Advertisement

ಲೋಕನಾಥ್ ಅಗಲಿಕೆಗೆ ಚಿತ್ರರಂಗದ ಕಂಬನಿ

06:07 AM Jan 01, 2019 | Team Udayavani |

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್(90 ವರ್ಷ) ಸೋಮವಾರ ಮುಂಜಾನೆ ನಿಧನರಾಗಿದ್ದು, ಗಣ್ಯರು ಮತ್ತು ಸಿನಿಮಾ ಕಲಾವಿದರು ಸೇರಿದಂತೆ ಕಂಬನಿ ಮಿಡಿದಿದ್ದಾರೆ. 35ವರ್ಷದಿಂದ ವೈಯಕ್ತಿಕವಾಗಿ ಬಲ್ಲೆ ಈ ಶಿಸ್ತಿನ ಕಲಾಬಂಧುವನ್ನ! ಅಂಬರೀಶ ರವರ ಸ್ಮರಣಾರ್ಥ ಸಂದರ್ಭದಲ್ಲಿ ನನ್ನಪಕ್ಕಕೂತು ಆತ್ಮೀಯ ವಾಗಿ ಮಾತಾಡಿಸಿದ್ದರು! ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಶ್ರೇಷ್ಠ ಮನುಜ!ಅವರಲ್ಲಿ ತಂದೆ ತಾತ ಬಂಧು ಕಾಣುತ್ತಿದ್ದೆ! ಅಲ್ಲಿತ್ತು ಅವರಮನೆ ಬಂದಿದ್ದರು ಸುಮ್ಮನೆ!ಹೋದರು ಮತ್ತೆ ಅವರ ಮನೆಗೆ! ಓಂಶಾಂತಿ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.

Advertisement

ಸ್ಯಾಂಡಲ್‍ವುಡ್‍ನ ಡಿ ಬಾಸ್ ದರ್ಶನ್ ಕೂಡ ಲೋಕನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕನ್ನಡ ಚಿತ್ರರಂಗಕ್ಕಾಗಿ 5 ದಶಕಗಳಿಂದ ದುಡಿದ ಹಿರಿಯ ನಟರಾದ ಉಪ್ಪಿನಕಾಯಿ ಲೋಕನಾಥ್ ಅಂಕಲ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರೊಡನೆ ನನಗೂ ಸಹ ಕೆಲ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ನೋಡಿದ ವ್ಯಕ್ತಿಗಳಲ್ಲಿ ಲೋಕನಾಥ್ ಅವರು ಸರಳವಾಗಿದ್ದರು. ತಮ್ಮ ಜೀವನವನ್ನು ಶಿಸ್ತು ಹಾಗೂ ನೈತಿಕತೆಯಿಂದ ನಡೆಸಿದ್ದಾರೆ. ಇವರು ನಮಗೆ ಬ್ಲಾಕ್ ಆಂಡ್ ವೈಟ್ ಕಾಲದಿಂದ ಈ ಕಾಲದವರೆಗೂ ಎಲ್ಲರನ್ನೂ ಮನರಂಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

Advertisement

ಅಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಲೋಕನಾಥ್ ಅವರ ಫೋಟೋ ಹಾಕಿ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ನಿಧನ ದುಃಖ ಉಂಟು ಮಾಡಿದೆ.ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟ ಲೋಕನಾಥ್ ಅವರ ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದೆ. ಚಿತ್ರರಂಗ , ರಂಗಭೂಮಿ ಎರಡರಲ್ಲೂ ಅವರ ಕೊಡುಗೆ ಸ್ಮರಣೀಯ.ಲೋಕನಾಥ್ ಆತ್ಮಕ್ಕೆ ಶಾಂತಿ ಸಿಗಲಿ,ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರರಂಗದ ಹಿರಿಯ ನಟ ಲೋಕನಾಥ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. 650ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧುಮಿತ್ರರಿಗೆ, ಅಭಿಮಾನಿಗಳಿಗೆ ದೇವರು ನೀಡಲಿ. ಇವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

ಇನ್ನು ಲೋಕನಾಥ್ ಅವರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದು, ಸುಮಾರು 650 ಕನ್ನಡ ಚಿತ್ರಗಳು ಮತ್ತು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 1927ರ ಆಗಸ್ಟ್ 14ರಂದು ಜನಿಸಿದ್ದ ಲೋಕನಾಥ್ 1970ರಲ್ಲಿ “ಸಂಸ್ಕಾರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. “ಭೂತಯ್ಯನ ಮಗ ಅಯ್ಯು’, “ನಾಗರಹಾವು’, “ಶರಪಂಜರ’, “ಮಿಂಚಿನ ಓಟ’, “ಬಂಗಾರದ ಪಂಜರ’, “ಕಾಕನಕೋಟೆ’ ಸೇರಿದಂತೆ ಇತ್ತೀಚಿನ “ಭೀಮಾ ತೀರದಲ್ಲಿ’ ಚಿತ್ರಗಳಲ್ಲಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next