Advertisement

“ಲೋಕಸಭಾ ಉಪ ಚುನಾವಣೆ ಬೇಕಿರಲಿಲ್ಲ

06:15 AM Oct 09, 2018 | Team Udayavani |

‘ಬೆಂಗಳೂರು: ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಬಗ್ಗೆ ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಈ ಚುನಾವಣೆ “ಬೇಕಿರಲಿಲ್ಲ’ ಅನ್ನುವ ಅಭಿಪ್ರಾಯ ಕೆಲವು ಕಾನೂನು ತಜ್ಞರಿಂದ ವ್ಯಕ್ತವಾಗಿದೆ.

Advertisement

ಹಾಲಿ ಲೋಕಸಭೆಯ ಅವಧಿ ಕೊನೆಗೊಳ್ಳಲು ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಈ ಸನ್ನಿವೇಶದಲ್ಲಿ ಉಪಚುನಾವಣೆ ನಡೆಸುವುದು “ನ್ಯಾಷನಲ್‌ ವೇಸ್ಟ್‌’ ಮತ್ತು ಇದು ಕಾನೂನಿಗಿಂತ “ಕಾಮನ್‌ಸೆನ್ಸ್‌’ ಪ್ರಶ್ನೆ ಎಂಬುದು ಕಾನೂನು ತಜ್ಞರ ಅಭಿಪ್ರಾಯದ ಹೊರಣವಾಗಿದೆ.

ಜತೆಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗದ “ಪರಮಾಧಿಕಾರ’ ಆಗಿದೆ. ಒಮ್ಮೆ ಚುನಾವಣಾ ಪ್ರಕ್ರಿಯೆ ಅಧೀಕೃತವಾಗಿ ಆರಂಭಗೊಂಡ ಮೇಲೆ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡುವಂತಿಲ್ಲ ಎಂಬುದು ಕಾನೂನು ರೀತಿ ಸರಿ. ಹಾಗಂತ, ಪ್ರಶ್ನೆ ಮಾಡಬಾರದು ಎಂದೇನಿಲ್ಲ. ಯಾರಾದರೂ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು ಅಂತಲೂ ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಶಾಸನಸಭೆಯ ಯಾವುದೇ ಕ್ಷೇತ್ರ ತೆರವುಗೊಂಡ 6 ತಿಂಗಳಲ್ಲಿ ಚುನಾವಣೆ ನಡೆಯಬೇಕು ಅಥವಾ ಚುನಾಯಿತರಾದವರಿಗೆ ಕನಿಷ್ಠ 6 ತಿಂಗಳಾದರೂ ಅವಧಿ ಸಿಗಬೇಕು ಎಂದು ಕಾನೂನು ಹೇಳುತ್ತದೆ. ಅದರಂತೆ, ಮೂರು ಲೋಕಸಭಾ ಕ್ಷೇತ್ರಗಳು ತೆರವುಗೊಂಡ ದಿನದಿಂದ ಲೆಕ್ಕ ಹಾಕಿದರೆ, ಆರು ತಿಂಗಳೊಳಗಾಗಿ ಚುನಾವಣೆ ನಡೆಸಬೇಕು ಎಂಬ ಕಾನೂನು ಸರಿ ಹೋಗುತ್ತದೆ. ಆದರೆ, ಚುನಾಯಿತರಾದವರಿಗೆ ಕನಿಷ್ಠ 6 ತಿಂಗಳು ಅವಧಿ ಸಿಗಬೇಕು ಎಂಬ ಕಾನೂನಿಗೆ ಈಗಿನ ಸನ್ನಿವೇಶದಲ್ಲಿ ಖಾತರಿ ಸಿಗುವುದು ಕಷ್ಟ. ಏಕೆಂದರೆ, 2019ರ ಮೇ ತಿಂಗಳಲ್ಲಿ ಹಾಲಿ ಲೋಕಸಭೆಯ ಅವಧಿ ಪೂರ್ಣಗೊಳ್ಳಲಿದೆ. ಅವಧಿಗೆ ಮುನ್ನವೇ ಚುನಾವಣೆ ನಡೆಸಬೇಕಾದ ಸಂದರ್ಭ ಸೃಷ್ಟಿಯಾದರೆ ಈ ಉಪ ಚುನಾವಣೆಗಳ ಕತೆ ಏನು ಅನ್ನುವುದು ಕೆಲ ಕಾನೂನು ತಜ್ಞರ ಪ್ರಶ್ನೆಯಾಗಿದೆ.

