Advertisement

ಜೆಡಿಎಸ್‌ 8ಕ್ಕೆ ಪಟ್ಟು, 6ಕ್ಕೆ ಕಾಂಗ್ರೆಸ್‌ ಓಕೆ

12:30 AM Feb 05, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಕಸರತ್ತಿಗೆ ಕೈ ಹಾಕಿದ್ದು, ಫೆ.20ರೊಳಗೆ ಜೆಡಿಎಸ್‌ ಜತೆಗೆ ಸೀಟು ಹಂಚಿಕೆಯ ಪ್ರಕ್ರಿಯೆ ಮುಕ್ತಾಯಗೊಳಿಸಲು ನಿರ್ಧರಿಸಿದೆ.

Advertisement

ಜೆಡಿಎಸ್‌ ಜತೆಗೆ ಸೀಟು ಹಂಚಿಕೆ ಮಾಡುವ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಸಭೆ ಕರೆದಿದ್ದು, ಜೆಡಿಎಸ್‌ಗೆ ಎಷ್ಟು ಕ್ಷೇತ್ರಗಳು ಮತ್ತು ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎನ್ನುವ ಕುರಿತಂತೆ ಫೆ.9ರಂದು ಚರ್ಚೆ ನಡೆಸಲಿದ್ದಾರೆ. ರಾಹುಲ್‌ ಗಾಂಧಿಯೊಂದಿಗಿನ ಸಭೆಯ ನಂತರ ಫೆಬ್ರವರಿ 10ರ ನಂತರ ಜೆಡಿಎಸ್‌ ನಾಯಕರೊಂದಿಗೆ ಸಭೆ ಸೇರಿ ಸೀಟು ಹಂಚಿಕೆ ಕುರಿತು ಚರ್ಚಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲವು ಶಕ್ತಿ ಹೊಂದಿದ್ದು, ಮೈತ್ರಿ ಲೆಕ್ಕಾಚಾರದಲ್ಲಿ ಆರು ಕ್ಷೇತ್ರಗಳನ್ನು ಬಿಟ್ಟುಕೊಡಲು ರಾಜ್ಯ ಕಾಂಗ್ರೆಸ್‌ ನಾಯಕರು ಮಾನಸಿಕವಾಗಿ ಸಿದ್ಧರಾಗಿದ್ದಾರೆಂದು ತಿಳಿದು ಬಂದಿದೆ. ಹಾಸನ, ಮಂಡ್ಯ ಹಾಗೂ ಶಿವಮೊಗ್ಗ, ಬೆಂಗಳೂರು ಉತ್ತರ ಹಾಗೂ ಉತ್ತರ ಕರ್ನಾಟಕದ ವಿಜಯಪುರ ಅಥವಾ ರಾಯಚೂರು ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಆಲೋಚನೆ ರಾಜ್ಯ ಕಾಂಗ್ರೆಸ್‌ ನಾಯಕರಿಗಿದ್ದು, ಅದರೊಂದಿಗೆ ಜೆಡಿಎಸ್‌ ಕೇಳುತ್ತಿರುವ ಬೀದರ್‌, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮೈಸೂರು, ಚಿತ್ರದುರ್ಗಗಳಲ್ಲಿ ಯಾವ ಕ್ಷೇತ್ರ ಬಿಟ್ಟು ಕೊಡಬೇಕು ಎನ್ನುವ ಗೊಂದಲ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಮುಂದುವರಿದಿದೆ.

ಜೆಡಿಎಸ್‌ ಬೇಡಿಕೆ ಇಟ್ಟಿರುವ ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಲಿ ಸಂಸದರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಕಾಂಗ್ರೆಸ್‌ಗಿಂತ ಹೆಚ್ಚಿನ ಮತ ಪಡೆದಿರುವುದರಿಂದ ಆ ಎರಡೂ ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿ ಜೆಡಿಎಸ್‌ ಬೇಡಿಕೆ ಇಟ್ಟಿದೆ. ಆದರೆ, ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟು ಕೊಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ವಿರೋಧವಿದೆ. ಇನ್ನು ಮೈಸೂರು ಹಾಗೂ ಚಿತ್ರದುರ್ಗದಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ ಜೆಡಿಎಸ್‌ ಮತ ಗಳಿಕೆ ಪ್ರಮಾಣ ಕಡಿಮೆಯಿದೆ ಎಂಬ ಕಾರಣಕ್ಕೆ ಆ ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್‌ ಹಿಂದೇಟು ಹಾಕುತ್ತಿದೆ. ವಿಶೇಷವಾಗಿ ಮೈಸೂರು ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ 8ಕ್ಕೆ ಪಟ್ಟು: ಆರಂಭದಲ್ಲಿ ಸೀಟು ಹಂಚಿಕೆ ಕುರಿತಂತೆ ಜೆಡಿಎಸ್‌ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಸಮನ್ವಯ ಸಮಿತಿಯಲ್ಲಿ ನಡೆದ ಮಾತುಕತೆಯ ನಂತರ ಕನಿಷ್ಠ ಎಂಟು ಕ್ಷೇತ್ರಗಳನ್ನು ನೀಡಬೇಕೆಂದು ಜೆಡಿಎಸ್‌ ಪಟ್ಟು ಹಿಡಿದಿರುವುದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಜೆಡಿಎಸ್‌ಗೆ ಆರಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡುವುದರಿಂದ ಕಾಂಗ್ರೆಸ್‌ಗೆ ನಷ್ಟವುಂಟಾಗಲಿದೆ ಎಂದು ಕೆಲವು ನಾಯಕರು ಜೆಡಿಎಸ್‌ ಒತ್ತಡಕ್ಕೆ ಮಣಿಯದಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Advertisement

ಮಾಸಾಂತ್ಯಕ್ಕೆ ಸಂಭಾವ್ಯರ ಪಟ್ಟಿ ಅಂತಿಮ?
ಜೆಡಿಎಸ್‌ ಜತೆಗೆ ಆದಷ್ಟು ಬೇಗ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದರೆ, ಪಕ್ಷದ ಸಂಭಾವ್ಯ ಅಭ್ಯರ್ಥಿಗಳನ್ನು ಮಾಸಾಂತ್ಯಕ್ಕೆ ಆಯ್ಕೆ ಮಾಡಿ, ಸ್ಕ್ರೀನಿಂಗ್‌ ಕಮಿಟಿಗೆ ಕಳುಹಿಸುವ ಲೆಕ್ಕಾಚಾರವನ್ನು ರಾಜ್ಯ ನಾಯಕರು ಹಾಕಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಲೋಕಸಭಾ ಕ್ಷೇತ್ರವಾರು ಆಕಾಂಕ್ಷಿಗಳ ಬಗ್ಗೆ ಬೆಂಗಳೂರು ಹಾಗೂ ಬೆಳಗಾವಿ ವಿಭಾಗದ ಜಿಲ್ಲಾ ಮುಖಂಡರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಅಭಿಪ್ರಾಯ ಪಡೆದುಕೊಂಡಿದ್ದು, ಮೈಸೂರು ಹಾಗೂ ಕಲಬುರಗಿ ವಿಭಾಗಗಳ ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಸ್ಕ್ರೀನಿಂಗ್‌ ಸಮಿತಿಗೆ ಕಳುಹಿಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

– ಶಂಕರ ಪಾಗೋಜ

Advertisement

Udayavani is now on Telegram. Click here to join our channel and stay updated with the latest news.

Next