ಬದೌನ್ (ಉ.ಪ್ರದೇಶ): ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ರಾಜಕೀಯ ನೇತಾರರು ಹಲವು ರೀತಿಯ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿದ್ದಾರೆ. ತನಗೆ ಮತ ಹಾಕದಿದ್ದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎನ್ನುವ ರೀತಿಯಲ್ಲಿ ಅಭ್ಯರ್ಥಿಯೊಬ್ಬರು ಮತದಾರರಿಗೆ ಧಮ್ಕಿ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬದೌನ್ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಶಿವಪಾಲ್ ಯಾದವ್ ಅವರು ಮತದಾರರಿಗೆ ಎಚ್ಚರಿಕೆ ನೀಡಿದ ವಿಡಿಯೋ ವೈರಲ್ ಆಗಿದೆ. “ನಾವು ಎಲ್ಲರ ಮತವನ್ನು ಕೇಳುತ್ತೇವೆ, ನೀವು ನಮಗೆ ಮತ ಹಾಕಿದರೆ ಪರವಾಗಿಲ್ಲ. ಇಲ್ಲವಾದರೆ, ನಾವು ವಿಷಯವನ್ನು ನಂತರ ಬಗೆಹರಿಸುತ್ತೇವೆ.” ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ, ಸಹಸ್ವಾನ್ ನ ಎಸ್‌ಪಿ ಶಾಸಕ ಬ್ರಜೇಶ್ ಯಾದವ್ ಮತ್ತು ಶಿವಪಾಲ್ ಯಾದವ್ ಅವರ ಮಗ ಸಹ ಅವರೊಂದಿಗೆ ವೇದಿಕೆಯಲ್ಲಿದ್ದಾರೆ. ಈ ಮಾತುಗಳನ್ನು ಎಲ್ಲಿ ಮತ್ತು ಯಾವಾಗ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಶುಕ್ರವಾರ ಸ್ಪಷ್ಟನೆ ನೀಡಿರುವ ಶಾಸಕ ಬ್ರಜೇಶ್ ಯಾದವ್, “ವಿಷಯವನ್ನು ತಿರುಚಿ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಇದು ಮಾರ್ಚ್ 15 ರಂದು ಶಿವಪಾಲ್ ಯಾದವ್ ಅವರು ಗುನ್ನೌರ್ ನಲ್ಲಿ ಮಾಡಿದ ಭಾಷಣದ ವೀಡಿಯೊವಾಗಿದೆ. ಅವರು ಬದೌನ್ ನ ಬಿಲ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಹೇಳಿಕೆ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈತನ್ಮಧ್ಯೆ, ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ಅವರು, “ನಾವು ವೀಡಿಯೊವನ್ನು ಪತ್ತೆಹಚ್ಚಿದ್ದೇವೆ. ಈ ವೀಡಿಯೊದ ಬಗ್ಗೆ ಮಾಹಿತಿಯನ್ನು ಯುಪಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಕೇಳಿದೆ. ವೀಡಿಯೊದ ವಿಷಯಗಳನ್ನು ತನಿಖೆ ನಡೆಸಲಾಗುತ್ತಿದೆ. ತನಿಖೆ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.
ಬದೌನ್ ನಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಅಂದರೆ ಮೇ 7ರಂದು ಬದೌನ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.