“ಚುನಾವಣೆ ನಡೆಸುವುದು ಆಯೋಗದ ಪರಮಾಧಿಕಾರ. ಅದರಂತೆ, ಒಂದು ಕ್ಷೇತ್ರ ತೆರವುಗೊಂಡ 6 ತಿಂಗಳೊಳಗಾಗಿ ಆ ಕ್ಷೇತ್ರಕ್ಕೆ ಕಡ್ಡಾಯವಾಗಿ ಚುನಾವಣೆ ನಡೆಯಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಇದರಲ್ಲಿ ಒಂದು ವಿನಾಯ್ತಿ ಇದೆ, ಒಂದು ವೇಳೆ ಮುಕ್ತಾಯದ ಅವಧಿ 1 ವರ್ಷದೊಳಗೆ ಇದ್ದರೆ, ಚುನಾವಣೆ ನಡೆಸುವ ಅಥವಾ ನಡೆಸದೇ ಇರುವ ಪರಮಾಧಿಕಾರವೂ ಚುನಾವಣಾ ಆಯೋಗಕ್ಕೆ ಇದೆ. ಇಷ್ಟೊಂದು ಅಲ್ಪಾವಧಿಗೆ ಚುನಾವಣೆ ನಡೆಸುವುದು ನನ್ನ ದೃಷ್ಟಿಯಲ್ಲಿ ಅದೊಂದು “ನ್ಯಾಷನಲ್‌ ವೇಸ್ಟ್‌’. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ. ಆದರೆ, ರಾಜಕೀಯ ಪಕ್ಷಗಳು ಮನವಿ ಮಾಡಿಕೊಂಡರೆ ಆಯೋಗ ಅಧಿಸೂಚನೆಯನ್ನು ವಾಪಸ್‌ ಪಡೆದುಕೊಳ್ಳಬಹುದು’.
– ಬಿ.ವಿ. ಆಚಾರ್ಯ, ಮಾಜಿ ಅಡ್ವೋಕೇಟ್‌ ಜನರಲ್‌.

Advertisement

“ತೆರವುಗೊಂಡ ಕ್ಷೇತ್ರಕ್ಕೆ 6 ತಿಂಗಳಲ್ಲಿ ಚುನಾವಣೆ ನಡೆಸಲು ಕಾನೂನಿನಲ್ಲಿ ಅವಕಾಶವಿರಬಹುದು. ಆದರೆ, ಪ್ರಾಯೋಗಿಕವಾಗಿ ಅದರ ಅವಶ್ಯಕತೆ ಇರಲಿಲ್ಲ. ಕಾನೂನಿನ ಜತೆಗೆ ಪ್ರಸ್ತುತ ಸನ್ನಿವೇಶವನ್ನೂ ಪರಿಗಣಿಸಬೇಕು. ಕೇವಲ ನಾಲ್ಕೈದು ತಿಂಗಳಿಗೆ ಇಷ್ಟೊಂದು ಹಣ ಖರ್ಚು ಮಾಡಬೇಕಾ? ಆಯ್ಕೆಯಾದವರಿಗೂ ಇದರಿಂದ ಏನು ಪ್ರಯೋಜನ ಅನ್ನುವುದು ಯೋಚಿಸಬೇಕು. ಕಾನೂನು ಇದ್ದರೂ ಇದು “ಸಾಮಾನ್ಯ ತಿಳುವಳಿಕೆ’ಗೆ ಅನ್ವಯವಾಗುವುದಿಲ್ಲ’.
– ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌.

“ಚುನಾವಣೆ ನಡೆಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅದರಂತೆ, ಚುನಾವಣೆ ನಡೆಸುವ ಆಯೋಗದ ಕ್ರಮ ನ್ಯಾಯಸಮ್ಮತವಾಗಿದೆ. ಕಾನೂನಾತ್ಮಕವಾಗಿ ಚುನಾವಣೆ ನಡೆಸಲು ಯಾವುದೇ ಅಡ್ಡಿಯಿಲ್ಲ’.
– ಪ್ರೊ. ರವಿವರ್ಮ ಕುಮಾರ್‌, ಮಾಜಿ ಅಡ್ವೋಕೇಟ್‌ ಜನರಲ್‌.

“ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿರುವುದಕ್ಕೆ ಕಾನೂನಿನ ಲೋಪ ಹುಡುಕಲು ಆಗುವುದಿಲ್ಲ. ರಾಜಕೀಯ ಸನ್ನಿವೇಶ, ವಿಶ್ಲೇಷಣೆ ಇಲ್ಲ ಮುಖ್ಯವಾಗುವುದಿಲ್ಲ. ಚುನಾವಣಾ ಆಯೋಗ ಕಾನೂನು ಮತ್ತು ನಿಯಮಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ’.
– ಎಂ.ಕೆ. ಹೆಗಡೆ, ಮಾಜಿ ರಾಜ್ಯ ಚುನಾವಣಾ ಆಯುಕ್ತ.

Advertisement

Udayavani is now on Telegram. Click here to join our channel and stay updated with the latest news.

Next