ಬೆಂಗಳೂರು: ಕೆಎಸ್‌ಎಡಿಎಲ್ ಟೆಂಡರ್ ನೀಡಲು 40 ಲಕ್ಷ ರೂ. ಲಂಚ ಪಡೆದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಹೆಚ್ಚಿನ ವಿಚಾರಣೆಗಾಗಿ ಐದು ದಿನ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿದೆ.
ವಿರೂಪಾಕ್ಷಪ್ಪರನ್ನು ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಲೋಕಾಯುಕ್ತ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಐದು ದಿನಗಳ ಲೋಕಾಯುಕ್ತ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಅದಕ್ಕೂ ಮೊದಲು ಲೋಕಾಯುಕ್ತ ಪೊಲೀಸರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ವಿರೂಪಾಕ್ಷಪ್ಪ ಪರ ವಕೀಲರು, ತಮ್ಮ ಕಕ್ಷಿದಾರ ಈಗಾಗಲೇ ಸುಮಾರು ಏಳು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಹೀಗಾಗಿ 10 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಬಾರದು ಎಂದು ವಾದಿಸಿದರು. ಬಳಿಕ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಂತಿಮವಾಗಿ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ಆದೇಶಿಸಿತ್ತು.
ಕೋರ್ಟ್‌ಗೆ ಹಾಜರು ಪಡಿಸುವ ಮುನ್ನ ಲೋಕಾಯುಕ್ತ ಕಚೇರಿಯಲ್ಲಿಯೇ ಇದ್ದ ಮಾಡಾಳು ವಿರೂಪಾಕ್ಷಪ್ಪಗೆ ಕುಟುಂಬಸ್ಥರು ಊಟ-ತಿಂಡಿ ಕಳುಹಿಸಿದರು. ವಿರುಪಾಕ್ಷಪ್ಪ ವಿಚಾರಣೆಗೆ ಲೋಕಾಯುಕ್ತ ಪೊಲೀಸರು ಈಗಾಗಲೇ ಪ್ರಶ್ನಾವಳಿಗಳನ್ನು ಸಿದ್ದಪಡಿಸಿಕೊಂಡಿದ್ದು, ತನಿಖಾಧಿಕಾರಿ ಆಂಥೋನಿ ಜಾನ್ ನೇತೃತ್ವದ ತಂಡ ವಿಚಾರಣೆ ನಡೆಸಲಿದೆ. ಈ ಮಧ್ಯೆ ಸಾಧ್ಯವಾದರೆ ಪುತ್ರ ಮಾಡಾಳು ಪ್ರಶಾಂತ್‌ನನ್ನು ಮತ್ತೂಮ್ಮೆ ವಶಕ್ಕೆ ಪಡೆದುಕೊಂಡು ಮುಖಾಮುಖೀ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.