Advertisement

ಬಿರುಕು ಮೂಡಿದ್ದ ಕುಟುಂಬಗಳನ್ನು ಒಗ್ಗೂಡಿಸಿದ ಅದಾಲತ್‌ : ಮಕ್ಕಳಿಗಾಗಿ ಮತ್ತೆ ಒಂದಾದ ದಂಪತಿ

05:02 PM Dec 19, 2021 | Team Udayavani |

ಹುಬ್ಬಳ್ಳಿ: ಕೌಟುಂಬಿಕ ಮನಸ್ತಾಪದಿಂದ ದೂರಾಗಿದ್ದ ದಂಪತಿಯು ಮಕ್ಕಳಿಗಾಗಿ ಮತ್ತೆ ವೈವಾಹಿಕ ಜೀವನಕ್ಕೆ ಮುಂದಾದ ಅಪರೂಪದ ಪ್ರಕರಣ ಶನಿವಾರ ಇಲ್ಲಿನ ಜಿಲ್ಲಾ ಮತ್ತು ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ್‌ ಅದಾಲತ್‌ ನಲ್ಲಿ ನಡೆಯಿತು. ಮೂವರು ಮಕ್ಕಳನ್ನು ಹೊಂದಿದ್ದ ದಂಪತಿ ಕೌಟುಂಬಿಕವಾಗಿ ಮನಸ್ತಾಪಗೊಂಡು ಪರಸ್ಪರ ದೂರಾಗಿ ಮಕ್ಕಳ ಪಾಲನೆ- ಪೋಷಣೆಯ ವಿಷಯವಾಗಿ 2-3 ವರ್ಷಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

Advertisement

ಜಿಲ್ಲಾ ಮತ್ತು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಮತ್ತು ಹಿರಿಯ ವಕೀಲರಾದ ಜಿ. ಮೀರಾಬಾಯಿ ಅವರ ರಾಜಿ ಸಂಧಾನದಿಂದ ದಂಪತಿಯು ಮಕ್ಕಳಿಗಾಗಿ ವೈವಾಹಿಕ ಜೀವನ
ಮರುಸ್ಥಾಪನೆಗೆ ಮುಂದಾದರು. ರಾಜಿ ಸಂಧಾನದ ಫಲವಾಗಿ ಒಬ್ಬರಿಗೊಬ್ಬರು ದೂರಾಗಿದ್ದ ದಂಪತಿಯು ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಪುನರ್‌ ಮಿಲನರಾದರು.

35 ವರ್ಷಗಳ ಆಸ್ತಿ ವಿವಾದ ಸುಖಾಂತ್ಯ
ಧಾರವಾಡ: ಕುಂದಗೋಳ ತಾಲೂಕಿನ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದ ಲೋಕ್‌ ಅದಾಲತ್‌ನಲ್ಲಿ ಕಳೆದ 35 ವರ್ಷಗಳಿಂದ ಎರಡು ಕುಟುಂಬಗಳ ಮಧ್ಯೆ ಬಗೆಹರಿಯದೇ ಉಳಿದಿದ್ದ ಆಸ್ತಿ ವಿವಾದ ಇತ್ಯರ್ಥಪಡಿಸಲಾಗಿದೆ. ನ್ಯಾಯಾ ಧೀಶರಾದ ಪರಮೇಶ್ವರ ಅವರು, 35 ವರ್ಷಗಳಿಂದ ಬಾಕಿ ಉಳಿದಿದ್ದ ಗಂಗಾಯಿ ಮತ್ತು ತೆಂಬದಮನಿ ಕುಟುಂಬಗಳ ನಡುವಿನ ಆಸ್ತಿ ವಿವಾದವನ್ನು ರಾಜಿ ಸಂಧಾನದ ಮೂಲಕ ಸುಖಾಂತ್ಯಗೊಳಿಸಿದ್ದಾರೆ.

