Advertisement

ಎಸಿಬಿ ರದ್ದು: ದೂರುವುದೆಲ್ಲಿ? ಇನ್ನೂ ಲೋಕಾಯುಕ್ತ ಪುನಾರಚಿಸದ ರಾಜ್ಯ ಸರಕಾರ

01:09 AM Aug 24, 2022 | Team Udayavani |

ಬೆಂಗಳೂರು: ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ತರಲಾಗಿದ್ದ ಭ್ರಷ್ಟಾ ಚಾರ ನಿಗ್ರಹ ದಳ (ಎಸಿಬಿ) ರದ್ದಾಗಿ 12 ದಿನ ಕಳೆದರೂ ಲೋಕಾಯುಕ್ತದ ಪುನಾರಚನೆಗೆ ಸರಕಾರ ಆದೇಶ ಹೊರಡಿಸದ ಕಾರಣ ದೂರುಗಳನ್ನು ಯಾರಿಗೆ ಸಲ್ಲಿಸಬೇಕು ಎಂಬ ಬಗ್ಗೆ ಜಿಜ್ಞಾಸೆ ಮೂಡಿದೆ.

Advertisement

ಭ್ರಷ್ಟಾಚಾರ ಸಂಬಂಧಿ ದೂರುಗಳನ್ನು ಲೋಕಾಯುಕ್ತದಲ್ಲಿ ಸ್ವೀಕರಿಸಲಾಗುತ್ತಿದೆ. ಆದರೆ ಎಸಿಬಿ ಮತ್ತು ಲೋಕಾಯುಕ್ತ ಎರಡೂ ಸಂಸ್ಥೆಗಳಲ್ಲೂ ಭ್ರಷ್ಟರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿಲ್ಲ. ಹೀಗಾಗಿ ಈ ಸಂಬಂಧಿ ದಾಳಿ, ವಿಚಾರಣೆ, ತನಿಖೆಗಳಿಗೆ ಸದ್ಯ ಬ್ರೇಕ್‌ ಬಿದ್ದಿದ್ದು, ಜನರಲ್ಲಿ ಗೊಂದಲ ಮೂಡಿದೆ.

ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ಹೈಕೋರ್ಟ್‌ ಆದೇಶದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಸಿಬಿ ಯಲ್ಲಿದ್ದ ಅಧಿಕಾರಿಗಳು, ಸಿಬಂದಿ ಏನು ಮಾಡಬೇಕೆಂದು ತೋಚದೆ ಕೈಕಟ್ಟಿ ಕುಳಿತಿದ್ದಾರೆ. ಮತ್ತೂಂದೆಡೆ ಸರಕಾರದ ಆದೇಶ ಕ್ಕಾಗಿ ಕಾದು ಕುಳಿತಿರುವ ಲೋಕಾಯುಕ್ತ ಪೊಲೀಸರಿಗೂ ಭ್ರಷ್ಟಾಚಾರ ಪ್ರಕರಣಗಳಲ್ಲಿ ದಾಳಿ, ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ.

ಹೈಕೋರ್ಟ್‌ ತೀರ್ಪನ್ನು ಬಿಜೆಪಿ ಸರಕಾರವು ಸ್ವಾಗತಿಸಿ, ನಮ್ಮ ನಿಲುವು ಇದೇ ಆಗಿತ್ತು; ಪ್ರಣಾಳಿಕೆಯಲ್ಲೂ ನಾವು ಎಸಿಬಿ ರದ್ದು ಕುರಿತು ತಿಳಿಸಿದ್ದೆವು. ಈಗ ನ್ಯಾಯಾಲಯದ ತೀರ್ಪು ನಮಗೆ ಲಭಿಸಿದ ಗೆಲುವು ಎಂದಿತ್ತು. ಮುಂದಿನ ಪ್ರಕ್ರಿಯೆಯ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಅಡ್ವೊಕೇಟ್‌ ಜನರಲ್‌ ಚರ್ಚಿಸಿ ಸಲಹೆ ನೀಡಲಿದ್ದಾರೆ ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ಹೇಳಿದ್ದರು.

