Advertisement

ಪರಾಮರ್ಶೆ: ಸಚಿವ ಖಾದರ್‌

12:27 AM May 26, 2019 | sudhir |

ಮಂಗಳೂರು: ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಅಭ್ಯರ್ಥಿ ಸೋಲನುಭವಿಸಿದ ಬಗ್ಗೆ ಜಿಲ್ಲಾ ಮಟ್ಟದಲ್ಲಿ, ವಿಧಾನ ಸಭಾ ಕ್ಷೇತ್ರವಾರು ಮತ್ತು ಬ್ಲಾಕ್‌ ಮಟ್ಟದಲ್ಲಿ ಪರಾಮರ್ಶೆ ನಡೆಸಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಮಿಥುನ್‌ ರೈ ಗೆಲ್ಲಬೇಕೆಂದು ನಾವೆಲ್ಲ ಶ್ರಮಿಸಿದ್ದೆವು. ಆದರೆ ಅನಿರೀಕ್ಷಿತ ಫಲಿತಾಂಶ ಬಂದಿದೆ. ಸೋಲು ಶಾಶ್ವತವಲ್ಲ; ಸಂವಿಧಾನದ ಚೌಕಟ್ಟಿನಲ್ಲಿ ಜನರ ಸೇವೆ ಮತ್ತು ದೇಶ ಸೇವೆ ಮಾಡಲು ಕಟಿಬದ್ಧರಾಗಿದ್ದೇವೆ ಎಂದವರು ಶನಿವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಯಲ್ಲಿ ಗೆದ್ದ ಮೋದಿ ಮತ್ತು ನಳಿನ್‌ ಅವರನ್ನು ಅಭಿನಂದಿಸಿದ ಖಾದರ್‌, ಮೋದಿಯವರು ನಳಿನ್‌ಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಮೋದಿ ಸರಕಾರ ಐದು ವರ್ಷಗಳಲ್ಲಿ ಈಡೇರಿಸದೆ ಇರುವ ಪ್ರತಿ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ನೀಡುವ ಭರವಸೆ ಈಗಲಾದರೂ ಈಡೇರಿಸಲಿ; ಪೆಟ್ರೋಲ್‌, ಡೀಸೆಲ್‌ ಬೆಲೆ ಸೆಂಚುರಿ ಬಾರಿಸದಿರಲಿ, ಯುವಜನರಿಗೆ ಉದ್ಯೋಗ ಒದಗಿಸಲಿ, ಸೈನಿಕರಿಗೂ ಜನರಿಗೂ ರಕ್ಷಣೆ ದೊರೆಯುವಂತಾಗಲಿ ಎಂದು ಆಶಿಸಿದರು.

ಸರಕಾರ ಸುಭದ್ರ
ರಾಜ್ಯದ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಬಿಜೆಪಿಯವರು ವರ್ಷದಿಂದ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದರೂ ಯಶಸ್ವಿಯಾಗಿಲ್ಲ; ಈಗಲೂ ಆಗಲಾರರು. ಅಪಪ್ರಚಾರ ಮಾಡಿ ಕಾಂಗ್ರೆಸ್‌- ಜೆಡಿಎಸ್‌ ಪ್ರತ್ಯೇಕಿಸುವ ಯತ್ನ ಫಲಿಸದು, ಎರಡೂ ಪಕ್ಷಗಳು ಒಗ್ಗಟ್ಟಿನಲ್ಲಿವೆ. ರಾಜ್ಯದ ಅಭಿವೃದ್ಧಿಗೆ ಜರಪರ ಕಾರ್ಯಕ್ರಮಗಳನ್ನು ನೀಡಿ 5 ವರ್ಷಗಳ ಆಡಳಿತವನ್ನು ಪೂರ್ತಿಗೊಳಿಸಲಿದೆ ಎಂದು ಸಚಿವ ಖಾದರ್‌ ಹೇಳಿದರು.

ಮರಳುಗಾರಿಕೆಗೆ ಸಂಬಂಧಿಸಿ ಆ್ಯಪ್‌ ವ್ಯವಸ್ಥೆ ಜಾರಿಗೊಳಿಸಿದ್ದು, ಇದರಿಂದ ಜನರಿಗೆ ಮತ್ತು ಮರಳುಗಾರಿಕೆ ನಡೆಸುವ ಮಂದಿಗೆ ಮತ್ತು ಲಾರಿ ಮಾಲಕರಿಗೆ ಅನುಕೂಲವಾಗಲಿದೆ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಸದಾಶಿವ ಉಳ್ಳಾಲ್‌, ಮಮತಾ ಗಟ್ಟಿ, ಭಾಸ್ಕರ್‌ ಕೆ., ಸಂತೋಷ್‌ ಶೆಟ್ಟಿ, ಪ್ರತಾಪ್‌ ಮಲ್ಲಿ, ಈಶ್ವರ ಉಳ್ಳಾಲ್‌, ಮಲಾರ್‌ ಮೋನು, ನಜೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next