Advertisement

ಲೋಕಸಭೆ ಚುನಾವಣೆ ಬೆನ್ನಲ್ಲೇ ಗ್ರಾ.ಪಂ. ನೀತಿ ಸಂಹಿತೆ!

01:31 AM May 10, 2019 | Team Udayavani |

ಪುತ್ತೂರು: ಪ್ರಸ್ತುತ ಎಲ್ಲಡೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿದ್ದು, ಮೇ 23ಕ್ಕೆ ಫಲಿತಾಂಶದ ಬಳಿಕ ನೀತಿ ಸಂಹಿತೆ ತೆರವಾದರೂ ಪುತ್ತೂರು ತಾಲೂಕಿನ ಎರಡು ಗ್ರಾ.ಪಂ.ಗಳ ತಲಾ ಒಂದು ವಾರ್ಡ್‌ನಲ್ಲಿ ನೀತಿ ಸಂಹಿತೆ ಮತ್ತೆ ಮುಂದುವರಿಯಲಿದೆ. ಕಾರಣ ಇಲ್ಲಿ ಮೇ 29ರಂದು ಉಪಚುನಾವಣೆ ಘೋಷಣೆಯಾಗಿದೆ!

Advertisement

ಲೋಕಸಭಾ ಚುನಾವಣೆಯ ಬೆನ್ನಲ್ಲೇ ನಗರ ಸ್ಥಳೀಯಾಡಳಿತ ಹಾಗೂ ಗ್ರಾ.ಪಂ.ಗಳ ತೆರವಾದ ಸದಸ್ಯ ಸ್ಥಾನಗಳಿಗೆ ಚುನಾವಣಾ ಆಯೋಗವು ಮೇ 29ರಂದು ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಪುತ್ತೂರು ತಾಲೂಕಿನ ಕಬಕ ಗ್ರಾ.ಪಂ.ನ 1ನೇ ವಾರ್ಡ್‌ ಹಾಗೂ 34ನೇ ನೆಕ್ಕಿಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ನ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಹುತೇಕ ಕೆಲಸ ಕಾರ್ಯಗಳು ನಿಂತು ಹೋಗಿ ಒಮ್ಮೆ ನೀತಿಸಂಹಿತೆ ಮುಗಿದರೆ ಸಾಕು ಎನ್ನುತ್ತಿದ್ದು, ಈ ಭಾಗದ ಮಂದಿ ಮತ್ತೆ ನೀತಿಸಂಹಿತೆ ವ್ಯಾಪ್ತಿಗೆ ಬರಲಿದ್ದಾರೆ.

ಕಬಕ ಗ್ರಾ.ಪಂ.ನ ವಾರ್ಡ್‌ 1ರ ಸದಸ್ಯ ವಿಟ್ಟಲ ಗೌಡ ಬನ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ 26ರಿಂದ ಆ ಸ್ಥಾನ ತೆರವಾಗಿತ್ತು. 34ನೇ ನೆಕ್ಕಿಲಾಡಿ ಗ್ರಾ.ಪಂ.2ನೇ ವಾರ್ಡ್‌ ಸದಸ್ಯೆ ದೇವಕಿ ಅವರು ಅಂಗನವಾಡಿ ಸಹಾಯಕಿಯಾಗಿ ನೇಮಕವಾದ ಹಿನ್ನೆಲೆ ರಾಜೀನಾಮೆ ಕೊಟ್ಟ ಪರಿಣಾಮ ಕಳೆದ ಡಿಸೆಂಬರ್‌ 27ರಿಂದ ಸ್ಥಾನ ತೆರವಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಗ್ರಾ.ಪಂ.ನಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಿ ಭರ್ತಿ ಮಾಡುವಂತೆ ಸಲ್ಲಿಸಿರುವ ವರದಿಯನ್ವಯ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಕಬಕ ಗ್ರಾ.ಪಂ. 1ನೇ ವಾರ್ಡ್‌ ಚುನಾವಣೆಯಲ್ಲಿ ಪುತ್ತೂರು ನಗರಸಭೆಯ ಕಮ್ಯುನಿಟಿ ಅಫೆಕ್ಸ್‌ ಆಫೀಸರ್‌ ಚಂದ್ರಕುಮಾರ್‌ ಎ. ಚುನಾವಣಾಧಿಕಾರಿ ಹಾಗೂ ಗ್ರಾ.ಪಂ.ನ ಪಿಡಿಒ ಆಶಾ ಇ. ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

