ಸೇಡಂ: ಕಾಂಗ್ರೆಸ್‌ನ ಕೆಲಸ ಶಾಸಕರ ಸಂಬಂಧಿಕರೇ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದರಿಂದ ಮರಳು ನೀತಿ ಜಾರಿಯಾಗಿಲ್ಲ. ಇಡೀ ಲೋಕಾಯುಕ್ತ ಸಂಸ್ಥೆಯನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಜರಿ ಅಂಗಡಿ ಮಾಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಗೋವಿಂದ ಕಾರಜೋಳ ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ, ಆ ವರ್ಗದ ಉದ್ಧಾರಕ್ಕೆ ಮನಸ್ಸು ಮಾಡಿಲ್ಲ. ರಾಜ್ಯದಲ್ಲಿ 2400 ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಾಲಮನ್ನಾ ಮಾಡಲಿಲ್ಲ. ಅಕ್ರಮ ಮರಳುಗಾರಿಕೆಯಲ್ಲಿ ಕಾಂಗ್ರೆಸ್ ಶಾಸಕರ ಪುತ್ರರು, ಸಂಬಂಧಿಕರು ಶಾಮಿಲಾಗಿದ್ದಾರೆ. ಆದರೂ ಕ್ರಮವಿಲ್ಲ. ಸರಕಾರ ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಮರಳುಗಾರಿಕೆ ಕಾಳದಂಧೆಯಾಗಿ ಮಾರ್ಪಟ್ಟಿದೆ. ರಾಜ್ಯಕ್ಕೆ ಸಾವಿರ ಕೋಟಿಗೂ ಅಧಿಕ ಆದಾಯ ನೀಡುವ ಮರಳು ನೀತಿ ರೂಪಿಸಿ ಜಾರಿಗೊಳಿಸಲು ಸರಕಾರ ಹಿಂದೇಟು ಹಾಕಿದೆ. ಈ ಮೂಲಕ ಸಿದ್ದು ಸರ್ಕಾರ ಅಕ್ರಮಕ್ಕೆ ಸಹಕಾರ ನೀಡುತ್ತಿದೆ. ಸರಕಾರಕ್ಕೆ ಸೇರಬೇಕಾದ ಆದಾಯ ಕಳ್ಳರ ಪಾಲಾಗುತ್ತಿದೆ. ಈಗಲಾದರೂ ಎಚ್ಚೆತ್ತು ಮರಳು ನೀತಿ ರೂಪಿಸಲಿ ಎಂದು ಆಗ್ರಹಿಸಿದರು.
ತೊಗರಿಗೂ ಹಣವಿಲ್ಲ: ತೊಗರಿ ಖರೀದಿಗಾಗಿ ಕೇಂದ್ರ ಸರ್ಕಾರ 5050 ರೂ. ನೀಡುತ್ತಿದೆ. ರಾಜ್ಯ ಸರ್ಕಾರ ಕೇವಲ 450 ರೂ. ನೀಡಬೇಕು. ಅದನ್ನೂ ನೀಡದ ರಾಜ್ಯ ಸರ್ಕಾರದ ನಡೆಯಿಂದ ರೈತರು ಕಂಗಾಲಾಗಿದ್ದಾರೆ. ಖರೀದಿ ಕೇಂದ್ರಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಆರೋಪಿಸಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಮತ್ತು ಬಿಎಸ್ ಆರ್‌ಸಿ ಎಂಬ ಬಣಗಳಾಗಿ ಬಿಜೆಪಿ ಒಡೆದು ಹೋಗಿತ್ತು.
ಅದರಿಂದಲೇ ಬಿಜೆಪಿ ಸೋಲುಂಡಿತ್ತು. ಈ ಸಾರಿ ಖಂಡಿತವಾಗಿಯೂ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣ ಮೇಲ್ದಂಡೆ ಯೋಜನೆ ಸಾಕಾರಕ್ಕೆ ನಾಟಕ ಮಾಡಿದ ಸಿದ್ದರಾಮಯ್ಯ ಜನರನ್ನು ವಂಚಿಸಿದ್ದಾರೆ. ಯೋಜನೆ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ. 10 ಸಾವಿರ ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿ ಮಂಕುಬೂದಿ ಎರಚಿದ್ದಾರೆ ಎಂದು ಕಾರಜೋಳ ಆರೋಪಿಸಿದರು.