Advertisement
ಐದು ರಾಜ್ಯಗಳ ಪೈಕಿ ಪಕ್ಕದ ತೆಲಂಗಾಣ ತುಸು ಹೆಚ್ಚು ಕುತೂಹಲ ಹುಟ್ಟಿಸಿದೆ. ಮಗ್ಗುಲಲ್ಲೇ ಇದೆ ಎನ್ನುವುದಕ್ಕಿಂತ ಗಡಿ ಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ ಮೇಲೆ “ಬಾಗುನ್ನಾರಾ’ (ಚೆನ್ನಾಗಿದ್ದೀಯಾ) ಎನ್ನುವ ಕರುಳಬಳ್ಳಿ ಸಂಬಂಧ ಹೊಂದಿದೆ. ಅಲ್ಲದೇ ನಮ್ಮ ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತೆಲಂಗಾಣ ಅಖಾಡದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಕಾರ್ಯಕರ್ತರು, ಕೆಲವು ಮುಖಂಡರು ತಳಮಟ್ಟದಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
Related Articles
Advertisement
ಕಾಂಗ್ರೆಸ್‌ಗೆ ಭಾರೀ ವಿಶ್ವಾಸ: ಕರ್ನಾಟಕದಲ್ಲಿ “ಗ್ಯಾರಂಟಿ’ಗಳ ಮೂಲಕ ಅಧಿಕಾರಕ್ಕೇರಿರುವ ಕಾಂಗ್ರೆಸ್ ಪಕ್ಕದ ತೆಲಂಗಾಣದಲ್ಲೂ ಅದೇ ಜಾದೂ ಮಾಡಲು ಸಜ್ಜಾಗಿದೆ. ಉಚಿತ ಘೋಷಣೆಗಳನ್ನು ಈ ರಾಜ್ಯದಲ್ಲೂ ಜಾರಿ ಮಾಡುವುದಾಗಿ ಘೋಷಿಸಿದೆ. ಉತ್ತರದ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ನಡೆಸಿರುವ ರಾಷ್ಟ್ರೀಯ ನಾಯಕರು ತೆಲಂಗಾಣದಲ್ಲೂ ಧೂಳೆಬ್ಬಿಸಿದ್ದಾರೆ. ಖರ್ಗೆಗೆ ತಮ್ಮ ತವರಿನ ಪಕ್ಕದಲ್ಲೇ ಇರುವುದರಿಂದ ಸವಾಲಿನ ಜತೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಮುಖಂಡ ರೇವಂತ ರೆಡ್ಡಿ ವಿರುದ್ಧ ಜಗ್ಗಾರೆಡ್ಡಿ, ಚನ್ನಾರೆಡ್ಡಿ ಸೇರಿದಂತೆ ಹಲವು ನಾಯಕರು ಮುನಿಸಿಕೊಂಡಿದ್ದಾರೆ.
ಟ್ರಬಲ್ ಶೂಟರ್ ವೇಣುಗೋಪಾಲ ಮೂಲಕ ಖರ್ಗೆ ಕಠಿನ ಸಂದೇಶ ರವಾನಿಸಿ ಸದ್ಯಕ್ಕೆ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದು ಬೂದಿ ಮುಚ್ಚಿದ ಕೆಂಡದಂತಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕವೂ ಎದುರಾಗಿದೆ. ಉಚಿತ ಯೋಜನೆಗಳ ಜತೆಗೆ “ಪ್ರತ್ಯೇಕ ರಾಜ್ಯ’ ಮಾಡಿದ್ದು ನಾವೇ ಎಂಬ ಟ್ರಂಪ್ ಕಾರ್ಡ್‌ನೂ° ಬಳಸುತ್ತಿದ್ದಾರೆ. ಆಂಧ್ರ ಪ್ರದೇಶ ಸಿಎಂ ಜಗನ್‌ಮೋಹನ ರೆಡ್ಡಿ ಸಹೋದರಿ ಶರ್ಮಿಲಾ ಹೊಸ ಪಕ್ಷ ರಚಿಸಿದ್ದರೂ ಅಭ್ಯರ್ಥಿಗಳನ್ನು ಕಣ ಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.