ಪ್ರಕ್ರಿಯೆಯೇ ಆರಂಭವಾಗಿಲ್ಲ
ಹೈಕೋರ್ಟ್‌ ಆದೇಶ ಪಾಲನೆಗೆ 90 ದಿನಗಳ ಕಾಲಾವಕಾಶ ಇದೆ. ಆದರೆ ಇದುವರೆಗೆ ಎರಡು ಸಚಿವ ಸಂಪುಟ ಸಭೆಗಳು ನಡೆದರೂ ಅಲ್ಲಿ ಅಧಿಕೃತವಾಗಿ ಈ ಬಗ್ಗೆ ಚರ್ಚೆಯಾಗಿಲ್ಲ. ಮೂಲಗಳ ಪ್ರಕಾರ, ಲೋಕಾಯಕ್ತ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ.

Advertisement

ಅಧಿವೇಶನ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲದ ಕಾರಣ ಅಧ್ಯಾದೇಶದ ಮೂಲಕ ಜಾರಿಗೊಳಿಸಬಹುದು. ಆದರೆ ಸರಕಾರ ಆ ನಿಟ್ಟಿನಲ್ಲಿ ಪೂರ್ವಭಾವಿ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ ಎನ್ನಲಾಗಿದೆ. ಲೋಕಾಯುಕ್ತ ಪುನಾರಚನೆಗೆ ಸರಕಾರದಿಂದ ಆದೇಶ ಹೊರಬಿದ್ದರೆ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.

ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ಎಸಿಬಿ ರದ್ದು ಮಾಡಿ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕನಕರಾಜು ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ವಿಚಾರಣೆಗೆ ಲಿಸ್ಟ್‌ ಮಾಡಲು ಸಿಜೆಐ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ ಒಪ್ಪಿಗೆ ನೀಡಿದೆ. ತನ್ನಿಂದ ಲಂಚ ಕೇಳಿದ್ದ ಬೆಸ್ಕಾಂ ಜಾಗೃತ ಪೊಲೀಸ್‌ ಠಾಣೆಯ ಇಬ್ಬರು ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಿದ್ದೆ. ಅದೇ ಸಮಯದಲ್ಲಿ ಹೈಕೋರ್ಟ್‌ ಎಸಿಬಿಯನ್ನು ರದ್ದು ಮಾಡಿ, ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಈ ಹಂತದಲ್ಲಿ ಪ್ರಕರಣಗಳನ್ನು ವರ್ಗಾಯಿಸುವುದು ಆರೋಪಿಗಳಿಗೆ ವರವಾಗಿ ಪರಿಣಮಿಸಿದೆಯಲ್ಲದೆ, ಅನೇಕ ಪ್ರಕರಣಗಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂದು ಅರ್ಜಿದಾರ ದೂರಿದ್ದಾರೆ.

ಮೇಲ್ಮನವಿ ಸಲ್ಲಿಸುವುದಿಲ್ಲ
ಎಸಿಬಿ ರದ್ದತಿ ವಿಚಾರವಾಗಿ ಮೇಲ್ಮನವಿ ಸಲ್ಲಿ ಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಖಾಸಗಿ ವ್ಯಕ್ತಿ ಸಲ್ಲಿ ಸಿರುವ ಮೇಲ್ಮನವಿಗೂ ಸರಕಾರಕ್ಕೂ ಸಂಬಂಧ ವಿಲ್ಲ. ನಮ್ಮ ನಿಲುವು ಬಹಳ ಸ್ಪಷ್ಟ ವಾಗಿದೆ. ನ್ಯಾಯಾ ಲಯ ಆದೇಶ ನೀಡಿದೆ ಮತ್ತು ಅದು ನಮ್ಮ ಪ್ರಣಾಳಿಕೆ ಯಲ್ಲಿಯೂ ಇದೆ. ಹೈಕೋರ್ಟ್‌ ಆದೇಶ ವನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ಸಮಾ ಲೋಚನೆ ನಡೆದಿದೆ ಎಂದು ಹೇಳಿದ್ದಾರೆ.

ಎಸಿಬಿ ರದ್ದತಿಗೆ ಸಂಬಂಧಿಸಿದ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಈಗಾಗಲೇ ಹೇಳಿದ್ದೇನೆ. ನಾನದನ್ನು ಸ್ವೀಕರಿಸಿರುವ ಕಾರಣ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಹಾಕುವುದಿಲ್ಲ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next