Advertisement

Lok Sabha Elections; ರಾಜ್ಯದಲ್ಲಿ 5.42 ಕೋಟಿ ಮತದಾರರು

10:24 PM Mar 16, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 5.42 ಕೋಟಿ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 2.71 ಕೋಟಿ ಪುರುಷ ಮತ್ತು 2.70 ಕೋಟಿ ಮಹಿಳಾ ಮತ್ತು 4,933 ತೃತೀಯ ಲಿಂಗದ ಮತದಾರರಿದ್ದಾರೆ.

Advertisement

ಈ ಮಧ್ಯೆ ಮಾರ್ಚ್‌ 31ರೊಳಗೆ 18 ತುಂಬಲಿರುವವರಿಗೆ ಹಾಗೂ ನಾಮಪತ್ರ ಸಲ್ಲಿಕೆಗೆ ಹತ್ತು ದಿನಗಳ ಮೊದಲು ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗಿದ್ದು, ಅರ್ಹ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 5.10 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದರು. ಈ ಸಂಖ್ಯೆ ಈ ಬಾರಿ ಶೇ.6.18 ಏರಿಕೆಯಾಗಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಶೇ.5.12, ಪುರುಷ ಮತದಾರರ ಸಂಖ್ಯೆಯಲ್ಲಿ ಶೇ.7.20 ಮತ್ತು ತೃತೀಯ ಲಿಂಗಿಗಳಲ್ಲಿ ಶೇ.1.94 ಮತದಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 4.29 ಲಕ್ಷ ಅಂಗವಿಕಲ ಮತದಾರರಿದ್ದರೆ, ಈ ಬಾರಿ ಇದು 6.12 ಲಕ್ಷಕ್ಕೆ (ಶೇ.42.39) ಏರಿಕೆಯಾಗಿದೆ.

ರಾಜ್ಯದ ಲೋಕಸಭಾ ಚುನಾವಣೆ ಸಂಬಂಧಿ ಮಾಹಿತಿಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ, ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರಿನ 5,000 ಮತಗಟ್ಟೆಗಳಲ್ಲಿ ಶೇ.30ಕ್ಕಿಂತ ಕಡಿಮೆ ಮತದಾನವಾಗುತ್ತಿದ್ದು, ಈ ಕೇಂದ್ರಗಳಲ್ಲಿ ಮತ ಪ್ರಮಾಣ ಹೆಚ್ಚಿಸಲು ಚುನಾವಣ ಆಯೋಗವು ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದು ಮನೋಜ್‌ ಕುಮಾರ್‌ ಮೀನಾ ಹೇಳಿದ್ದಾರೆ.

ಮತಗಟ್ಟೆಯಲ್ಲಿ ಇರಬೇಕಾದ ಸೌಲಭ್ಯಗಳು
ಇಳಿಜಾರು ಸೌಲಭ್ಯ, ಕುಡಿಯುವ ನೀರು, ವಿದ್ಯುತ್ಛಕ್ತಿ, ಪೀಠೊಪಕರಣ, ನಿರೀಕ್ಷಣ ಕೊಠಡಿ, ಪುರುಷ ಮತ್ತು ಮಹಿಳಾ ಶೌಚಾಲಯ, ಸೂಚನಾ ಚಿಹ್ನೆ.

Advertisement

ಜಾರಿ ತಂಡಗಳು
ಕ್ಷಿಪ್ರ ಪಡೆಗಳು 2,357, ಸ್ಥಿರ ಕಣ್ಗಾವಲು ತಂಡಗಳು 2,669, ವಿಡಿಯೋ ಕಣ್ಗಾವಲು ತಂಡಗಳು 647, ಲೆಕ್ಕ ಪರಿಶೋಧಕ ತಂಡಗಳು 258, ವೀಡಿಯೋ ವೀಕ್ಷಣೆಗೆ 257 ತಂಡ ರಚಿಸಲಾಗಿದೆ.

