Advertisement

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

01:19 AM Apr 28, 2024 | Team Udayavani |

ಉಡುಪಿ: ಸಿಸಿಲಿ ಶಾಲೆಯಲ್ಲಿ ಮತಯಂತ್ರಗಳು
ಮೂರು ಹಂತಗಳಲ್ಲಿ ಬಿಗಿ ಭದ್ರತೆ ; ಒಟ್ಟು 16 ಸ್ಟ್ರಾಂಗ್‌ರೂಮ್‌ಗಳು
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಉಡುಪಿ ಅಜ್ಜರಕಾಡಿನ ಸಂತ ಸಿಸಿಲಿ ಶಾಲೆಯ ಸ್ಟ್ರಾಂಗ್‌ ರೂಂನಲ್ಲಿ ಸುಭದ್ರವಾಗಿ ಇರಿಸಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಉಡುಪಿಯ 4 ವಿಧಾನಸಭಾ ಕ್ಷೇತ್ರಗಳ ಮತಪೆಟ್ಟಿಗೆಗಳು ಶುಕ್ರವಾರ ತಡರಾತ್ರಿ 2 ಗಂಟೆಯ ವರೆಗೆ ಸ್ಟ್ರಾಂಗ್‌ ರೂಂಗೆ ಆಗಮಿಸಿದ್ದವು. ಚಿಕ್ಕಮಗಳೂರಿನ 4 ವಿಧಾನಸಭಾ ಕ್ಷೇತ್ರದ ಮತಪೆಟ್ಟಿಗೆಗಳು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂತ ಸಿಸಿಲಿ ಶಾಲೆಗೆ ಆಗಮಿಸಿದವು.

ಬಿಗಿ ಭದ್ರತೆ
ಸ್ಟ್ರಾಂಗ್‌ ರೂಂಗೆ ಮೊದಲನೇ ಹಂತದಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ಬಳಿಕ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ಅನಂತರ ಸಮಗ್ರ ಕಟ್ಟಡದ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸರು ಭದ್ರತೆ ನಿರ್ವಹಿಸಲಿದ್ದಾರೆ. ಮೂರು ಕಂಪೆನಿಗಳ ಒಟ್ಟು 300 ಮಂದಿ ಸಶಸ್ತ್ರ ಪೊಲೀಸ್‌ ಸಿಬಂದಿಯೂ ಸ್ಥಳದಲ್ಲಿದ್ದಾರೆ. ಶನಿವಾರ ಸಂತ ಸಿಸಿಲಿ ಶಾಲಾ ಆವರಣದ ಮುಂಭಾಗದ ಗೇಟ್‌ ಮೂಲಕ ಮಾತ್ರ ಒಳಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಸ್ಟ್ರಾಂಗ್‌ರೂಂ ಇರುವ ಸಂತ ಸಿಸಿಲಿ ಶಾಲಾ ಆವರಣದ ಒಳಭಾಗ ಹಾಗೂ ಹೊರಭಾಗದಲ್ಲಿ ಕಣ್ಗಾವಲಿಗೆ ಒಟ್ಟು 160 ಸಿಸಿ ಕೆಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಜತೆಗೆ ಪೊಲೀಸ್‌ ಸಿಬಂದಿ ದಿನದ 24 ತಾಸುಗಳ ಕಾಲ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೂ. 4ರಂದು ಮತ ಎಣಿಕೆ ನಡೆಯಲಿದೆ.

16 ಸ್ಟ್ರಾಂಗ್‌ ರೂಂಗಳು
ಸಂತ ಸಿಸಿಲಿ ಶಾಲೆಯಲ್ಲಿ ಅಗತ್ಯವಿರುವಷ್ಟು ಕೊಠಡಿಗಳು ಲಭ್ಯ ಇರುವ ಕಾರಣ ಒಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಕೊಠಡಿಗಳಂತೆ ಒಟ್ಟು 16 ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡ ಸಹಿತ ಚತುಷೊRàನ ಆಕಾರದಲ್ಲಿರುವ ಇಡೀ ಕಟ್ಟಡವನ್ನು ನಾಲ್ಕು ಕೇಂದ್ರಗಳಾಗಿ ವಿಭಜಿಸಲಾಗಿದ್ದು, ಒಟ್ಟು 16 ಸ್ಟ್ರಾಂಗ್‌ ರೂಮ್‌ಗಳನ್ನು ಸಿದ್ಧಪಡಿಸಲಾಗಿದೆ.

