Advertisement

ಸಂಸತ್ತಿನಲ್ಲಿ ಗಡಿ ಕಿಚ್ಚು : ಶಿವಸೇನೆ ಪ್ರಸ್ತಾವ; ಕೆರಳಿದ ರಾಜ್ಯದ ಸಂಸದರು

03:14 AM Mar 16, 2021 | Team Udayavani |

ಹೊಸದಿಲ್ಲಿ: ಬೆಳಗಾವಿ ಗಡಿ ವಿಚಾರದಲ್ಲಿ ಮತ್ತೆ ಕಾಲು ಕೆರೆದಿರುವ ಶಿವಸೇನೆಯು ಸೋಮವಾರ ಲೋಕಸಭೆಯಲ್ಲೂ ಈ ವಿಚಾರವನ್ನೆತ್ತಿ ಅನಗತ್ಯ ಗದ್ದಲ ಎಬ್ಬಿಸಿದೆ. “ಬೆಳಗಾವಿಯಲ್ಲಿ ಮರಾಠಿಗರಿಗೆ ರಕ್ಷಣೆ ಇಲ್ಲ’ ಎಂದು ಶಿವಸೇನೆ ಸಂಸದ ಅರವಿಂದ್‌ ಸಾವಂತ್‌ ಹೇಳಿದರೆ, ಬಿಜೆಪಿ ಸಂಸದ ಶಿವಕುಮಾರ್‌ ಉದಾಸಿ ಸ್ಪಷ್ಟ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ.

Advertisement

ಶೂನ್ಯವೇಳೆಯಲ್ಲಿ ಈ ವಿಚಾರ ಎತ್ತಿದ ಸಾವಂತ್‌, ಬೆಳಗಾವಿಯ ಮರಾಠಿ ಭಾಷಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಸ್ವಾತಂತ್ರ್ಯ ಬಂದ ಬೆನ್ನಲ್ಲೇ ಎಲ್ಲ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಆಯಾ ಭಾಷಿಕರು ಇರುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಜ್ಯಗಳನ್ನು ರಚಿಸಲಾಯಿತು. ಆಗ ಬೆಳಗಾವಿ ಜಿಲ್ಲೆ ಕರ್ನಾಟಕಕ್ಕೆ ಸೇರ್ಪಡೆ ಗೊಂಡಿರಲಿಲ್ಲ. ಅನಂತರ ಅದನ್ನು ಕರ್ನಾಟಕಕ್ಕೆ ಸೇರಿಸಲಾಯಿತು ಎಂದು ಆರೋಪಿಸಿದರು.

ಇದು ಕರ್ನಾಟಕ ಸಂಸದರನ್ನು ಕೆರಳಿಸಿತು. ಉಭಯ ಪಕ್ಷಗಳ ಸಂಸದರ ನಡುವೆ ವಾಗ್ವಾದ ನಡೆಯಿತು. ಗದ್ದಲದ ನಡುವೆ ಮಾತನಾಡಿದ ಬಿಜೆಪಿ ಸಂಸದ ಶಿವಕುಮಾರ್‌ ಉದಾಸಿ, ಶಿವಸೇನೆಯು ಅಧಿಕಾರಕ್ಕಾಗಿ ತನ್ನ ಹಿಂದುತ್ವ ಸಿದ್ಧಾಂತವನ್ನೇ ಬದಿಗೊತ್ತಿದೆ. ಆ ವಿಚಾರವಾಗಿ ಮಹಾರಾಷ್ಟ್ರದ ಜನರು ಶಿವಸೇನೆಯ ಮೇಲೆ ಅಸಮಾಧಾನಗೊಂಡಿದ್ದಾರೆ. ಈಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಶಿವಸೇನೆ ಗಡಿ ವಿವಾದಕ್ಕೆ ತುಪ್ಪ ಸುರಿಯುತ್ತಿದೆ. ಶಿವಸೇನೆಯ ಸಂಸದರು ಲೋಕಸಭೆಯಲ್ಲಿ ಗಡಿ ವಿಚಾರ ಎತ್ತುತ್ತಿರುವುದರ ಉದ್ದೇಶ ಇದು ಎಂದು ಟೀಕಿಸಿದರು.

“ಬೆಳಗಾವಿ ಗಡಿ ಸಮಸ್ಯೆಯು 1964ರ ಮಹಾಜನ್‌ ವರದಿಯ ಅನುಷ್ಠಾನದಿಂದ ನಿವಾರಣೆಯಾಗಿದೆ. ಈಗ ಮತ್ತೆ ಆ ವಿಚಾರವನ್ನು ಕೆದಕುವ ಪ್ರಮೇಯವಿಲ್ಲ’ ಎಂದು ಉದಾಸಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next