ಚುನಾವಣೆ ಮುನ್ನ 537 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆ
ಚುನಾವಣೆ ಘೋಷಣೆಯಾಗುವ ಮುಂಚಿತವಾಗಿಯೇ, ಅಂದರೆ ಕಳೆದ 6 ತಿಂಗಳುಗಳಿಂದ ಚುನಾವಣ ಆಯೋಗದ ನಿರ್ದೇಶನದ ಮೇರೆಗೆ ವಿವಿಧ ಜಾರಿ ನಿರ್ದೇಶನಾಲಯಗಳು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹಗಳು, ಉಚಿತ ಉಡುಗೊರೆ ಮುಂತಾದವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಆಗಸ್ಟ್‌ ಒಂದರಿಂದ ಮಾರ್ಚ್‌ 14ರ ವರೆಗೆ 151.6 ಕೋಟಿ ರೂ., 42.14 ಕೋಟಿ ರೂ. ಮೌಲ್ಯದ ಮದ್ಯ, 126.47 ಕೋಟಿ ರೂ. ಮೌಲ್ಯದ ಡ್ರಗ್ಸ್‌, 71.433 ಕೋಟಿ ರೂ. ಮೌಲ್ಯದ ಚಿನ್ನ, 93 ಲಕ್ಷ ರೂ. ಮೌಲ್ಯದ ಬೆಳ್ಳಿ, 5 ಸಾವಿರ ಮೌಲ್ಯದ ಉಚಿತಗಳು, 144.90 ಕೋಟಿ ರೂ ಮೌಲ್ಯದ ಇತರ ಸರಕು ಸಹಿತ ಒಟ್ಟು 537.51 ಕೋಟಿ ರೂ. ಮೌಲ್ಯದ ಅಕ್ರಮಗಳನ್ನು ಪತ್ತೆ ಹಚ್ಚಲಾಗಿದೆ.

ಸಿವಿಜಿಲ್‌ ಆ್ಯಪ್‌ನಲ್ಲಿ ದೂರು ನೀಡಿ
ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ಸಿವಿಜಿಲ್‌ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ದಾಖಲಿಸಬಹುದು. ಅಪ್ಲಿಕೇಷನ್‌ ತೆರೆದು, ಉಲ್ಲಂಘನೆಯ ಪ್ರಕರಣವನ್ನು ಆಯ್ಕೆ ಮಾಡಿ, ಸ್ಥಳ ಮತ್ತು ಸಮಯ ಮತ್ತು ಛಾಯಾಚಿತ್ರ ಅಥವಾ ವೀಡಿಯೋವನ್ನು ಒಳಗೊಂಡು ಘಟನೆಯ ವಿವರವನ್ನು ಸಲ್ಲಿಸಬೇಕು. ದೂರುಗಳ ಪ್ರಗತಿಯನ್ನು ಟ್ರ್ಯಾಕ್‌ ಮಾಡಲು ಅಪ್ಲಿಕೇಷನ್‌ ಅವಕಾಶ ನೀಡುತ್ತದೆ.

ಮತಗಟ್ಟೆಗಳು
ಒಟ್ಟು ಮತಗಟ್ಟೆಗಳು -58,834
ನಗರದಲ್ಲಿರುವ ಮತಗಟ್ಟೆಗಳು – 21,595
ಗ್ರಾಮೀಣ ಪ್ರದೇಶದ ಮತಗಟ್ಟೆಗಳು- 37,239
ಹೆಚ್ಚು ಮತಗಟ್ಟೆಯಿರುವ ಲೋಕಸಭಾ ಕ್ಷೇತ್ರ- ಬೆಂಗಳೂರು ಉತ್ತರ (2,911)
ಕಡಿಮೆ ಮತಗಟ್ಟೆಯಿರುವ ಕ್ಷೇತ್ರ – ಉಡುಪಿ ಚಿಕ್ಕಮಗಳೂರು (1,842)
ಮಹಿಳೆಯರು ನಿರ್ವಹಿಸುವ ಮತಗಟ್ಟೆಗಳು -1,120
ಅಂಗವಿಕಲರು ಮತ್ತು ಯುವಕರು ನಿರ್ವಹಿಸುವ ಮತಗಟ್ಟೆ – ತಲಾ 224
ಸಾಂಪ್ರದಾಯಿಕ ಮತಗಟ್ಟೆಗಳು – 40
ವಿಷಯಾಧಾರಿತ ಮತಗಟ್ಟೆಗಳು 200

ಯುವ ಮತದಾರರು – 11,24,622
85 ವರ್ಷ ಮೀರಿದ ಮತದಾರರು – 5,70,168
ಅಂಗವಿಕಲ ಮತದಾರರು – 6,12,154
ಅತಿ ಹೆಚ್ಚು ಮತದಾರರಿದ ಲೋಕಸಭಾ ಕ್ಷೇತ್ರ – ಬೆಂಗಳೂರು ಉತ್ತರ (31,74,958)
ಅತಿ ಕಡಿಮೆ ಮತದಾರರಿರುವ ಲೋಕಸಭಾ ಕ್ಷೇತ್ರ – ಉಡುಪಿ-ಚಿಕ್ಕಮಗಳೂರು (15,72,958)
ಲಿಂಗಾನುಪಾತ – 999

 

Advertisement

Udayavani is now on Telegram. Click here to join our channel and stay updated with the latest news.

Next