Advertisement
ವಿಧಾನಸಭೆ ಚುನಾವಣೆ ನಂತರ ರಾಜ್ಯದ ಕೆಲ ನಾಯಕರ ಭೇಟಿಗಷ್ಟೇ ಅವಕಾಶ ಮಾಡಿಕೊಟ್ಟಿದ್ದ ಬಿಜೆಪಿ ವರಿಷ್ಠರು ಲೋಕಸಭೆ ಚುನಾವಣೆ ಸನ್ನಿಹಿತವಾದಂತೆ ಕರ್ನಾಟಕ ಬಿಜೆಪಿಯ ಒಬ್ಬೊಬ್ಬರೇ ನಾಯಕರ ಭೇಟಿಗೆ ಮನಸ್ಸು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದಲ್ಲಿ ಅಸಮಾಧಾನಗೊಂಡಿದ್ದ ಅನೇಕ ಹಿರಿಯರನ್ನೂ ಸಮಾಧಾನಪಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಇನ್ನು ದೆಹಲಿ ನಾಯಕರ ಭೇಟಿ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ವಿ.ಸೋಮಣ್ಣ, ನನಗೀಗ 73 ವರ್ಷ ವಯಸ್ಸಾಗಿದೆ. ಆರೋಗ್ಯವಾಗಿಯೇನೋ ಇದ್ದೇನೆ. ಆದರೆ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಿದೆ. ಆ ಕೆಲಸ ಮಾಡಬೇಕೆಂದು ಮನಸ್ಸಿಗೆ ಬಂದಿದೆ. ನಾನು ನಂಬಿರುವ ಅಜ್ಜ ಹೇಳಿದ್ದನ್ನು ಮಾಡುತ್ತಿದ್ದೇನೆ. 40 ವರ್ಷದಲ್ಲಿ ಗೋವಿಂದರಾಜನಗರ, ವಿಜಯನಗರ, ಬಿನ್ನಿಪೇಟೆಯಲ್ಲಿ ನನ್ನದೇ ಶ್ರಮ, ದುಡಿಮೆ ಇದೆ. ಅನೇಕರನ್ನು ಮುಖ್ಯವಾಹಿನಿಗೆ ತಂದಿದ್ದೇನೆ. ಲೋಕಸಭಾ ಕ್ಷೇತ್ರಗಳ ಕುರಿತು ಚರ್ಚಿಸುತ್ತಿದ್ದಾಗ ನೀವು ಏನಾಗಬೇಕೆಂದಿದ್ದೀರಿ ಎಂದು ಅಮಿತ್ ಶಾ ಕೇಳಿದರು. ನಿಮ್ಮ ನಾಯಕತ್ವದಲ್ಲಿ ಪಕ್ಷದಲ್ಲಿ ಕೆಲಸ ಮಾಡಬೇಕೆಂದಿದ್ದೇನೆ ಎಂದ ಕೂಡಲೇ ನೀವು ಪಕ್ಷದಲ್ಲಿದ್ದು ಕೆಲಸ ಮಾಡಬೇಕು ಎಂದಿದ್ದಾರೆ. ಮುಂದೇನು ಎಂದು ಕೇಳಿದಾಗ ನನಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೇನೆ. ಹೈದರಾಬಾದ್ ಕರ್ನಾಟಕದಲ್ಲಿ 5, ಮುಂಬೈ ಕರ್ನಾಟಕದಲ್ಲಿ 6, ಕರಾವಳಿ ಭಾಗದಲ್ಲಿ 3, ಮಧ್ಯ ಕರ್ನಾಟಕದಲ್ಲಿ 3, ಬೆಂಗಳೂರನಲ್ಲಿ 3 ಹಾಗೂ ಹಳೆ ಕರ್ನಾಟಕದಲ್ಲಿ 8 ಸ್ಥಾನಗಳು ಸೇರಿ 28 ಲೋಕಸಭಾ ಕ್ಷೇತ್ರಗಳಿವೆ. ಎಲ್ಲಿ ತುಂಬಾ ಕಠಿಣವಾದ ಮೂರು ಲೋಕಸಭಾ ಕ್ಷೇತ್ರ ಇದೆಯೋ ನೀವೇ ಆರಿಸಿಕೊಡಿ, ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದೇನೆ ಎಂದು ಹೇಳಿದರು.
Related Articles
ಒಳ್ಳೆಯ ನಡವಳಿಕೆ ಇಟ್ಟುಕೊಂಡು, ಸಾಮಾನ್ಯರ ಬಗ್ಗೆ ಕಾಳಜಿಯಿಂದ ಕೆಲಸ ಮಾಡಿದರೆ ಬೇರೊಂದು ರೂಪದಲ್ಲಿ ಸಹಾಯ ಆಗುತ್ತದೆ ಎನ್ನುವ ದೊಡ್ಡ ಅನುಭವವನ್ನು ನನಗೆ ದೆಹಲಿ ಭೇಟಿ ಮಾಡಿಸಿದೆ. ದೊಡ್ಡವರ ಮಾತು ಕೇಳಿದಾಗ ಆಗುವ ನೋವಿನ ಬಗ್ಗೆ ವರಿಷ್ಠರು ಅರ್ಥ ಮಾಡಿಸಿದ್ದಾರೆ. ಅವರೂ ಅರ್ಥ ಮಾಡಿಕೊಂಡಿದ್ದಾರೆ. ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಆವಶ್ಯಕತೆ ಇದೆ. ಅವರ ದೂರದೃಷ್ಟಿಗೆ ನಾವೆಲ್ಲ ಕೈಜೋಡಿಸಲು ಹೇಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ವರಿಷ್ಠರು ಬೆಂಗಳೂರಿಗೆ ಬರಲಿದ್ದಾರೆ.
-ವಿ.ಸೋಮಣ್ಣ, ಮಾಜಿ ಸಚಿವ
Advertisement