ಬೆಂಗಳೂರು: ನಗರದ ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅಪ್ರಾಪ್ತ ಮಕ್ಕಳ ಭಿಕ್ಷಾಟನೆ ಹಾಗೂ ಮಕ್ಕಳು ಕೆಲ ವಸ್ತುಗಳನ್ನು ಮಾರಾಟ ಮಾಡುವುದನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಭಿಕ್ಷಾಟನೆಯಲ್ಲಿ ವ್ಯವಸ್ಥಿತ ಜಾಲವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ, ಮಕ್ಕಳ ಭಿಕ್ಷಾಟನೆ ಹಾಗೂ ಮಕ್ಕಳ ಕಳ್ಳಸಾಗಣೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಒಂದು ತಿಂಗಳಲ್ಲಿ ಸಮರ್ಪಕ ವರದಿ ನೀಡುವಂತೆ ರಾಜ್ಯಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿ ಉನ್ನತ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಲೋಪದಿಂದ ಮಕ್ಕಳ ಭಿಕ್ಷಾಟನೆ ಹಾಗೂ ಕಳ್ಳಸಾಗಣೆ ನಿರಂತರವಾಗಿ ಸಾಗುತ್ತಿದೆ. ಇದಲ್ಲದೆ ಹಬ್ಬಗಳ ಸಂದರ್ಭಗಳಲ್ಲಿ ನಗರದ ಬೇರೆ ಬೇರೆ ಭಾಗಗಗಳ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಮಾಹಿತಿಯಿದೆ.
ಇದನ್ನು ಗಮನಿಸಿದರೆ ಮಕ್ಕಳ ಭಿಕ್ಷಾಟನೆಯ ಹಿಂದೆ ವ್ಯವಸ್ಥಿತ ಜಾಲವಿರುವ ಅನುಮಾನ ಕಂಡು ಬರುತ್ತಿದೆ ಎಂದು ತಮ್ಮ ಆದೇಶದಲ್ಲಿ ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ. ಮತ್ತೂಂದೆಡೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಕ್ಕಳು ಕೆಲ ವಸ್ತುಗಳನ್ನು ಮಾರಾಟ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು, ಮಕ್ಕಳನ್ನು ವಸ್ತುಗಳ ಮಾರಾಟಕ್ಕೆ ಬಳಸುವುದು ಶಿಕ್ಷಾರ್ಹ ಅಪರಾಧ.
ಮಕ್ಕಳಿಂದ ಮಾರಾಟ ಮಾಡಿಸುವವರನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.