ಹಾಸನ: ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದ ಬೇಲೂರು 2008ರ ವಿಧಾನಸಭಾ ಚುನಾವಣೆಯ ವೇಳೆಗೆ ಸಾಮಾನ್ಯ ಮತಕ್ಷೇತ್ರವಾಗಿ ಬದಲಾಯಿತು. ಅಂದಿನಿಂದ ನಡೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಸರದಿಯಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಈಗ ಎದುರಾಗಿರುವ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ಅವರ ಸಂಪೂರ್ಣ ಸಹಕಾರವನ್ನು ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ನಂಬಿಕೊಂಡಿದೆ.
3ನೇ ಸ್ಥಾನಕ್ಕೆ ಕುಸಿದ ಲಿಂಗೇಶ್: 2018ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಗೆದ್ದಿದ್ದ ಜೆಡಿಎಸ್‌ನ ಕೆ.ಎಸ್.ಲಿಂಗೇಶ್ ಅವರು 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆಗಿಳಿದರೂ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್‌ನ ಬಿ.ಶಿವರಾಮು ಅವರು ಈಗಲೂ ಬೇಲೂರು ಕ್ಷೇತ್ರದಲ್ಲಿ ನಿಕಟ ಸಂಪರ್ಕವಿರಿಸಿಕೊಂಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಾಕಾಂಕ್ಷಿಯಾಗಿ ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ.
ಕಾಂಗ್ರೆಸ್‌ಗೆ ಸಮರ್ಥ ನಾಯಕರ ಕೊರತೆ: ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರೇಯಸ್ ಪಟೇಲ್ ಅವರು ಶಿವರಾಮು ಅವರೊಂದಿಗೆ ಉತ್ತಮ ಸಂಬಂಧವ ನ್ನೇನೂ ಹೊಂದಿದಂತಿಲ್ಲ. ಹಾಗಾಗಿ ಶಿವರಾಮು ಮೌನವಾಗಿದ್ದಾರೆ. ಮಾಜಿ ಶಾಸಕ ದಿ.ರುದ್ರೇಶಗೌಡರ ಕುಟುಂಬದವರು ಕಾಂಗ್ರೆಸ್‌ನಲ್ಲಿದ್ದರೂ ರುದ್ರೇಶ ಗೌಡರು ಜಿಪಂ ಅಧ್ಯಕ್ಷರಾಗಿದ್ದು, ಸಂಸದರಾಗಿದ್ದು ಜೆಡಿಎಸ್‌ನಿಂದ. ಹಾಗಾಗಿ ಜೆಡಿಎಸ್ ಮೇಲೆ ರುದ್ರೇಶಗೌಡ ಕುಟುಂಬದವರಿಗೆ ಹೆಚ್ಚು ರಾಜಕೀಯ ಮತ್ಸರವೇನೂ ಇಲ್ಲ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಗ್ರಾನೈಟ್ ರಾಜಶೇಖರ್ ಇನ್ನೂ ಭದ್ರ ನೆಲೆ ಕಂಡುಕೊಂಡಂತಿಲ್ಲ. ಈ ಬೆಳವಣಿಗೆಯಿಂದಾಗಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೋಕ ಸಭಾ ಚುನಾವಣೆಯಲ್ಲಿ ನೇತೃತ್ವ ವಹಿಸಿ ಕೊಂಡು ಪಕ್ಷದ ಅಭ್ಯರ್ಥಿ ಪರ ಕಟಿಬದ್ಧವಾಗಿ ಹೋರಾ ಡುವ ಸಮರ್ಥ ನಾಯಕರ ಕೊರತೆ ಎದ್ದು ಕಾಣುತ್ತಿದೆ.
ಭಾರೀ ಬಹುಮತ ಪಡೆಯಲು ಕಾರ್ಯತಂತ್ರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪರಾಭವ ಅಭ್ಯರ್ಥಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಅವರು ಈಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಕೂಡ. ತಮ್ಮ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಕಾಂಗ್ರೆಸ್‌ನಲ್ಲಿರುವ ನಾಯಕತ್ವದ ಕೊರತೆ ಮತ್ತು ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ಅವರ ಸಂಪೂರ್ಣ ಸಹಕಾರದೊಂದಿಗೆ ಜೆಡಿಎಸ್ ಬೇಲೂರು ಕ್ಷೇತ್ರದಲ್ಲಿ ಭಾರೀ ಬಹುಮತ ಪಡೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಶಾಸಕ ಸುರೇಶ್ ಅವರಿಗೆ ಕ್ಷೇತ್ರದಲ್ಲಿ ಜೆಡಿಎಸ್ ಬಲಗೊಂಡರೆ ಭವಿಷ್ಯದಲ್ಲಿ ತೊಡಕಾಗಬಹುದೆಂಬ ಆತಂಕವಿದ್ದರೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದಾಗ ಪಕ್ಷದ ಕೆಲ ಮುಖಂಡರು ನಡೆಸಿಕೊಂಡ ರೀತಿ, ಜಿಲ್ಲಾ ಬಿಜೆಪಿಗೆ ಹೊಸದಾಗಿ ಅಧ್ಯಕ್ಷರ ನೇಮಕದ ಸಂದರ್ಭ ದಲ್ಲಿ ಕಡೆಗಣಿಸಿದ ರೀತಿಯಿಂದ ಬೇಸರವಿದ್ದಂತಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಶತ್ರುವಿನ ಶತ್ರು ಮಿತ್ರ ಎಂಬಂತೆ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಕೊಟ್ಟು ತಮ್ಮ ರಾಜಕೀಯ ಸಾಮರ್ಥಯ ಪ್ರದರ್ಶಿಸುವ ಅನಿವಾ ರ್ಯತೆಯಿರುವುದು ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಯಸದೇ ಬರುತ್ತಿರುವ ಭಾಗ್ಯದಂತಾಗಿದೆ.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಅಂದಾಜು ಮತದಾರರು :
ಲಿಂಗಾಯತರು 54,000, ಒಕ್ಕಲಿಗರು 30,000, ಪರಿಶಿಷ್ಟಜಾತಿ 28,000, ಪರಿಶಿಷ್ಟಪಂಗಡ 17,000, ಮುಸ್ಲಿಮರು 10,000, ಕುರುಬರು 15,000, ವಿಶ್ವಕರ್ಮ 2000, ಬೆಸ್ತರು 2,000, ಕುಂಬಾರರು 2,000, ಸವಿತಾ ಸಮಾಜ 3,000, ಮಡಿವಾಳರು 2,000, ಮರಾಠರು 1,000, ಕ್ರೈಸ್ತರು 3,000, ಬ್ರಾಹ್ಮಣರು 2,000, ಜೈನರು 2,000, ಇತರರು 3,000 ಮತದಾರರಿದ್ದಾರೆ.
– ಎನ್.ನಂಜುಂಡೇಗೌಡ