Advertisement

ಜಿಲ್ಲಾಧಿಕಾರಿ ಭೇಟಿ
ಸಂತ ಸಿಸಿಲಿ ಶಾಲಾ ಆವರಣಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಟ್ರಾಂಗ್‌ ರೂಂನಲ್ಲಿ ಜೋಡಣೆ ಮಾಡಿರುವ ಮತಯಂತ್ರಗಳನ್ನು ವೀಕ್ಷಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ದ. ಕ.: ಮತಯಂತ್ರ ಎನ್‌ಐಟಿಕೆಯಲ್ಲಿ ಭದ್ರ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಸುಗಮವಾಗಿ ಪೂರ್ಣಗೊಂಡಿದ್ದು, ಮತಪೆಟ್ಟಿಗೆಗಳನ್ನು ಸುರತ್ಕಲ್‌ ಎನ್‌ಐಟಿಕೆಯ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಭದ್ರತಾ ಕೊಠಡಿಯ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ.

ಮತಯಂತ್ರಗಳ ಭದ್ರತಾ ಕೊಠಡಿಗಳಿಗೆ ಸಿಎಆರ್‌ ವಿಭಾಗದ ಡಿಸಿಪಿ ಸಿದ್ದನಗೌಡ ಪಾಟೀಲ್‌ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಸಂಗ್ರಹಿಸಿ ಭದ್ರತಾ ಕೊಠಡಿಗಳಲ್ಲಿ ಇರಿಸಲು ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ಸಮಯ ತಗಲಿತ್ತು. ಜೂನ್‌ 4ರಂದು ಮತಗಳ ಎಣಿಕೆ ನಡೆಯಲಿದೆ. ಭದ್ರತಾ ಕೊಠಡಿಗೆ ಮೂರು ಪಾಳಿಯಲ್ಲಿ ಭದ್ರತೆ ಒದಗಿಸಲಾಗಿದೆ. ಪ್ರತೀ ಪಾಳಿಯಲ್ಲಿ 40 ಮಂದಿ ಸಿವಿಲ್‌ ಪೊಲೀಸರು, 40 ಸಶಸ್ತ್ರ ರಾಜ್ಯ ಮೀಸಲು ಪೊಲೀಸ್‌ ಪಡೆಯ ಪೊಲೀಸಲು ಭದ್ರತೆ ಒದಗಿಸಲಿದ್ದಾರೆ.

ಕಾಸರಗೋಡು: ಮತಯಂತ್ರಗಳು ಸ್ಟ್ರಾಂಗ್‌ರೂಂನಲ್ಲಿ ಭದ್ರ
ಕಾಸರಗೋಡು: ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಅಭ್ಯರ್ಥಿಗಳ ಭವಿಷ್ಯವಿರುವ ಮತಯಂತ್ರಗಳನ್ನು ಬಿಗು ಬಂದೋಬಸ್ತಿನಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿಯಾದ ಚುನಾವಣಾಧಿಕಾರಿ ಕೆ. ಇಂಬುಶೇಖರ್‌ ಅವರ ಉಪಸ್ಥಿತಿಯಲ್ಲಿ ಮತ ಯಂತ್ರಗಳನ್ನು ಸ್ಟ್ರಾಂಗ್‌ ರೂಂನಲ್ಲಿರಿಸಿ ಮೊಹರು ಹಾಕಲಾಗಿದೆ. ಜೂ. 4ರಂದು ಮತ ಎಣಿಕೆ ದಿನದಂದು ಮತ ಯಂತ್ರಗಳನ್ನು ತೆರೆಯಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next