Advertisement
ಲೋಕಾಯುಕ್ತಕ್ಕೆ ಬಲ ತುಂಬುತ್ತೇವೆ ಎಂದು ಪ್ರತಿ ಸರ್ಕಾರ ಹೇಳುತ್ತಲೇ ಇರುತ್ತದೆ. ಎಸಿಬಿ ರದ್ದಾಗಿ ಲೋಕಾಯುಕ್ತಕ್ಕೆ ಅಧಿಕಾರದ ಗತ ವೈಭವ ಮರುಕಳಿಸಿದ್ದರೂ, ಸಿಬ್ಬಂದಿ ಬಲ ಮಾತ್ರ ಇನ್ನೂ ಪಾತಾಳದಲ್ಲಿದೆ. ಆರಂಭದಿಂದಲೂ ಲೋಕಾಯುಕ್ತ ಸಂಸ್ಥೆ ಸಿಬ್ಬಂದಿಯ ಕೊರತೆಯಿಂದ ನರಳುತ್ತಿದೆ. ಈಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ದಾಳಿ ನಡೆಸಲು ಸಮರ್ಥ “ಸೇನಾನಿಗಳು” ಇಲ್ಲವಾಗಿದ್ದಾರೆ.
ಈಗಾಗಲೇ ಲೋಕಾಯುಕ್ತ ಖೆಡ್ಡಾಗೆ ಬಿದ್ದಿರುವ ಸರ್ಕಾರಿ ಅಧಿಕಾರಿಗಳು ನೂರಾರು ಕೋಟಿ ರೂ. ಅಕ್ರಮ ಆಸ್ತಿ ಸಂಪಾದಿಸಿರುವುದು ಲೋಕಾ ಪೊಲೀಸರ ಗಮನಕ್ಕೆ ಬಂದಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಸೂಕ್ತ ಸಾಕ್ಷ್ಯ ಸಂಗ್ರಹಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲು ಎರಡರಿಂದ ಮೂರು ವರ್ಷಗಳೇ ಉರುಳಬಹುದು. ಇನ್ನು ಸರಣಿ ದಾಳಿ ವೇಳೆ ದಾಖಲೆ ಕಲೆ ಹಾಕುವುದು, ದಾಖಲೆ ಪರಿಶೀಲನೆ, ಆರೋಪಿಗಳ ವಿಚಾರಣೆ ಪ್ರಕ್ರಿಯೆಯೂ ವಿಳಂಬವಾಗುತ್ತಿದೆ. ಎಸಿಬಿಯಲ್ಲಿದ್ದ 412ಕ್ಕೂ ಅಧಿಕ ಅಕ್ರಮ ಆಸ್ತಿ (ಡಿಎ ಕೇಸ್) ಪ್ರಕರಣ, ಲೋಕಾಯಕ್ತದಲ್ಲಿ ದಾಖಲಾಗಿರುವ 30ಕ್ಕೂ ಅಧಿಕ ಪ್ರಮುಖ ಕೇಸುಗ ಳ ತನಿಖೆಗೆ ಹಿನ್ನಡೆಯಾಗಿದೆ.
Related Articles
ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದ ಕಾಲದಿಂದಲೂ ಸಿಬ್ಬಂದಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಧಿಕಾರಾವಧಿಯಲ್ಲಿ ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಪೊಳ್ಳು ಭರವಸೆ ನೀಡುತ್ತಾ ಬಂದಿವೆ. ಸಾರ್ವಜನಿಕರ ಕಲ್ಪನೆಯಂತೆ ಭ್ರಷ್ಟರ ವಿರುದ್ಧ ಸಮರ ಸಾರಲು ಸಜ್ಜಾಗಿದ್ದರೂ ಸೂಕ್ತ ಸಿಬ್ಬಂದಿ ಇಲ್ಲದೇ ಯಶಸ್ವಿಯಾಗಿ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಲೋಕಾಯುಕ್ತ ಪೊಲೀಸರು.
Advertisement
590 ಹುದ್ದೆ ಖಾಲಿಲೋಕಾಯುಕ್ತದಲ್ಲಿ ಒಟ್ಟು 1,732 ಹುದ್ದೆಗಳಿದ್ದು, ಈ ಪೈಕಿ 1,142 ಹುದ್ದೆ ಭರ್ತಿಯಾಗಿವೆ. ಉಳಿದ 590 ಹುದ್ದೆ ಭರ್ತಿಯಾಗಿಲ್ಲ. ಸರ್ಕಾರ ಸೃಜಿಸಿರುವ ಹುದ್ದೆಗಳು ಸಾಲದೇ ಒಟ್ಟು 700 ಸಿಬ್ಬಂದಿ ನೀಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 8 ಎಸ್‌ಪಿ, 25 ಪೊಲೀಸ್ ಇನ್‌ಸ್ಪೆಕ್ಟರ್, 10 ಕಾನೂನು ಅಧಿಕಾರಿ, 9 ಡಿವೈಎಸ್‌ಪಿ, 198 ಕಾನ್‌ಸ್ಟೆಬಲ್, 41 ಹೆಡ್‌ಕಾನ್‌ಸ್ಟೆàಬಲ್, 47 ಕ್ಲರ್ಕ್, 92 ಡಿ ದರ್ಜೆ ನೌಕರರ ಹುದ್ದೆ ಖಾಲಿ ಇದೆ. ಸಿ ಗ್ರೂಪ್‌ನಲ್ಲಿ ಬರೋಬ್ಬರಿ 407 ಹುದ್ದೆ ಖಾಲಿ ಇವೆ. ಸರ್ಕಾರವು ಲೋಕಾಯುಕ್ತಕ್ಕೆ ಹೆಚ್ಚುವರಿ ಸಿಬ್ಬಂದಿ ನೀಡುವ ಭರವಸೆ ಇದೆ. ಆದರೆ, ಈ ಪ್ರಕ್ರಿಯೆಗಳು ಶೀಘ್ರವಾಗಿ ನಡೆದರೆ ಉತ್ತಮ. ಪ್ರಸ್ತುತ ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.
– ನ್ಯಾ. ಬಿ.ಎಸ್.ಪಾಟೀಲ್, ಲೋಕಾಯುಕ್ತರು ಅವಿನಾಶ್ ಮೂಡಂಬಿಕಾನ