ತಿಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಾಥಮಿಕವಾಗಿ 20 ತೊಲೆ ಬಂಗಾರ ಪತ್ತೆಯಾಗಿದೆ. ಕಲಬುರಗಿಯ ಭಾಗ್ಯವಂತಿ ನಗರದಲ್ಲಿರುವ ಮನೆಯಲ್ಲಿ ಶೋಧನೆ ನಡೆದಿದೆ. ಬೆಡ್ ರೂಮ್ ಸೇರಿದಂತೆ ಹಲವಡೆ ನಗದು ಕ್ಯಾಶ್ ಪತ್ತೆಯಾಗಿದ್ದು, ಎರಡು ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆಯಲ್ಲದೇ ಹಲವು ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಿಪ್ಪಣ್ಣ ಅನ್ನದಾನಿಗೆ ಸಂಬಂಧಿಸಿದ ಮೂರು ಕಡೆ ದಾಳಿ ನಡೆಸಲಾಗಿದೆ. ಚಿತ್ತಾಪುರ ತಾಲ್ಲೂಕಿನ ಕೊಲ್ಲುರು ಗ್ರಾಮದಲ್ಲು ದಾಳಿ ನಡೆದಿದೆ. ಕೊಲ್ಲೂರಿನಲ್ಲಿ ಖಾಸಗಿ ಕಾಂಪ್ಲೆಂಕ್ಸ್ ತಿಪ್ಪಣ್ಣ ಅನ್ನದಾನಿ ಹೊಂದಿದ್ದಾರೆ. ಪ್ರಮುಖವಾಗಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಿ ಗುಡಿಯ ಕಚೇರಿಯಲ್ಲೂ ದಾಳಿ ನಡೆಸಲಾಗಿದೆ.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಜೆಡಿ ಅಪ್ಪಾಸಾಬ ಕಾಂಬ್ಳೆ ಎರಡು ತಿಂಗಳವಷ್ಟೇ ಕಲಬುರಗಿ ಆಗಮಿಸಿದ್ದು,ಬೆಳಗಾವಿ ಮೂಲದವರಾದ ಇವರ ನಗರದಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಹತ್ತಾರು ಕಡೆ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಇಲ್ಲಿ ವಾಸವಾಗಿರುವ ಕೋಣೆ ಮೇಲೂ ಸಹ ದಾಳಿ ನಡೆಸಲಾಗಿದೆ.
ದಾವಣಗೆರೆಯಲ್ಲಿ ದಾಳಿ
ದಾವಣಗೆರೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯ ಬಾಯ್ಲರ್ಸ್ ಗಳ ಉಪ ನಿರ್ದೇಶಕ ಎಸ್. ಆರ್. ಶ್ರೀನಿವಾಸ್ ಸಂಬಂಧಿತ ಕಚೇರಿ ಮೇಲೆ ಲೋಕಾ ಯುಕ್ತ ಡಿವೈಎಸ್ಪಿ ರಾಮಕೃಷ್ಣ ನೇತೃತ್ವದಲ್ಲಿ ಏಳು ಜನ ಅಧಿಕಾರಿಗಳ ತಂಡ ಬೆಳಗ್ಗೆಯಿಂದಲೇ ಪರಿಶೀಲನೆ ನಡೆಸುತ್ತಿದೆ. ದಾವಣಗೆರೆಯ ಪಿ.ಬಿ ರಸ್ತೆಯಲ್ಲಿರುವ ಕಚೇರಿ ಮೇಲೆ ನಡೆದ ದಾಳಿ ವೇಳೆಯಲ್ಲಿ ಕಡತಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ಮುಂದುವರಿಸಿದ್ದಾರೆ.
ಮಂಡ್ಯ: ಫಾರ್ಮ್ ಹೌಸ್ ಮೇಲೆ ದಾಳಿ
ಮಂಡ್ಯದಲ್ಲೂ ಲೋಕಾಯುಕ್ತ ದಾಳಿ ನಡೆದಿದ್ದು, ಇಬ್ಬರು ಅಧಿಕಾರಿಗಳ ಫಾರ್ಮ್ ಹೌಸ್ ಮೇಲೆ ರೈಡ್ ಮಾಡಲಾಗಿದೆ. ಕೊಳಚೆ ನಿರ್ಮೂಲನೆ ಮಂಡಳಿ ಎಕ್ಸಿಕ್ಯುಟಿವ್ ಇಂಜಿನಿಯರ್ ಬಾಲರಾಜ ಅವರ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.
ಅರ್ಬನ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ ಶಶಿಕುಮಾರ್ ಅವರ ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಇಬ್ಬರು ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ ಪಿ ಸಜೀತ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಹಾವೇರಿ ಆರ್ ಎಫ್ಓ ಅಧಿಕಾರಿಗಳ ಮೇಲೆ ದಾಳಿ
ಅರಣ್ಯ ಇಲಾಖೆಯ ಇಬ್ಬರು ಆರ್ ಎಫ್ಒ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಇಬ್ಬರು ಆರ್ ಎಫ್ಓ ಅಧಿಕಾರಿಗಳ ಮನೆ ಸೇರಿದಂತೆ ವಿವಿಧಡೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್ ಎಫ್ಓ ಪರಮೇಶ್ವರ ಪೇಲನವರ, ಆರ್ ಎಫ್ಓ ಮಹಾಂತೇಶ ನ್ಯಾಮತಿಗೆ ಸೇರಿದ ಹಾವೇರಿ, ಕುರುಬಗೊಂಡ ಸೇರಿದಂತೆ ವಿವಿಧಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆರ್ ಎಫ್ಓ ಪರಮೇಶ್ವರ ಪೇಲನವರ ಅವರ ಮೂರು ಮನೆ ಸೇರಿದಂತೆ ಆರು ಕಡೆ, ಮಹಾಂತೇಶ ನ್ಯಾಮತಿ ಅವರ ಮನೆ, ಫಾರ್ಮ್ ಹೌಸ್ ಸೇರಿದಂತೆ ವಿವಿದೆಡೆ ದಾಳಿ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.