Advertisement

ಮತ ಚಲಾವಣೆಗೆ ಸಿದ್ಧರಾಗಿ

01:55 AM Apr 17, 2019 | mahesh |

ಮಹಾನಗರ: ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಎ. 18ರಂದು ಬೆಳಗ್ಗೆ 7 ಗಂಟೆಗೆ ಜಿಲ್ಲೆಯ 1,861 ಮತಗಟ್ಟೆಗಳಲ್ಲಿ ಮತದಾನ ಆರಂಭಗೊಳ್ಳಲಿದೆ. ಮತದಾರ ಯಾವುದೇ ಗೊಂದಲಗಳಿಲ್ಲದೆ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಮತ್ತು ವಿವಿಪ್ಯಾಟ್‌ ಬಳಸಿ ನಿರಾಳವಾಗಿ ಯಾವ ರೀತಿ ಮತ ಚಲಾಯಿಸಬಹುದು, ಮತಗಟ್ಟೆಗಳಲ್ಲಿ ಯಾವುದೆಲ್ಲ ಸೌಲಭ್ಯಗಳಿರುತ್ತವೆ, ಎಪಿಕ್‌ ಕಾರ್ಡ್‌ ಇಲ್ಲದಿದ್ದಲ್ಲಿ ಯಾವುದನ್ನು ಗುರುತು ದಾಖಲೆಯಾಗಿ ಬಳಸಬಹುದು ಎಂಬುದರ ಬಗ್ಗೆ ಚುನಾವಣ ಆಯೋಗ ಆವಶ್ಯಕ ಮಾಹಿತಿ ನೀಡಿದೆ.

Advertisement

ಮತದಾರರ ಫೋಟೋ ಗುರುತಿನ ಚೀಟಿ ಮತ್ತು ಮತದಾನದ ಚೀಟಿಯನ್ನು ಸಿದ್ಧವಾಗಿಟ್ಟುಕೊಂಡು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಮತಗಟ್ಟೆಯ ಒಂದನೇ ಅಧಿಕಾರಿ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರನ್ನು ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ. 2ನೇ ಮತಗಟ್ಟೆ ಅಧಿಕಾರಿ ನಿಗದಿತ ಬೆರಳಿಗೆ ಶಾಯಿಯ ಗುರುತು ಹಾಕುತ್ತಾರೆ, ಮತದಾನದ ಚೀಟಿ ನೀಡಿ ಸಹಿ ಪಡೆದುಕೊಳ್ಳುತ್ತಾರೆ. 3ನೇ ಮತಗಟ್ಟೆ ಅಧಿಕಾರಿ 3 ಮತದಾನದ ಚೀಟಿ ಪಡೆದು ಶಾಯಿ ಹಾಕಿರುವ ಬೆರಳನ್ನು ಪರಿಶೀಲಿಸುತ್ತಾರೆ.

ಮತ ಚಲಾವಣೆ
ಮತಗಟ್ಟೆಯ ಅಧ್ಯಕ್ಷಾಧಿಕಾರಿಯು ಮತದಾನದ ಸ್ಥಳಕ್ಕೆ ಹೋಗಿ ಎಂದು ಹೇಳಿದಾಗ ಅಲ್ಲಿಗೆ ತೆರಳಿ ಮತದಾನ ಮಾಡುವುದಕ್ಕೆ ಯಂತ್ರ ಸಿದ್ಧವಾಗಿರುವುದನ್ನು ಸೂಚಿಸುವ ಹಸುರು ದೀಪ ಉರಿಯುತ್ತಿದೆಯೇ ಎಂದು ನೋಡಬೇಕು. ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಹೆಸರು- ಚಿಹ್ನೆಯ ಎದುರು ಇರುವ ಕೆಂಪು ದೀಪ ಉರಿಯುತ್ತದೆ. ಬ್ಯಾಲೆಟ್‌ ಯೂನಿಟ್‌ನಲ್ಲಿ ಮತದಾರ ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರು/ ಚಿಹ್ನೆಯ ಎದುರು ಇರುವ ನೀಲಿ ಗುಂಡಿಯನ್ನು ಒತ್ತಬೇಕು.

ಮತದಾನ ಕೇಂದ್ರದಲ್ಲಿರುವ ಸೌಲಭ್ಯಗಳು
ಅಂಗವಿಕಲರಿಗೆ ಅನುಕೂಲವಾಗುವಂತೆ ರ್‍ಯಾಂಪ್‌ ಸೌಲಭ್ಯ, ವೀಲ್‌ ಚೇರ್‌, ಸಾರಿಗೆ ಸೌಲಭ್ಯ ಮತ್ತು ಸಹಾಯಕ ಸಿಬಂದಿ, ಮಂದ ದೃಷ್ಟಿ ಹೊಂದಿರುವವರಿಗೆ ಭೂತಗಾಜಿನ ಸೌಲಭ್ಯ, ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು.