ನೆಲೆ ಕಂಡುಕೊಳ್ಳಲು ಬಿಜೆಪಿ ಯತ್ನ: ದಕ್ಷಿಣ ಭಾರತದಲ್ಲಿ ತನ್ನ ನೆಲೆ ವೃದ್ಧಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ತೆಲಂಗಾಣ ರಾಜಕೀಯದಲ್ಲಿ ಕಮಲ ಪಡೆ ಸಾಧನೆ ಅಷ್ಟಕ್ಕಷ್ಟೆ. ಆದರೆ ಇತ್ತೀಚೆಗೆ ಅದರ ತಳಮಟ್ಟದ ಸಾಧನೆ ಕೊಂಚ ಸುಧಾರಿಸಿದೆ. ಪಾಲಿಕೆ ಚುನಾವಣೆಯಲ್ಲಿ 49 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪರ್ಧಾತ್ಮಕ ಛಾಯೆ ಮೂಡಿಸಿದೆ. ಮ್ಯಾಜಿಕ್ ಸಂಖ್ಯೆ 60 ಸ್ಥಾನ ಗೆಲ್ಲ ಲಾಗದಿದ್ದರೂ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಿಂಗ್ ಮೇಕರ್ ಆಗುವ ಉಮೇದಿನಲ್ಲಿದೆ. ಜನಸೇನಾ ಪಾರ್ಟಿ ಜತೆ ಚುನಾವಣೆ ಎದುರಿಸುತ್ತಿದ್ದರೂ ಮತಗಳಿಕೆ ಪ್ರಮಾಣ ಎಷ್ಟರ ಮಟ್ಟಿಗೆ ವೃದ್ಧಿ ಯಾಗಲಿದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ವಿಶೇಷ ಎಂದರೆ ಬಿಜೆಪಿ ಬಹುತೇಕ ಹೊರಗಿ ನಿಂದ ಬಂದವರಿಗೆ ಟಿಕೆಟ್ ನೀಡಿದೆ. ಮೂಲ ಬಿಜೆಪಿಗರು ಐವರು ಮಾತ್ರ ಕಣದಲ್ಲಿದ್ದಾರೆ. ಚುನಾವಣೆ ನೇತೃತ್ವ ವಹಿಸಿಕೊಂಡಿರುವ ಕಿಶನ್ ರೆಡ್ಡಿ ಜಾದೂ ಮಾಡುವ ತವಕದಲ್ಲಿದ್ದಾರೆ!
ಪೋಸ್ಟರ್ ವಾರ್ ಜೋರು: ಹೋರಾಟದ ನೆಲ ತೆಲಂಗಾಣದಲ್ಲಿ ಆರೋಪ-ಪ್ರತ್ಯಾರೋಪವೂ ಜೋರಾಗಿದೆ. ಕಾಂಗ್ರೆಸ್ ಪ್ರಚಾರ ವೈಖರಿ ಕೊಂಚ ಬಿರುಸಾಗಿಯೇ ಇದೆ. ಮೋದಿ ಕೈಯಲ್ಲಿ ಕೆಸಿಆರ್, ಓವೈಸಿ ನಲಿಯುತ್ತಿರುವ ಪೋಸ್ಟರ್ ಸಾಕಷ್ಟು ಸದ್ದು ಮಾಡಿದೆ. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಓವೈಸಿ ಇಂಥ ನಾಟಕ ತೆಲಂಗಾಣದಲ್ಲಿ ನಡೆಯಲ್ಲ. ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂಬ ತಿರುಗೇಟು ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷ “ಬುಕ್ ಮೈ ಸಿಎಂ’ ಎಂದು ಕುಚೋದ್ಯ ಮಾಡಿದೆ. ಬಿಜೆಪಿ ಕಾಲೆಳೆದಿರುವ ಟಿಆರ್‌ಎಸ್ ಮೋದಿಗೆ ರಾವಣ ರೂಪ ನೀಡಿದೆ.
