ಲೋಕಾಪುರ: ಭಾಷೆ ಒಂದು ಸಂಪರ್ಕ ಸಾಧನ. ಮೋಡಿ ಲಿಪಿಯಂತಹ ದಾಖಲೆಗಳನ್ನು ಕಲಿಯುವುದರಿಂದ ಬೇರೆ ಬೇರೆ ಭಾಷೆಗಳನ್ನು ಅರಿಯಲು ಸಾಧ್ಯ. ಮೋಡಿ ದಾಖಲೆಗಳ ಅಧ್ಯಯನದಿಂದ ಸ್ಥಳೀಯ ಚರಿತ್ರೆ ಕಟ್ಟಿ ಕೊಡಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಎಸ್ .ಬಿ.ಕೃಷ್ಣಗೌಡರ ತಿಳಿಸಿದರು.
ಪಟ್ಟಣದ ಸಿ.ಎಂ ಪಂಚಕಟ್ಟಿಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಮೋಡಿ ದಾಖಲೆಗಳ ಐತಿಹಾಸಿಕ ಮಹತ್ವ ವಿಷಯದ ಕುರಿತು ಒಂದು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸಿನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮೋಡಿ ಲಿಪಿ ತಜ್ಞ ಡಾ| ಸಂಗಮೇಶ ಕಲ್ಯಾಣಿ ಮಾತನಾಡಿ, ವಿದ್ಯಾರ್ಥಿಗಳು ಒಂದು ತಿಂಗಳು ಪರ್ಯಂತ ಕಲಿತ ಮೋಡಿ ಲಿಪಿ ಜ್ಞಾನವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿಸಿದರು. ಕರ್ನಾಟಕ ಮತ್ತು ದೇಶದ ಇತರೇ ರಾಜ್ಯಗಳ ಪತ್ರಾಗಾರದಲ್ಲಿ ಲಕ್ಷಾಂತರ ದಾಖಲೆಗಳಿದ್ದು ಅವುಗಳ ಅಧ್ಯಯನ ಆಗಬೇಕು. ಯುವಕರು ಮೋಡಿ ದಾಖಲೆಗಳ
ಬಗ್ಗೆ ಜ್ಞಾನ ಬೆಳೆಸಿಕೊಂಡರೆ ಅವುಗಳ ಅಧ್ಯಯನ ಸಾಧ್ಯಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ| ಎಸ್.ಪಿ. ಕೊಕಟನೂರ ಮಾತನಾಡಿ, ಸಂಗಮೇಶ ಕಲ್ಯಾಣಿ ಈ ಭಾಗದ ಪ್ರಸಿದ್ಧ ಮೋಡಿ ಲಿಪಿ ತಜ್ಞರಾಗಿದ್ದು, ಅವರು ತಿಳಿಸಿಕೊಟ್ಟ ಮೋಡಿಲಿಪಿ ಜ್ಞಾನ ಮುಂದುವರಿಸಿಕೊಂಡು ಹೋಗಬೇಕು. ಇಲ್ಲಿ ಕಲಿತ ವಿಷಯ ನಿಶ್ಚಿತವಾಗಲೂ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ತಮ್ಮ ಪರಿಸರದಲ್ಲಿ ಕಂಡು ಬರುವ ಮೋಡಿ ದಾಖಲೆಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಐಕ್ಯೂಎಸಿ ಸಂಯೋಜಕ ಡಾ| ಮಲ್ಲಯ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೀತಿ ಮಿಲಾನಟ್ಟಿ ಪ್ರಾರ್ಥಿಸಿದರು. ಕಾವ್ಯ ಪಾಟೀಲ್ ಸ್ವಾಗತಿಸಿದರು. ವಿಜಯಾ ಯಡವನ್ನವರ ವಂದಿಸಿದರು. ಸಂಗಯ್ಯ ಗಣಾಚಾರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಬೋಧಕರಾದ ಪ್ರೊ| ಲಕ್ಷ್ಮೀ ಪಾಟೀಲ, ಪ್ರೊ| ತಿಮ್ಮಾರೆಡ್ಡಿ ಹಾಜರಿದ್ದರು.