Advertisement

Lok Sabha Poll 2024: ಸಂಸತ್‌ ಅಖಾಡಕ್ಕೆ ಧುಮುಕಿದ ಸಚಿವರ ಮಕ್ಕಳು

10:44 AM Mar 22, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಹಲವಾರು ಆಕಾಂಕ್ಷಿಗಳ ನಿರೀಕ್ಷೆಗಳು ಕೈಕೊಟ್ಟಿವೆ. ತಮ್ಮ ಮಕ್ಕಳಿಗೇ ಟಿಕೆಟ್‌ ಕೊಡಿಸಬೇಕು ಎಂಬ ಇಬ್ಬರೂ ಪ್ರಭಾವಿ ಸಚಿವರ ಆಸೆ ಕೈಗೂಡಿದೆ. ಮೊದಲೇ ನಿರೀಕ್ಷೆ ಮಾಡಿದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹಾಗೂ ಬೆಳಗಾವಿ ಕ್ಷೇತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್‌ ಟಿಕೆಟ್‌ ಪಡೆದುಕೊಂಡಿದ್ದಾರೆ.

Advertisement

ಕಳೆದ ನಾಲ್ಕೈದು ತಿಂಗಳಿಂದ ಹತ್ತಾರು ಹೆಸರುಗಳನ್ನು ಗಾಳಿಯಲ್ಲಿ ತೇಲಿಬಿಟ್ಟು ಆಕಾಂಕ್ಷಿಗಳಲ್ಲಿ ಹೊಸ ಆಸೆ ಹುಟ್ಟಿಸಿದ್ದ ನಾಯಕರು ಕೊನೆಗೆ ತಾವೇ ಎಲ್ಲರ ಆಸೆಗಳನ್ನು ಚಿವುಟಿ ಹಾಕಿದ್ದಾರೆ. ತೋರಿಕೆಗಾಗಿ ನಡೆದ ಅಭಿಪ್ರಾಯ ಸಂಗ್ರಹ ಸಭೆಗಳು ಅಂದುಕೊಂಡಂತೆ ಯಾವುದೇ ಪರಿಣಾಮ ಬೀರಿಲ್ಲ. ಈ ಮೂಲಕ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಂಪೂರ್ಣ ಹೊಸ ಮುಖಗಳಿಗೆ ಆದ್ಯತೆ ನೀಡಿದೆ.

ರಾಜಕೀಯದಲ್ಲಿ ಇನ್ನೂ ಅಂತಹ ಅನುಭವ ಹೊಂದಿರದ ಪ್ರಿಯಾಂಕಾ ಮತ್ತು ಮೃಣಾಲ್‌ ಅವರಿಗೆ ತಂದೆ ಮತ್ತು ತಾಯಿ ಅನುಭವವವೇ ನೆರವಿಗೆ ಬರಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ತಾವಾಗಲಿ, ತಮ್ಮ ಮಕ್ಕಳಾಗಲಿ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳುತ್ತಲೇ ಸಚಿವರು ತಮಗಮ ಮಕ್ಕಳಿಗೇ ಟಿಕೆಟ್‌ ಸಿಗುವಂತೆ ನೋಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಕುಟುಂಬ ಪಾರುಪತ್ಯ ಯಥಾರೀತಿ ಮುಂದುವರಿದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾರ್ಯಕರ್ತರು ನಿರೀಕ್ಷೆ ಮಾಡಿದಂತೆ ಅನುಭವಕ್ಕೆ ಮನ್ನಣೆ ಸಿಕ್ಕಿಲ್ಲ. ಬದಲಾಗಿ ಪ್ರಭಾವ, ಆರ್ಥಿಕ ಬಲಾಡ್ಯತೆಗೆ ಬೆಲೆ ಸಿಕ್ಕಿದೆ. ನಿಷ್ಠಾವಂತರು ಮತ್ತೆ ಚಾತಕಪಕ್ಷಿಯಂತೆ ಕಾಯಬೇಕಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹಾಗೆ ನೋಡಿದರೆ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರ ಮಕ್ಕಳಿಗೇ ಟಿಕೆಟ್‌ ಕೊಡಬೇಕು ಎಂಬುದು ಮೊದಲೇ ನಿರ್ಧಾರವಾದಂತೆ ಕಂಡಿತ್ತು. ಇದಕ್ಕೆ ಪೂರಕವಾಗಿ ಸಚಿವದ್ವಯರು ಸಹ ಮಕ್ಕಳಿಗೆ ಟಿಕೆಟ್‌ ಕೊಡಿಸಬೇಕು ಎನ್ನುವ ವಾತಾವರಣ ಸೃಷ್ಟಿ ಮಾಡಿಕೊಂಡಿದ್ದರು. ಎಲ್ಲಿಯೂ ತಮ್ಮ ವಿರುದ್ಧ ಅಪಸ್ವರ ಬರದಂತೆ ಬಹಳ ಎಚ್ಚರಿಕೆ ವಹಿಸಿದ್ದರು. ಮಕ್ಕಳ ಸ್ಪರ್ಧೆಗೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟ ಮುಖಂಡರು ತಮ್ಮ ಅಸಮಾಧಾನವನ್ನು ಒಳಗೇ
ನುಂಗಿಕೊಂಡರು.