ದಲಿತರ ಮೇಲೆ ಎಲ್ಲರ ಕಣ್ಣು: ತೆಲಂಗಾಣ ರಾಜಕೀಯದಲ್ಲಿ ದಲಿತರ ಮತಗಳ ಮೇಲೆ ಎಲ್ಲ ಪಕ್ಷಗಳ ಕಣ್ಣು ನೆಟ್ಟಿದೆ. ಒಂದು ಅಂದಾಜಿನ ಪ್ರಕಾರ ಶೇ.17ರಷ್ಟು ದಲಿತರು, ಶೇ.11ರಷ್ಟು ಪರಿಶಿಷ್ಟ ಪಂಗಡದ ಮತದಾರರಿದ್ದಾರೆ. ಇವರೇ ನಿರ್ಣಾಯಕ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಇದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್‌ಸಿ-ಎಸ್‌ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ನಾಲ್ಕು ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದೆ. ಬಿಜೆಪಿ ಸಹ ದಲಿತರ ಶ್ರೇಯೋಭಿವೃದ್ಧಿಗೆ ಹಲವು ಘೋಷಣೆ ಮಾಡಿದೆ. ಟಿಆರ್‌ಎಸ್ ತನ್ನ ಮತ ಬ್ಯಾಂಕ್ ಚದುರಿ ಹೋಗದಂತೆ ಎಚ್ಚರಿಕೆ ವಹಿಸಿದೆ. ಕಾಂಗ್ರೆಸ್ ಹಾಗೂ ಟಿಆರ್‌ಎಸ್ ಮುಸ್ಲಿಂ ಮತದಾರರ ಮೇಲೂ ಅಷ್ಟೇ ಪ್ರಮಾಣದ ಪ್ರೀತಿ ತೋರಿಸಿವೆ.ಸಮಬಲದ ಕಾದಾಟ, ತಂತ್ರ-ಪ್ರತಿತಂತ್ರ, ಆರೋಪ-ಪ್ರತ್ಯಾ ರೋಪ ಇನ್ನಷ್ಟು ತಾರಕಕ್ಕೇರುವುದು ಖಚಿತವಾಗಿದೆ. ಮತದಾರರ ಓಲೈಕೆಗೆ ಇನ್ನಷ್ಟು ಉಚಿತ ಭರವಸೆಗಳು, ಯೋಜನೆಗಳು ಘೋಷಣೆ ಯಾಗಲಿವೆ. ಆದರೆ ನಿರ್ಣಾಯಕ ಎನಿಸಿರುವ ಹಿಂದುಳಿದ ವರ್ಗ, ಎಸ್‌ಸಿ-ಎಸ್‌ಟಿ ಮತದಾರರು ಯಾರ ಕೈ ಹಿಡಿಯುತ್ತಾರೋ ಅವರು ಗದ್ದುಗೆ ಏರಲಿದ್ದಾರೆ. ಕೆಸಿಆರ್ 3ನೇ ಬಾರಿ ಗೆದ್ದು ಮಗನಿಗೆ ಪಟ್ಟ ಬಿಟ್ಟು ಕೊಟ್ಟು ಲೋಕಸಭೆ ಚುನಾವಣೆ ವೇಳೆಗೆ ರಾಷ್ಟ್ರ ರಾಜ ಕಾರಣದತ್ತ ಹೋಗುವ ಇರಾದೆಯನ್ನೂ ಹೊಂದಿದ್ದಾರೆ. ಆದರೆ ಇದು ಅಷ್ಟು ಸುಲಭವೂ ಅಲ್ಲ ಎನ್ನುವುದು ಅವರಿಗೂ ಗೊತ್ತಿದೆ. ನ.30ರಂದು ನಡೆಯುವ ಮತದಾನ, ಡಿ.3ರ ಎಣಿಕೆ ವೇಳೆಗೆ ಎಲ್ಲವೂ ಸ್ಪಷ್ಟವಾಗಲಿದೆ. ಹಲವು ಸಮೀಕ್ಷೆಗಳು “ಅತಂತ್ರ ಸರಕಾರ’ದ ಮುನ್ಸೂಚನೆ ನೀಡಿದ್ದರೂ ಯಾರ ತಂತ್ರ ಫಲಿಸಲಿದೆ ಎನ್ನುವುದು ರೋಚಕವಾಗಿದೆ. ವರ್ಣರಂಜಿತ ರಾಜಕಾರಣಿ, ಅಖಂಡ ಆಂಧ್ರದ ಸಿಎಂ ಆಗಿದ್ದ, ಹೈದ್ರಾಬಾದ್‌ಗೆ ಐಟಿ-ಬಿಟಿ ಪರಿಚಯಿಸಿದ್ದ ಚಂದ್ರಬಾಬು ನಾಯ್ಡು ಈ ಬಾರಿ “ಸ್ಕಿಲ್ ಡೆವಲಪ್‌ಮೆಂಟ್’ ಹಗರಣದಲ್ಲಿ ಸಿಲುಕಿ ಕಣದಿಂದ ಉಳಿದಿದ್ದಾರೆ ಎಂಬುದು ವಿಶೇಷ. – ಚನ್ನು ಮೂಲಿಮನಿ