ನವದೆಹಲಿ:ಕಾಂಗ್ರೆಸ್ ಸಂಸದೀಯ ಮಂಡಳಿ (ಸಿಪಿಸಿ) ಅಧ್ಯಕ್ಷೆಯಾಗಿ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಆಯ್ಕೆಯಾಗಿದ್ದಾರೆ. ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದು ಒಂದು ಭಾವನ್ಮಾತಕ ಕ್ಷಣ ಎಂದಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶ “ಪ್ರಧಾನಿ ಮೋದಿಯವರಿಗೆ ನೈತಿಕ ಮತ್ತು ರಾಜಕೀಯ ಸೋಲು’ ಎಂದು ಹೇಳಿದ್ದಾರೆ. ಹೀಗಿದ್ದರೂ ಭಾನುವಾರ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರಧಾನಿ ಮೋದಿಯವರು ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಹೆಸರಿನಲ್ಲಿ ಮತ ಕೇಳಲಿಲ್ಲ. ಅವರು ತಮ್ಮ ಹೆಸರಿನಲ್ಲಿಯೇ ಮತ ಯಾಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಬದಲಾವಣೆ ಹೊಂದಿ, ಜನರ ನಿರೀಕ್ಷೆ ತಕ್ಕಂತೆ ಕೆಲಸ ಮಾಡಲಿದ್ದಾರೆ ಎಂದು ನಿರೀಕ್ಷೆ ಮಾಡುವುದೇ ಬೇಡ ಎಂದರು ಸೋನಿಯಾ ಗಾಂಧಿ.
ಹೊಣೆ ಇದೆ: ನರೇಂದ್ರ ಮೋದಿಯವರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾರರು. ಹೀಗಾಗಿ, ಅವರ ಮೇಲೆ ನಿಗಾ ಇರಿಸಬೇಕಾದ ವಿಶೇಷ ಹೊಣೆಗಾರಿಕೆ ಕಾಂಗ್ರೆಸ್ ಸಂಸದರಿಗೆ ಇದೆ ಎಂದರು ಸೋನಿಯಾ ಗಾಂಧಿ. ಹಿಂದಿನ 10 ವರ್ಷಗಳಂತೆ ಈ ಬಾರಿ ಮೋದಿಯವರಿಗೆ ಸಂಸದೀಯ ವ್ಯವಸ್ಥೆಯನ್ನು ಮೀರಿ ಕಾರ್ಯವೆಸಗಲು ಅವಕಾಶ ಕೊಡುವುದಿಲ್ಲ. ಸಂಸದೀಯ ವ್ಯವಸ್ಥೆಯಂತೆ ನಾವು ವರ್ತಿಸಬೇಕು ಎಂದು ಕಾಂಗ್ರೆಸ್‌ನ ನೂತನ ಸಂಸದರಿಗೆ ಕರೆ ನೀಡಿದ್ದಾರೆ.
10 ವರ್ಷಗಳಲ್ಲಿ ಮೋದಿ ಸರ್ಕಾರ ಸಂಸದೀಯ ವ್ಯವಸ್ಥೆಯನ್ನು ಮೀರಿ ವರ್ತಿಸಿದೆ. ಈ ಬಾರಿ ಕೇಂದ್ರ ಸರ್ಕಾರಕ್ಕೆ ಇಂಥ ಅವಕಾಶ ನೀಡುವುದಿಲ್ಲ. ನಮ್ಮ ಬಲ ಲೋಕಸಭೆಯಲ್ಲಿ ವೃದ್ಧಿಯಾಗಿದೆ. ಇಂಡಿಯಾ ಒಕ್ಕೂಟದ ಪಕ್ಷಗಳ ಸ್ಥಾನಗಳೂ ಹೆಚ್ಚಾಗಿದೆ ಎಂದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕೂಡ ಪ್ರತಿಪಕ್ಷಗಳ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ತಂದುಕೊಟ್ಟಿದೆ ಎಂದರು.
ಸೋನಿಯಾ ಹೇಳಿದ್ದೇನು?
– ಮೋದಿಗೆ ಸಂಸದೀಯ ವ್ಯವಸ್ಥೆ ಮೀರಿ ಕೆಲಸ ಮಾಡಲು ಅವಕಾಶ ಇಲ್ಲ
– ಕಾಂಗ್ರೆಸ್, ಇಂಡಿಯಾ ಒಕ್ಕೂಟದ ಶಕ್ತಿ ವರ್ಧಿಸಿದ್ದು ಸಂತೋಷ
– ರಾಹುಲ್ ಗಾಂಧಿ ಭಾರತ್ ಜೋಡೋದಿಂದ ಪಕ್ಷಕ್ಕೆ ಅನುಕೂಲ
– ಸ್ವಂತ ಹೆಸರಲ್ಲೇ ಮತ ಯಾಚಿಸಿದ ಪ್ರಧಾನಿ ನರೇಂದ್ರ ಮೋದಿ