Advertisement
ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯ 62 ಅಬಕಾರಿ ಕಚೇರಿಗಳ ಮೇಲೆ ಏಕಕಾಲದಲ್ಲಿ ಮಂಗಳವಾರ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಹಲವು ಲೋಪ ಪತ್ತೆಹಚ್ಚಿದ್ದಾರೆ. ಇನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಖುದ್ದು ಯಶವಂತಪುರ ಹಾಗೂ ಮೈಸೂರು ರಸ್ತೆಯ ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಜೊತೆ ಪರಿಶೀಲಿಸಿದಾಗ ಯಾವುದೇ ಸೀಲ್ ಹಾಕಿರದ ಸುಮಾರು ಅರ್ಧ ಕೆಜಿಯಷ್ಟು ಅನಧಿಕೃತ ಗಾಂಜಾ, ಮದ್ಯದ ಬಾಟಲಿಗಳು ಹಾಗೂ ದಾಖಲೆ ಇಲ್ಲದ 2 ಲಕ್ಷ ರೂ. ಕಂಡು ಒಂದು ಕ್ಷಣ ಲೋಕಾ ಸಿಬ್ಬಂದಿಯೇ ದಂಗಾದರು. ಸೂಕ್ತ ಸ್ಪಷ್ಟನೆ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಲೋಕಾಯುಕ್ತ ಮುಂದಾಗಿದೆ. ದಾಳಿ ನಡೆದ 62 ಕಚೇರಿಗಳ ಪೈಕಿ ಬಹುತೇಕ ಕಡೆ ಹಲವಾರು ಲೋಪಗಳು ಪತ್ತೆಯಾಗಿವೆ.
Related Articles
Advertisement
ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿ ದಾಳಿ!:
ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯಲ್ಲಿನ 62 ಅಬಕಾರಿ ಕಚೇರಿಗಳಲ್ಲಿ ಸಿಎಲ್-2, ಸಿಎಲ್-7, ಸಿಎಲ್-9 ಪರವಾನಗಿ ವಿಭಾಗ ವಿತರಣೆ, ನವೀಕರಿಸುವಿಕೆ, ಸ್ಥಳಾಂತರಿಸುವಿಕೆ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಿಸಿದ ಇತರೆ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಅಬಕಾರಿ ಪರವಾನಗಿದಾರರು ಹಾಗೂ ಸಾರ್ವಜನಿಕರು ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿ ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಖಾತ್ರಿ ಪಡಿಸಿಕೊಂಡಿದ್ದರು. ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳ ತಂಡವನ್ನು ಸನ್ನದ್ಧಗೊಳಿಸಿ ಬೆಂಗಳೂರು ನಗರ ಅಬಕಾರಿ ಜಿಲ್ಲಾ ವ್ಯಾಪ್ತಿಯಲ್ಲಿನ 62 ಅಬಕಾರಿ ಕಚೇರಿಗಳಲ್ಲಿ ಏಕಕಾಲದಲ್ಲಿ ತಪಾಸಣೆ ಮಾಡಿ ಅಕ್ರಮಗಳನ್ನು ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖಾ ಕಚೇರಿಗಳಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ 132 ಪ್ರಕರಣ ಗಳು ವಿವಿಧ ಹಂತದ ತನಿಖೆಯಲ್ಲಿ ಮುಂದುವರಿ ದಿರುವುದು ಅಬಕಾರಿ ಇಲಾಖಾ ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪುಷ್ಟಿಕರಿಸುತ್ತವೆ.
ಅಕ್ರಮಕ್ಕಾಗಿ ಖಾಸಗಿ ವ್ಯಕ್ತಿಗಳ ನೇಮಕ!:
ಕೆಲವು ಕಡೆ ಅಬಕಾರಿ ಇನ್‌ಸ್ಪೆಕ್ಟರ್‌ಗಳೇ ಖಾಸಗಿ ವ್ಯಕ್ತಿಗಳನ್ನಿಟ್ಟುಕೊಂಡು ಅವ್ಯವಹಾರ ನಡೆಸುತ್ತಿದ್ದ ಸಂಗತಿ ಬಯಲಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್‌ಗಳು ಖಾಸಗಿ ವ್ಯಕ್ತಿಗಳಿಗೆ ತಿಂಗಳಿಗೆ 15 ರಿಂದ 20 ಸಾವಿರ ರೂ. ವೇತನ ನೀಡಿ ಕೆಲಸ ಮಾಡಿಕೊಳ್ಳಲು ಇಟ್ಟು ಕೊಂಡಿರುವುದು ಗೊತ್ತಾಗಿದೆ. ಬ್ಯಾಟರಾಯನಪುರ, ಕೋರಮಂಗಲ ಕಚೇರಿಗಳಲ್ಲಿ ಹಲವು ಅಕ್ರಮ ಪತ್ತೆಯಾಗಿದೆ. ಕೋರಮಂಗಲ ಕಚೇರಿಯಲ್ಲಿ ಲೋಕಾಯುಕ್ತ ಸಿಬ್ಬಂದಿ ಎಂಟ್ರಿಯಾಗುತ್ತಿದ್ದಂತೆ ಅಟೆಂಡೆನ್ಸ್, ಕ್ಯಾಶ್ ರಿಜಿಸ್ಟ್ರರ್ ಪುಸ್ತಕವನ್ನೇ ತೆಗೆದು ಕೊಂಡು ಓಡಿ ಹೋಗಿರುವುದು ಪತ್ತೆಯಾಗಿದೆ.