34ನೇ ನೆಕ್ಕಿಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ಗೆ ಪುತ್ತೂರು ತಾ.ಪಂ. ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ನವೀನ ಭಂಡಾರಿ ಅವರು ಚುನಾವಣಾಧಿಕಾರಿ ಹಾಗೂ ಗ್ರಾ.ಪಂ.ಪಿಡಿಒ ಜಯಪ್ರಕಾಶ್‌ ಎಂ. ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮತದಾರರೆಷ್ಟು?
ಕಬಕ ಗ್ರಾ.ಪಂ.ನ 1ನೇ ವಾರ್ಡ್‌ನ್ನು 2 ಬೂತ್‌ಗಳಾಗಿ ವಿಭಾಜಿಸಲಾಗಿದೆ. ಒಂದು ವಾರ್ಡ್‌ನಲ್ಲಿ 1,300ಕ್ಕಿಂತ ಅಧಿಕ ಮತದಾರರಿದ್ದರೆ ಅದನ್ನು ಎರಡು ಬೂತ್‌ಗಳಾಗಿ ವಿಭಾಗಿಸಲಾಗುತ್ತದೆ. ಒಂದರಲ್ಲಿ 427 ಪುರುಷರು ಹಾಗೂ 395 ಮಹಿಳೆಯರು ಸೇರಿ ಒಟ್ಟು 822 ಮತದಾರರಿದ್ದಾರೆ. ಮತ್ತೂಂದರಲ್ಲಿ 363 ಪುರುಷರು ಹಾಗೂ 365 ಮಹಿಳೆಯರು ಸೇರಿ 728 ಮತದಾರರಿದ್ದಾರೆ. ಹೀಗಾಗಿ ಈ ಒಂದು ವಾರ್ಡ್‌ನಲ್ಲಿ 1,550 ಮತದಾರರಿದ್ದಾರೆ. ನೆಕ್ಕಿಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ನಲ್ಲಿ 495 ಪುರುಷರು ಹಾಗೂ 477 ಮಹಿಳೆಯರು ಸೇರಿ ಒಟ್ಟು 972 ಮತದಾರರಿದ್ದಾರೆ.

Advertisement

ವಾರ್ಡ್‌ಗಳಿಗೆ ಮಾತ್ರ ಅನ್ವಯ
ಲೋಕಸಭಾ ಚುನಾವಣಾ ಫಲಿತಾಂಶ ಮೇ 23ಕ್ಕೆ ಪ್ರಕಟಗೊಂಡರೂ ಮೇ 27ರ ವರೆಗೆ ನೀತಿಸಂಹಿತೆ ಇರುತ್ತದೆ. ಬಳಿಕ ಉಪಚುನಾವಣೆ ನಡೆಯುವ ಗ್ರಾ.ಪಂ.ನ ವಾರ್ಡ್‌ಗಳಿಗೆ ಮಾತ್ರ ನೀತಿಸಂಹಿತೆ ಅನ್ವಯವಾಗುತ್ತದೆ. ಹೀಗಾಗಿ ಆ ಸಂದರ್ಭ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವಂತಿಲ್ಲ.
– ಡಾ| ಪ್ರದೀಪಕುಮಾರ್‌, ತಹಶೀಲ್ದಾರ್‌, ಪುತ್ತೂರು

ಚುನಾವಣಾ ವೇಳಾಪಟ್ಟಿ
ಮೇ 13 ದ.ಕ. ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ.
ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.
ಮೇ 17 ನಾಮಪತ್ರ ಪರಿಶೀಲನೆ
ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಮೇ 29 ಬೆಳಗ್ಗ 7ರಿಂದ ಸಂಜೆ 5ರ ವರೆಗೆ ಮತದಾನ
ಮೇ 30 ಅಗತ್ಯವಿದ್ದರೆ ಮರುಮತದಾನ
ಮೇ 31 ಮತ ಎಣಿಕೆ ಹಾಗೂ ಚುನಾವಣಾ ಪ್ರಕ್ರಿಯೆ ಮುಕ್ತಾಯ

ಕಿರಣ್‌ ಸರಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next