ಇವಿಎಂ ಯಂತ್ರಗಳಲ್ಲಿ ಬ್ರೈಲ್‌ ಲಿಪಿ ಅಳವಡಿಕೆ. ಮತ ಕೇಂದ್ರಗಳಲ್ಲಿ ಮತದಾರರ ಸಹಾಯ ಕೇಂದ್ರ, ಮತಗಟ್ಟೆಯಲ್ಲಿ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆ, ಶೌಚಾಲಯ ಸೌಲಭ್ಯ ಮತದಾರರಿಗೆ ನೆರವಾಗಲು ಮಾರ್ಗಸೂಚಿಗಳ ಅಳವಡಿಕೆ, ಪುರುಷ ಮತ್ತು ಮಹಿಳಾ ಮತದಾರರಿಗೆ ಪ್ರತ್ಯೇಕ ಸಾಲು. ಪ್ರತಿ ಪುರುಷರು ಮತಗಟ್ಟೆ ಪ್ರವೇಶಿಸುವ ವೇಳೆಯಲ್ಲಿ ಇಬ್ಬರು ಮಹಿಳಾ ಮತದಾರರಿಗೆ ಪ್ರವೇಶಿಸಲು ಅನುವು, ಆಯ್ದ ಕಡೆಗಳಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿ/ ಸಿಬಂದಿಯಿರುವ ಮತಗಟ್ಟೆಗಳ ಸ್ಥಾಪನೆ, ಮತ ಕೇಂದ್ರಗಳಲ್ಲಿ ದೃಷ್ಟಿ ವಿಶೇಷ ಚೇತನರಿಗೆ ಬ್ರೈಲ್‌ ಲಿಪಿಯಲ್ಲಿ ಮಾದರಿ ಬ್ಯಾಲೆಟ್‌ ಪ್ರದರ್ಶನ ಮುಂತಾದ ಸೌಲಭ್ಯಗಳಿರುತ್ತವೆ.

Advertisement

ಎಪಿಕ್‌ ಕಾರ್ಡ್‌ ಇಲ್ಲದಿದ್ದರೆ ಬಳಸಬಹುದಾದ ಗುರುತು ಚೀಟಿಗಳು
ಚುನಾವಣ ಆಯೋಗದ ಸೂಚನೆಯಂತೆ ಎಪಿಕ್‌ ಕಾರ್ಡ್‌ ಇಲ್ಲದಿದ್ದರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌ , ಕೇಂದ್ರ/ರಾಜ್ಯ ಸಾರ್ವಜನಿಕ ವಲಯದ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ, ಅಂಚೆ ಕಚೇರಿ, /ಬ್ಯಾಂಕ್‌ಗಳಲ್ಲಿ ತೆರೆದ ಉಳಿತಾಯ ಖಾತೆಯ ಕುರಿತು ನೀಡಿದ ಭಾವಚಿತ್ರವಿರುವ ಪಾಸ್‌ಪುಸ್ತಕ, ಪಾನ್‌ಕಾರ್ಡ್‌, ಆರ್‌ಜಿಐ, ಎನ್‌ಪಿಆರ್‌ ಬಾಬ್ತು ಸ್ಮಾರ್ಟ್‌ಕಾರ್ಡ್‌, ಎಂಎನ್‌ಆರ್‌ಇಜಿಎ ಜಾಬ್‌ ಕಾರ್ಡ್‌, ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯು ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್‌ಕಾರ್ಡ್‌, ಭಾವಚಿತ್ರ ಇರುವ ಪಿಂಚಣಿ ದಾಖಲೆಗಳು, ಸಂಸದರು /ಶಾಸಕರುಗಳಿಗೆ ನೀಡಲಾದ ಅಧಿಕೃತ ಕಾರ್ಡ್‌, ಆಧಾರ್‌ ಕಾರ್ಡ್‌ ಗಳಲ್ಲಿ ಯಾವುದಾದರೂ ಒಂದನ್ನು ಮತದಾನಕ್ಕೆ ಗುರುತು ದಾಖಲೆಯಾಗಿ ಬಳಸಬಹುದು.

ಮುದ್ರಿತ ಪ್ರತಿಯನ್ನು ನೋಡಿ
ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಕ್ರಮಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡಿರುವ ಬ್ಯಾಲೆಟ್‌ ಚೀಟಿಯನ್ನು ವಿವಿಪ್ಯಾಟ್‌ ಮುದ್ರಣ ಯಂತ್ರವು ಮುದ್ರಿಸಿ ಕೊಡುತ್ತದೆ. ಬ್ಯಾಲೆಟ್‌ ಚೀಟಿಯು ಏಳು ಸೆಕೆಂಡ್‌ಗಳವರೆಗೆ ಕಾಣಿಸುತ್ತದೆ. ಅನಂತರ ಅದು ಹರಿದುಕೊಂಡು ಮುದ್ರಣ ಯಂತ್ರದ ಡಬ್ಬದೊಳಗೆ ಬೀಳುತ್ತದೆ. ಆಗ ಬೀಪ್‌ ಶಬ್ದ ಕೇಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next