ವಿಜಯಪುರ: ವಾಸ್ತವ ಹಾಗೂ ವೈಜ್ಞಾನಿಕ ಸ್ಥಿತಿಗಿಂತ ವಿಜಯಪುರ ಜಿಲ್ಲೆಯಲ್ಲಿ ಅರಣ್ಯದ ಕೊರತೆಯಿದೆ. ಅರಣ್ಯೀಕರಣದ ಕೊರತೆಯಿಂದ ಹಲವು ಸಮಸ್ಯೆ ಉದ್ಭವಿಸುವ ಕಾರಣ ಅರಣ್ಯ ಇಲಾಖೆಯ ಜಿಲ್ಲಾ, ವಿಭಾಗ ಮಟ್ಟದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ಶುಕ್ರವಾರ ನಗರದಲ್ಲಿರುವ ಲೋಕಾಯುಕ್ತ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನ್ಯಾ.ಪಾಟೀಲ, ಯಾವುದೇ ಪ್ರದೇಶದಲ್ಲಿ ಪರಿಸರ ಸಮತೋಲನಕ್ಕಾಗಿ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 1 ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಹೀಗಾಗಿ ಈ ಲೋಪಕ್ಕೆ ಕಾರಣವಾದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವುದಾಗಿ ಹೇಳಿದರು.
ಸರ್ಕಾರ ಸಾರ್ವಜನಿಕ ಅನುಕೂಲಕ್ಕಾಗಿ ರೂಪಿಸುವ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಬೇಕು. ಕಂದಾಯ, ಆರೋಗ್ಯ, ಆಸ್ಪತ್ರೆ, ಗ್ರಾಮ ಪಂಚಾಯತ್, ಸಬ್ ರಿಜಿಸ್ಟ್ರಾರ್, ಆರ್.ಟಿ.ಓ. ಸೇರಿದಂತೆ ಎಲ್ಲ ಇಲಾಖೆಗಳು ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಜನತೆಗೆ ಸರ್ಕಾರಿ ಸೇವೆ ನೀಡಬೇಕು ಎಂದು ಸೂಚಿಸಿದ್ದಾಗಿ ಹೇಳಿದರು.
ಸಾರ್ವಜನಿಕ ಸೇವೆ ನೀಡುವ ವಿಷಯದಲ್ಲಿ ಲೋಪ ಕಂಡು ಬಂದರೆ ಸಾರ್ವಜನಿಕ ಅಹವಾಲು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವೈಯಕ್ತಿಕ ಅಥವಾ ಸಾರ್ವಜನಿಕ ಯಾವುದೇ ಸಮಸ್ಯೆ ಇರಲಿ, ಮೂಲಭೂತ ಹಾಗೂ ಗಂಭೀರವಲ್ಲದ ಪ್ರಕರಣಗಳಲ್ಲಿ ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಕ್ಕೆ, ಗಂಭೀರ ಪ್ರಕರಣ ಇದ್ದಲ್ಲಿ ದೂರು ದಾಖಲಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ಹೇಳಿದರು.
ಲೋಕಾಯುಕ್ತ ವಿಜಯಪುರ ಎಸ್ಪಿ ಅನಿತಾ ಹದ್ದಣ್ಣವರ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.