ಚಿಕ್ಕೋಡಿಯಲ್ಲಿ ಸರಳವಾಗಿಲ್ಲ:
ಪ್ರಬಲ ನಾಯಕರಿಂದಲೇ ತುಂಬಿರುವ ಚಿಕ್ಕೋಡಿ ಕ್ಷೇತ್ರದಿಂದ ತಮ್ಮ ಮಗಳಿಗೆ ಟಿಕೆಟ್‌ ತಂದಿರುವ ಸಚಿವ ಸತೀಶ ಜಾರಕಿಹೊಳಿ ಅವರ ಮುಂದಿನ ಹಾದಿ ಅಂದುಕೊಂಡಷ್ಟು ಸರಳವಾಗಿಲ್ಲ. ಹೆಜ್ಜೆಹೆಜ್ಜೆಗೂ ಆಂತರಿಕವಾಗಿ ಅಸಮಾಧಾನ ಕಾಡಲಿದೆ. ಎಲ್ಲರೂ ಒಗ್ಗಟ್ಟಿನಿಂದ ಹೋಗುವರೇ ಎಂಬ ಅನುಮಾನ ಮೂಡಿದೆ. ಇದರ ಜತೆಗೆ ರಾಜಕೀಯದಲ್ಲಿ ಪಳಗಿರುವ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಸೆಣಸಾಡಬೇಕಿದೆ.

Advertisement

ಚಿಕ್ಕೋಡಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಸೇರಿದಂತೆ ಒಬ್ಬರಿಗಿಂತ ಒಬ್ಬರು ಘಟಾನುಘಟಿ ನಾಯಕರಿದ್ದಾರೆ. ಹಲವಾರು ವರ್ಷಗಳಿಂದ ಈ ನಾಯಕರು ತಮ್ಮ ಕ್ಷೇತ್ರವನ್ನು ಆಳಿಕೊಂಡು ಬಂದವರು. ಪ್ರತಿಯೊಬ್ಬರಿಗೂ 20ರಿಂದ 30 ವರ್ಷದ ರಾಜಕೀಯ ಅನುಭವವಿದೆ. ಈಗ ಈ ನಾಯಕರು ರಾಜಕೀಯದಲ್ಲಿ ಈಗಷ್ಟೇ ಕಾಲಿಟ್ಟಿರುವ ಪ್ರಿಯಾಂಕಾ ಅವರ ಮುಂದೆ ನಿಲ್ಲಬೇಕಾದ ಹಾಗೂ ಕೈ ಮುಗಿಯಬೇಕಾದ ಪರಿಸ್ಥಿತಿ ಬಂದಿದೆ.

ಬೆಳಗಾವಿ ಕ್ಷೇತ್ರದಲ್ಲಿ ಸಹ ಮೃಣಾಲ್‌ ಹಾದಿ ಅಂದುಕೊಂಡಷ್ಟು ಸುಗಮವಾಗಿಲ್ಲ. ಕ್ಷೇತ್ರದಲ್ಲಿ ಐದು ಜನ ಕಾಂಗ್ರೆಸ್‌ ಶಾಸಕರಿದ್ದರೂ ನಿರಾಳವಾಗಿ ಇರುವಂತಿಲ್ಲ. ಆದರೆ ತಾಯಿ ಲಕ್ಷ್ಮೀ ಹೆಬ್ಟಾಳಕರ ಅವರ ತಂತ್ರಗಾರಿಕೆಯ ಬೆಂಬಲ ಇದೆ. ಜತೆಗೆ ಜಾತಿ ಲೆಕ್ಕಾಚಾರ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಮೃಣಾಲ್‌ ಹೆಬ್ಬಾಳಕರ;ಸಿವಿಲ್‌ ಎಂಜಿನಿಯರ್‌
31 ವರ್ಷದ ಮೃಣಾಲ್‌ ರವೀಂದ್ರ ಹೆಬ್ಬಾಳಕರ ಸಿವಿಲ್‌ ಎಂಜಿನಿಯರ್‌ ಪದವೀಧರ. ವಿವಾಹಿತರು. 2013ರಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯ. ಪ್ರಸ್ತುತ ಕಾಂಗ್ರೆಸ್‌ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ. ಮೃಣಾಲ್‌ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕರು. ಸವದತ್ತಿ ಹರ್ಷಾ ಶುಗರ್ಸ್‌ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಭಾವಿ ರಾಜಕಾರಣಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ.

ಪ್ರಿಯಾಂಕಾ ಜಾರಕಿಹೊಳಿ; ಎಂಬಿಎ ಪದವೀಧರೆ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ 27 ವರ್ಷದ ಪ್ರಿಯಾಂಕಾ ಎಂಬಿಎ ಪದವೀಧರೆ. ರಾಜಕೀಯ ಕ್ಷೇತ್ರಕ್ಕೆ ಹೊಸಬರೆನಿಸಿದರೂ ಸಾಮಾಜಿಕ ಸೇವೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸತೀಶ ಶುಗರ್ಸ್‌, ಬೆಳಗಾವಿ ಶುಗರ್ಸ್‌, ವೆಸ್ಟರ್ನ್ ಘಾಟ್‌ ಇನಾ#† ಲಿಮಿಟೆಡ್‌, ದೆಹಲಿ ಬ್ರಾಡ್‌ಕಾಸ್ಟಿಂಗ್‌ ಕಂಪನಿ ಸೇರಿದಂತೆ ವಿವಿಧ ಸಂಘ ಸಂಸ್ಥೆ, ಕಂಪನಿಗಳ ನಿರ್ದೇಶಕರಾಗಿದ್ದಾರೆ.

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next