ವಿಚ್ಛೇದನ ಹಂತದಲ್ಲಿದ್ದ ದಂಪತಿ ಒಂದಾದರು
ಚಿತ್ರದುರ್ಗ: ವಿಚ್ಛೇದನ ಹಂತದಲ್ಲಿದ್ದ ದಂಪತಿ ನ್ಯಾಯಾಧೀಶರ ಮನವೊಲಿಕೆ ಪರಿಣಾಮ ಒಂದಾದ ಪ್ರಸಂಗ ಶನಿವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನಡೆಯಿತು. ಮೊಳಕಾಲ್ಮೂರು ತಾಲೂಕು ಕೊಂಡ್ಲಹಳ್ಳಿಯ ಶಿಕ್ಷಕ ಗಂಗಾಧರ ತಮ್ಮದೇ ಗ್ರಾಮದ ಶಿವಲಕ್ಷ್ಮೀ ಎಂಬುವವರ ಜತೆ 2013, ಆ.28ರಂದು ಹಿರಿಯರ ಸಮ್ಮುಖದಲ್ಲಿ
ವಿವಾಹವಾಗಿದ್ದರು. ನಂತರ ಇವರಿಬ್ಬರಲ್ಲಿ ಕೌಟುಂಬಿಕ ಕಲಹ ಉಂಟಾಗಿ ವಿಚ್ಛೇದನ ಕೊಡಿಸುವಂತೆ ಶಿವಲಕ್ಷ್ಮೀ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಾಸಿಕ 6 ಸಾವಿರ ರೂ. ನೀಡುವಂತೆ ನ್ಯಾಯಾಲಯ ಗಂಗಾಧರ ಅವರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೀಗೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ನ್ಯಾಯಾಧೀಶರು ಪತಿ, ಪತ್ನಿ ಜತೆಯಾಗಿ ಜೀವನ ನಡೆಸುವಂತೆ ಮನವೊಲಿಸಿದರು. ನಂತರ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ಜತೆಯಾಗಿ ಜೀವನ ಸಾಗಿಸುವುದಾಗಿ ಒಪ್ಪಿಗೆ ಸೂಚಿಸಿದರು.

25 ದಂಪತಿಗಳನ್ನು ಮತ್ತೆ ಒಂದು ಮಾಡಿದ ಅದಾಲತ್‌
ಮೈಸೂರು : ದಾಂಪತ್ಯ ಜೀವನದಿಂದ ದೂರವಾಗಿ ಡಿವೋರ್ಸ್‌ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ 25 ದಂಪತಿಗಳನ್ನು ಮತ್ತೆ ಒಂದು ಮಾಡಿದ್ದು ಶನಿವಾರ ಇಲ್ಲಿ ನಡೆದ ಮೆಗಾ ಲೋಕ ಅದಾಲತ್‌. ಮೈಸೂರಿನಲ್ಲಿ ಶನಿವಾರ ಮಳಲವಾಡಿಯಲ್ಲಿರುವ ನ್ಯಾಯಾಲಯದ ಕಟ್ಟಡದಲ್ಲಿ ಮೆಗಾ ಲೋಕ ಅದಾಲತ್‌ ನಡೆಯಿತು. ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದ 25 ದಂಪತಿ ಗಳು
ಮತ್ತೆ ಒಗ್ಗೂಡಿದರು. ಈ ದಂಪತಿಗಳನ್ನು ರಾಜಿ ಮಾಡಿಸಿ ಮತ್ತೆ ಒಗ್ಗೂಡಿಸಲಾಯಿತು. ಒಟ್ಟು 128 ಪ್ರಕರಣಗಳಲ್ಲಿ 25 ದಂಪತಿಗಳು ತಿಳಿ ಹೇಳಿದಾಗ ಮತ್ತೆ ಒಗ್ಗೂಡಿದ್ದಾರೆ.
ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಎಂ.ಎಲ್‌.ರಘುನಾಥ್‌ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಲೋಕ ಅದಾಲತ್‌ನಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಜನನ ಪ್ರಮಾಣ ಪತ್ರ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ
ನ್ಯಾಯಾಧೀಶರು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next